ಹುಬ್ಬಳ್ಳಿ(ಅ.07): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ತಪ್ಪು ಮಾಡದಿದ್ದರೆ, ಲೆಕ್ಕಪತ್ರ ಸರಿಯಿದ್ದರೆ ಸಿಬಿಐಗೆ ಹೆದರಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಬಿಐ ಸ್ವತಂತ್ರ ಸಂಸ್ಥೆ, ಸುಮ್ಮನೆ ಯಾರ ಮನೆಯ ಮೇಲೂ ದಾಳಿ ಮಾಡಲ್ಲ. ಎರಡ್ಮೂರು ತಿಂಗಳು ದಾಖಲೆ ಕಲೆ ಹಾಕಿ, ಪೂರ್ವ ಸಿದ್ಧತೆಗಳೊಂದಿಗೆ ದಾಳಿ ಮಾಡುತ್ತಾರೆ. ಯುಪಿಎ ಸರ್ಕಾರವಿದ್ದಾಗ ಜಗನ್‌ಮೋಹನ್‌ ರೆಡ್ಡಿಯನ್ನು ಜೈಲಲ್ಲಿ ಇಟ್ಟಿದ್ದರು. ಅಮಿತ್‌ ಶಾ ಮೇಲೆ ಸುಳ್ಳು ಕೇಸ್‌ ಹಾಕಿದ್ದರು. ಆಗ ನಾವು ದೇಶದ ತುಂಬಾ ಹೋರಾಡಿರಲಿಲ್ಲ. ಅಮಿತ್‌ ಶಾ ಕಾನೂನು ಹೋರಾಟ ನಡೆಸಿದ್ದರು. ಈಗ ದೇಶದ ಗೃಹ ಮಂತ್ರಿ ಆಗಿದ್ದಾರೆ. ಕಾಂಗ್ರೆಸ್‌ನವರು ದೇಶ ಲೂಟಿ ಮಾಡಿದ್ದರು. ಈಗ ಒಂದೊಂದೆ ಪ್ರಕರಣಗಳು ಹೊರಗೆ ಬರುತ್ತಿವೆ. ಡಿಕೆಶಿ ಕಾನೂನು ಹೋರಾಟ ಮಾಡಲಿ, ಸಂಪಾದನೆ ಕುರಿತು ದಾಖಲೆಗಳನ್ನು ಕೊಡಲಿ. ತಪ್ಪಿಲ್ಲದಿದ್ದರೆ ಆರೋಪ ಮುಕ್ತರಾಗಿ ಹೊರಗೆ ಬರಲಿ ಎಂದರು.

50 ಲಕ್ಷ ಸಿಕ್ಕಿದ್ದೆಲ್ಲಿ? ಸಿಬಿಐಗೆ ಡಿಕೆ ಸಹೋದರರ ಸವಾಲ್!

ಬರೀ ಬೆಳಗ್ಗೆಯಿಂದ ಸಂಜೆವರೆಗೆ ರಾಜಕೀಯ ಪ್ರೇರಿತ ಎಂದು ಬಡಬಡಿಸುತ್ತಿದ್ದರೆ ಜನ ನಂಬುವುದಿಲ್ಲ. ಡಿಕೆಶಿ ಬಂಧಿಸಿದರೆ ನಾವು ಉಪಚುನಾವಣೆಯಲ್ಲಿ ಗೆಲ್ಲುತ್ತೇವೆಯೇ? ಬಂಧಿಸಿ ಗೆಲ್ಲುವ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಬಿಐ ದಾಳಿ ಉಪಚುನಾವಣೆ, ರಾಜಕೀಯ ಪ್ರೇರಿತ ಎನ್ನುವುದೆಲ್ಲ ಸುಳ್ಳು. ಡಿ.ಕೆ. ಶಿವಕುಮಾರ ಈ ನಾಟಕ ಮಾಡುವುದನ್ನು ಬಿಡಬೇಕು ಎಂದರು.