Asianet Suvarna News Asianet Suvarna News

ಜನರ ಮಧ್ಯೆ ಇರಲು ಪ್ರಾಣ ಭಯ ಏಕೆ?: ಸಚಿವ ಹಾಲಪ್ಪ ಆಚಾರ್‌

*  ಭಯ ಇದ್ದವರು ಬೆಂಗಾವಲು ವಾಹನ ಪಡೆದಿರಬಹುದು
*  ನಾನು ಬೆಂಗಾವಲು ವಾಹನ ತಿರಸ್ಕಾರ ಮಾಡಿಲ್ಲ
*  ಅನಗತ್ಯವಾಗಿ ಬಳಸಲ್ಲ ಎಂದು ಹೇಳಿದ್ದೇನೆ
 

Minister Halappa Achar Talks Over Security grg
Author
Bengaluru, First Published Oct 11, 2021, 2:01 PM IST

ಕೊಪ್ಪಳ(ಅ.11):  ಕೇವಲ ರಸ್ತೆ, ಕಟ್ಟಡಗಳಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವೇ ಇಲ್ಲ. ಅದು ಶೈಕ್ಷಣಿಕವಾಗಿ ಅಭಿವೃದ್ಧಿಯಾದಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿಯಾದಂತೆ. ಆದ್ದರಿಂದ ಶಿಕ್ಷಕ ವೃತ್ತಿಯಲ್ಲಿರವವರಿಗೆ ನಮಗಿಂತಲೂ ಹೆಚ್ಚು ಹೊಣೆಗಾರಿಕೆ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಹೇಳಿದ್ದಾರೆ. 

ನಗರದ ಸರ್ಕಾರಿ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ(Government School) ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಬೆಂಗಳೂರು(Bengaluru) ಶಿಕ್ಷಕರ ಕಲ್ಯಾಣ ನಿಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ(Koppal) ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ, ಉಪನ್ಯಾಸಕರ ಸಂಘದ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಗುರುಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಿರ್ಧಿಷ್ಟ ಸಮಯದೊಳಗೆ ಗುರುಭವನ ಕಾಮಗಾರಿ ಪೂರ್ಣಗೊಳಿಸಿ. ಮುಖ್ಯಮಂತ್ರಿಗಳಿಗೂ ಅನುದಾನಕ್ಕೆ ಮನವಿ ಮಾಡಲಾಗುವುದು. ಎಲ್ಲರೂ ಒಗ್ಗೂಡಿ, ಆದಷ್ಟುಬೇಗನೆ ಕಾಮಗಾರಿ ಪೂರ್ಣಗೊಳಿಸೋಣ ಎಂದರು. ಈ ಭಾಗದವರು ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಇದರ ಪ್ರಗತಿಗೆ ಶಿಕ್ಷಕರು(Teachers) ಮನಸ್ಸು ಮಾಡಬೇಕು. ಇದಕ್ಕಾಗಿ ಶಿಕ್ಷಕರ ಬೆನ್ನಿಗೆ ನಾವು ನಿಲ್ಲಲು ಸಿದ್ಧರಿದ್ದೇವೆ. ಆದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಶೈಕ್ಷಣಿಕವಾಗಿ ಜಿಲ್ಲೆಯನ್ನು ಮೇಲ್ಪಂಕ್ತಿಯಲ್ಲಿ ನಿಲ್ಲಿಸಲು ಶಿಕ್ಷಕರೂ ಕೂಡಾ ಬದ್ಧರಾಗಬೇಕು. ಒಳ್ಳೆಯ ಶಿಕ್ಷಣ, ಸಂಸ್ಕೃತಿಯನ್ನು ಬೆಳೆಸಿ, ಮಕ್ಕಳನ್ನು(Children) ಒಳ್ಳೆಯ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದುತ್ತಾರೆ. ಸಮಾಜದಲ್ಲಿ ತಂದೆ- ತಾಯಿಯನ್ನು ಬಿಟ್ಟರೆ ಶಿಕ್ಷಕರಿಗೆ ಬಹುದೊಡ್ಡ ಸ್ಥಾನವಿದೆ. ರಾಜ್ಯದಲ್ಲಿ(Karnataka) ನಂಬರ್‌1 ಶಾಲೆಯನ್ನಾಗಿ ಯಾವುದಾರೂ ಒಂದು ಶಾಲೆಯನ್ನು ನಿರ್ಮಿಸಿ. ಬೇರೆ ಜಿಲ್ಲೆಯವರಿಗೆ ಮಾದರಿ ಆಗಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಎಚ್‌ಡಿಕೆ ಯೋಚಿಸಿ ಮಾತು ಆಡಬೇಕು : ಸಚಿವ ಹಾಲಪ್ಪ

ಸಂಸದ ಸಂಗಣ್ಣ ಕರಡಿ(Sanganna Karadi) ಮಾತನಾಡಿ, ಶಿಕ್ಷಕರ 25 ವರ್ಷಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಪ್ರಸ್ತುತ ಭೂಮಿಪೂಜೆ ನೆರವೇರಿಸಲಾಗಿದೆ. ಶಿಕ್ಷಕರು ಪ್ರಜಾಪ್ರಭುತ್ವ ಭಾರತದ ಬುನಾದಿಯಾಗಿದ್ದಾರೆ. ಹಾಗಾಗಿ ಅವರಿಗೆ ಗುರುಭವನ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಜಿಲ್ಲೆಯಲ್ಲಿ 8 ಸಾವಿರ ಶಿಕ್ಷಕರು ಇದ್ದಾರೆ. ಅವರಿಗೆ ಆಡಳಿತ ವ್ಯವಸ್ಥೆಯಲ್ಲಾಗುವ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳಲು ಗುರುಭವನ ಬೇಕು. ಅಲ್ಲದೇ ಶಿಕ್ಷಣದ ಸುಧಾರಣೆ ಮಾಡಲು, ಬೋಧನಾ ಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ತರಬೇತಿ ಕಾರ್ಯಾಗಾರ ಮಾಡಲು ಅನುಕೂಲವಾಗುತ್ತದೆ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal), ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಮಾತನಾಡಿದರು. ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ಸುರಳ್ಕರ್‌, ಜಿಪಂ ಸಿಇಒ ಫೌಜೀಯಾ ತರನ್ನುಮ್‌, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೆರೆ, ನಗರಸಭೆ ಸದಸ್ಯ ಅರುಣ್‌, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮನಗೌಡ ಸೇರಿದಂತೆ ಇತರರು ಇದ್ದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣ ಬಸವಗೌಡ ಪಾಟೀಲ್‌ಸ್ವಾಗತಿಸಿದರು. ತಾಲೂಕು ಅಧ್ಯಕ್ಷ ಪ್ರಾಣೇಶ ಪೂಜಾರ ವಂದಿಸಿದರು.

ಜನರ ಮಧ್ಯೆ ಇರಲು ಪ್ರಾಣ ಭಯ ಏಕೆ?

ನಾವು ಜನರಿಂದಲೇ ಆಯ್ಕೆಯಾಗಿ ಬಂದವರು, ಜನರ ಮಧ್ಯೆ ಇರುವುದಕ್ಕೆ ಭಯ ಯಾಕೆ? ಭಯ ಇದ್ದವರು ಹೇಗೆ ಆಯ್ಕೆಯಾಗಲು ಸಾಧ್ಯ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ಅವರು ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಅವರು ಭದ್ರತೆ ಪಡೆದಿರುವುದಕ್ಕೆ ಕುಟುಕಿದ್ದಾರೆ.

Koppal| ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ಹಾಲಪ್ಪ ಆಚಾರ್‌

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಂಗಾವಲು ವಾಹನವನ್ನು(Escort Vehicle) ತಿರಸ್ಕಾರ ಮಾಡಿಲ್ಲ. ಆದರೆ, ಅನಗತ್ಯವಾಗಿ ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಕ್ಷೇತ್ರದಲ್ಲಿ ಸುತ್ತಾಡುವುದಕ್ಕೆ ಭದ್ರತೆ ಪಡೆದಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜನರ ಮಧ್ಯೆ ಇರುವವರು, ಅವರಿಂದಲೇ ಆಯ್ಕೆಯಾದವರು. ಹೀಗಿರುವಾಗ ಅವರ ಮಧ್ಯೆ ಹೋಗುವುದಕ್ಕೆ ಭಯ ಯಾಕೆ? ನನಗಂತೂ ಭಯ ಇಲ್ಲವಾದ್ದರಿಂದ ಜನರ ಮಧ್ಯೆ ಹೋಗುವುದಕ್ಕಾಗಿ ಭದ್ರತೆ ಬೇಕಾಗಿಲ್ಲ. ಹೀಗಾಗಿ, ನಾನು ಸಚಿವನಾದ ತಕ್ಷಣ ಊರಿಗೆ ತೆರಳುವಾಗ ಕೊಪ್ಪಳ ದಾಟುತ್ತಿದ್ದಂತೆ ಬೆಂಗಾವಲು ವಾಹನ ವಾಪಸ್‌ ಕಳುಹಿಸಿದ್ದೇನೆ. ಹಾಗಂತ ನಾನು ತೆಗೆದುಕೊಳ್ಳುವುದೇ ಇಲ್ಲ ಎಂದಲ್ಲ. ಅಗತ್ಯವಿರುವ ಕಡೆ ತೆಗೆದುಕೊಳ್ಳುತ್ತೇನೆ ಎಂದರು.

ಪೊಲೀಸರಿಗೆ(Police) ಮಾಡುವುದಕ್ಕೆ ಸಾಕಷ್ಟುಕೆಲಸಗಳಿವೆ. ಅನಗತ್ಯವಾಗಿ ನಮ್ಮ ಹಿಂದೆ ಅಷ್ಟುವಾಹನಗಳ ಸುತ್ತಾಟ ಅಗತ್ಯವಿಲ್ಲ ಎಂದಿದ್ದೇನೆಯೇ ಹೊರತು ಬೆಂಗಾವಲು ವಾಹನವನ್ನು ತಿರಸ್ಕಾರ ಮಾಡಿಲ್ಲ. ಅಗತ್ಯ ಇರುವ ಕಡೆ ಬಳಕೆ ಮಾಡುತ್ತೇನೆ. ಇನ್ನು ಭದ್ರತೆ ಪಡೆದವರನ್ನೇ ಯಾಕೆ ಪಡೆದಿದ್ದಾರೆ ಎಂದು ಕೇಳಿ? ಅವರಿಗೆ ಬಂದೋಬಸ್ತ್‌ನೀಡಿದ್ದರೆ ಕೊಟ್ಟಿದ್ದು ಹೇಗೆ ಎಂದು ಎಸ್ಪಿ, ಡಿಸಿ ಅವರನ್ನು ಕೇಳಿ. ಭಯ ಇದೆ ಎಂದು ಹೇಳಿರಬೇಕು. ಅದಕ್ಕೆ ಕೊಟ್ಟಿರಬೇಕು. ನನಗಂತೂ ಜನರ ಮಧ್ಯೆ ಇರುವುದಕ್ಕೆ ಭಯ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಭದ್ರತೆಯನ್ನು ತೆಗೆದುಕೊಂಡವರನ್ನೇ ಕೇಳಿ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಹೆಸರು ಹೇಳದೆಯೇ ಕುಟುಕಿದರು.
 

Follow Us:
Download App:
  • android
  • ios