* ನಾನು ಹತ್ತಾರು ಬಾರಿ ಆರ್‌ಎಸ್‌ಎಸ್ ಕಚೇರಿಗೆ ಹೋಗಿ ಬಂದಿದ್ದೇನೆ* ನಾಯಕತ್ವ ಬದಲಾವಣೆ ಚರ್ಚೆ ಬಂದಾಗ ಕೆಲವೊಂದು ಗೊಂದಲಗಳಿರುವುದು ಸಹಜ* ಸಿಎಂ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ
ಹುಬ್ಬಳ್ಳಿ(ಜು.25): ನಾವೇನು ಭಾರತ–ಪಾಕಿಸ್ತಾನದವರಲ್ಲ, ಪರಸ್ಪರ ಭೇಟಿಯಾಗದಿರೋಕೆ. ಒಂದೇ ಪಕ್ಷದಲ್ಲಿದ್ದೇವೆ, ಪರಸ್ಪರ ಭೇಟಿಯಾಗುತ್ತಿರುತ್ತೇವೆ. ಆದರೆ ಈಗ ಯಾಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಕುರಿತು ಪ್ರಶ್ನೆ ಮಾಡುತ್ತಿದ್ದೀರಿ?. ನಾನು ಹತ್ತಾರು ಬಾರಿ ಆರ್‌ಎಸ್‌ಎಸ್ ಕಚೇರಿಗೆ ಹೋಗಿ ಬಂದಿದ್ದೇನೆ. ನಿನ್ನೆಯ ಕೇಶವ ಕುಂಜ ಭೇಟಿಗೆ ಅಷ್ಟೊಂದು ಮಹತ್ವ ಏಕೆ ಕಲ್ಪಿಸುತ್ತಿದ್ದೀರಿ ಎಂದು ಮಾಧ್ಯಮದವರಿಗೆ ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಪ್ರಹ್ಲಾದ್ ಜೋಶಿ–ಬೊಮ್ಮಾಯಿ ಮತ್ತು ಆರ್‌ಎಸ್‌ಎಸ್ ಕಚೇರಿ ಭೇಟಿ ಕುರಿತು ಇಂದು(ಭಾನುವಾರ) ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಶೆಟ್ಟರ್, ಪ್ರಹ್ಲಾದ್ ಜೋಶಿ ಮತ್ತು ಬೊಮ್ಮಾಯಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಒಂದೇ ಕ್ಷೇತ್ರದವರಾಗಿದ್ದು, ಪ್ರವಾಹದ ಕುರಿತು ಚರ್ಚಿಸಲು ಬೊಮ್ಮಾಯಿ ಹೋಗಿದ್ದರು ಅಷ್ಟೇ ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ಕುರಿತು ವರಿಷ್ಠರ ಸಂದೇಶ?: ಸಚಿವ ಶೆಟ್ಟರ್ ಹೇಳಿದ್ದಿಷ್ಟು
ನಾಯಕತ್ವ ಬದಲಾವಣೆ ವಿಚಾರದ ಗೊಂದಲದಿಂದ ಆಡಳಿತ ಯಂತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆಡಳಿತ ತನ್ನ ಪಾಡಿದೆ ತಾನು ನಡೆಯುತ್ತಿದೆ. ಸಿಎಂ ಬದಲಾವಣೆ ಚರ್ಚೆ ಬಂದಾಗ ಕೆಲವೊಂದು ಗೊಂದಲಗಳಾಗಿರುವುದು ಸಹಜ. ಆದರೆ ಗೊಂದಲಗಳು ತನಗೆ ತಾನೇ ನಿವಾರಣೆಯಾಗುತ್ತವೆ. ಸಿಎಂ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. 75 ವರ್ಷವಾದವರನ್ನು ಸಿಎಂ ಹುದ್ದೆಯಲ್ಲಿ ಮುಂದುವರೆಸಬಾರದೆಂಬ ನಿಯಮ ಬಿಜೆಪಿಯಲ್ಲಿ ಇಲ್ಲ. ಸಿಎಂ ಹುದ್ದೆ ಖಾಲಿಯಿರದೇ ಇರುವಾಗ ಆ ಬಗ್ಗೆ ಚರ್ಚಿಸುವುದೇ ಅಪ್ರಸ್ತುತ. ಅವರ ಹುದ್ದೆ ಯಾರು ಅಲಂಕರಿಸುತ್ತಾರೆ ಅಂತ ಚರ್ಚಿಸೋದು ಈಗ ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
