ಬೆಂಗಳೂರು(ಅ.07): ನಮ್ಮಗಳ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿ ವೇಳೆ ಸಿಕ್ಕಿರುವುದು 6.78 ಲಕ್ಷ ರು. ಮಾತ್ರ. ಆದರೆ, 57 ಲಕ್ಷ ರು. ಸಿಕ್ಕಿರುವುದಾಗಿ ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಉಳಿದ 50.22 ಲಕ್ಷ ರು. ಎಲ್ಲಿ ಸಿಕ್ಕಿದೆ ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು’ ಎಂದು ಡಿಕೆ ಸಹೋದರರು ಸವಾಲು ಹಾಕಿದ್ದಾರೆ.

ಈ ಸಂಬಂಧ ಮಂಗಳವಾರ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರೆ, ಅವರ ಸಹೋದರಾದ ಸಂಸದ ಡಿ.ಕೆ.ಸುರೇಶ್‌ ಅವರು ಟ್ವೀಟ್‌ ಮಾಡಿ, ‘ಸಿಬಿಐ ಅಧಿಕಾರಿಗಳು ಹೇಳಿರುವಂತೆ ನಮ್ಮ ಮನೆಯಲ್ಲಿ 57 ಲಕ್ಷ ರು. ಸಿಕ್ಕಿಲ್ಲ. ಸಿಕ್ಕಿರುವುದು 6.78 ಕೋಟಿ ರು. ಮಾತ್ರ. ಉಳಿದ ಹಣ ಎಲ್ಲಿ ಸಿಕ್ಕಿದ್ದು ಎಂದು ಅಧಿಕಾರಿಗಳೇ ಹೇಳಬೇಕು’ ಎಂದಿದ್ದಾರೆ.

ಅಲ್ಲದೆ, ‘ರಾಜಕೀಯದಲ್ಲಿ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಬೇಕಿದ್ದರೆ ಸಿಬಿಐ ಅಧಿಕಾರಿಗಳು ನೀಡಿರುವ ಪಂಚನಾಮೆಯನ್ನೂ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿ​ದ್ದಾ​ರೆ.

ವಿವರ ಬಹಿ​ರಂಗ​ಪ​ಡಿ​ಸಿ- ಡಿಕೆ​ಸು:

ಟ್ವೀಟ್‌ ಮಾಡಿರುವ ಡಿ.ಕೆ.ಸುರೇಶ್‌ ಅವರು, ‘ಸಿಬಿಐ ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಪಟ್ಟು 6.78 ಲಕ್ಷ ರು. ಸಿಕ್ಕಿದೆ. ಅದರಲ್ಲಿ ನನ್ನ ದೆಹಲಿ ನಿವಾಸದಲ್ಲಿ 1.57 ಲಕ್ಷ ರು., ಬೆಂಗಳೂರಿನ ನನ್ನ ಅಣ್ಣನ ಮನೆಯಲ್ಲಿ 1.71 ಲಕ್ಷ ರು., ಅವರ ಬೆಂಗಳೂರಿನ ಕಚೇರಿಯಲ್ಲಿ 3.5 ಲಕ್ಷ ರು. ಸಿಕ್ಕಿರುವುದನ್ನು ಸಿಬಿಐನವರು ಖಾತ್ರಿ ಪಡಿಸಿದ್ದಾರೆ. ಇನ್ನು, ನನ್ನ ಅಣ್ಣನ ದೆಹಲಿ ಮನೆ ಮತ್ತು ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿಲ್ಲ.’

‘ಹಾಗೆಯೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ. ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐಟಿ ಮತ್ತು ಇಡಿಗೆ ಕೊಟ್ಟದಾಖಲೆಗಳನ್ನೇ ಮತ್ತೊಮ್ಮೆ ಸಿಬಿಐ ಸ್ಪಷ್ಟನೆಗೆ ತೆಗೆದುಕೊಂಡಿದೆ. ಇನ್ನು, ಸಿಬಿಐ .57 ಲಕ್ಷ ಸಿಕ್ಕಿದ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಉಳಿದ 50.22 ಲಕ್ಷ ರು. ಎಲ್ಲಿ ಸಿಕ್ಕಿದೆ ಎಂದು ಸಿಬಿಐ ಸ್ಪಷ್ಪಪಡಿಸಲಿ’ ಎಂದು ಹೇಳಿದ್ದಾರೆ.

ಪಂಚನಾಮೆ ಬೇಕಾದ್ರೂ ಕೊಡ್ತೀವಿ:

ಕೆಪಿಸಿಸಿ ಕಚೇ​ರಿ​ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ತಮ್ಮ ಸಹೋದನ ಟ್ವೀಟ್‌ ಮಾಡಿರುವ ವಿಚಾರಗಳನ್ನೇ ಪುನರುಚ್ಚರಿಸಿದರು. ‘ನನ್ನ ಮತ್ತು ನನ್ನ ಸಹೋದರ ಮನೆಯಲ್ಲಿ ಸಿಕ್ಕಿರುವುದು 6.78 ಲಕ್ಷ ರು. ಮಾತ್ರ. ನಮ್ಮ ಸ್ನೇಹಿತರಾದ ಸಚಿನ್‌ ನಾರಾಯಣ ಅವರ ಮನೆಯಲ್ಲಿ ಅವರ ವ್ಯವಹಾರಕ್ಕೆ ಸಂಬಂಧಿಸಿದ 50 ಲಕ್ಷ ರು. ಸಿಕ್ಕಿದೆಯಂತೆ. ಆದರೆ ಈ ಬಗ್ಗೆ ಮಾತನಾಡಲು ಸಚಿನ್‌ ಇನ್ನೂ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಧವನಂ ಬಿಲ್ಡರ್ಸ್‌ ಬಳಿ ಇದ್ದ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ’ ಎಂದ​ರು.

‘ಇದಿಷ್ಟೂಸಿಬಿಐನವರ ಪಂಚನಾಮೆಯಲ್ಲಿ ಇರುವ ಮಾಹಿತಿ. ರಾಜಕಾರಣದಲ್ಲಿ ನಾವು ಯಾವುದನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ. ಬೇಕು ಎಂದರೆ ಪಂಚನಾಮೆ ಬಿಡುಗಡೆ ಮಾಡುತ್ತೇವೆ. ಗಾಯ ಆದವನಿಗೇ ಅದರ ನೋವು ತಿಳಿಯುವುದು, ನನ್ನ ಒಳಗೆ ಎಷ್ಟುನೋವಿದೆ ಅನ್ನೋದು ನನಗೆ ಮಾತ್ರ ಗೊತ್ತು. ಸಮಯ ಸಿಗಲಿ ಮಾತನಾಡೋಣ’ ಎಂದು ಎದೆಯ ಮೇಲೆ ಕೈ ಇಟ್ಟುಕೊಂಡು ಕೊಂಚ ಭಾವುಕರಾದರು.