ದೊಡ್ಡ ಸ್ಥಾನದಲ್ಲಿರುವವರು ಕೀಳು ಮಟ್ಟಕ್ಕಿಳಿದು ಮಾತನಾಡಬಾರದು: ಸಚಿವ ಹಾಲಪ್ಪ
* ನಾನಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಹಾಲಪ್ಪ ಶಂಕುಸ್ಥಾಪನೆ
* ಗುತ್ತಿಗೆದಾರರು ಕೆಲಸದಲ್ಲಿ ಲೋಪವಾದರೆ ಯಾರ ಮುಲಾಜಿಲ್ಲದೆ ಕ್ರಮ
* ಬಸವರಾಜ ರಾಯರಡ್ಡಿ ವಿರುದ್ಧ ಪರೋಕ್ಷವಾಗಿ ತಿರುಗೇಟು ನೀಡಿದ ಹಾಲಪ್ಪ ಆಚಾರ್
ಯಲಬುರ್ಗಾ(ಆ.29): ರಾಜಕೀಯದಲ್ಲಿ ಅನುಭವ ಹೊಂದಿದವರು ಇನ್ನೊಬ್ಬರ ಬಗ್ಗೆ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕೆ ವಿನಃ ಕೀಳುಮಟ್ಟಕ್ಕಿಳಿದು ಮಾತನಾಡಿದರೆ ಅಂತವರನ್ನು ಯಾವ ಸಮಾಜವು, ಜನತೆಯೂ ಗೌರವದಿಂದ ಕಾಣುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದ್ದಾರೆ.
ತಾಲೂಕಿನ ತರಲಕಟ್ಟಿ ಹಾಗೂ ಎನ್. ಜರಕುಂಟಿ ಗ್ರಾಮಗಳಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಸಾಕಷ್ಟು ಅನುಭವ ನನಗೆ ಇದೆ ಎಂದು ಜಂಭದಿಂದ ಮಾತನಾಡುವವರು ಇನ್ನೊಬ್ಬರ ಏಳ್ಗೆಯ ಸಹಿಸದೆ ಸ್ವಾರ್ಥದಿಂದ ಮಾತನಾಡುವವರನ್ನು ಆ ದೇವರೇ ಕಾಪಾಡಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಮಾಜಿ ಸಚಿವರ ದುರಾಡಳಿತದಿಂದ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡು ಜನರಿಂದ ದೂರವಾಗಿದೆ. ಆದರೆ ಅಧಿಕಾರ ವ್ಯಾಮೋಹ ಅವರನ್ನು ಕಾಡುತ್ತಿದೆ. ಹೀಗಾಗಿ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಇಂತಹ ನಾಯಕರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನನಗಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದವರು ಇದೀಗ ಸುಧಾರಣೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ: ವಿವಾದಾತ್ಮಕ ಹೇಳಿಕೆ, ರಾಯರಡ್ಡಿ ವಿರುದ್ಧ ಆಕ್ರೋಶ
ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಕ್ಷೇತ್ರದ ನೀರಾವರಿಗೆ ನಯಾಪೈಸೆ ಕೊಡಿಸಲಿಲ್ಲ. ನಾನು ಶಾಸಕನಾದ ಮೇಲೆ ಈ ಯೋಜನೆಗೆ ವಿಶೇಷ ಅನುದಾನ ತಂದು ಕಾಮಗಾರಿ ಪ್ರಾರಂಭಿಸಿದ್ದೇನೆ. ಮುಂದಿನ ವರ್ಷದ ಶ್ರಾವಣ ಮಾಸದ ವೇಳೆಗೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತೇನೆ. ಈ ಕ್ಷೇತ್ರದ ಜನರ ಆಶೀರ್ವಾದದಿಂದ ನನಗೆ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ದೊರಕಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರತಿಯೊಂದು ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಿಸಿಕೊಳ್ಳುವತ್ತ ಸಾರ್ವಜನಿಕರು ಹೆಚ್ಚು ಗಮಹರಿಸಬೇಕು. ಅಧಿಕಾರಿಗಳು, ಗುತ್ತಿಗೆದಾರರು ಕೆಲಸದಲ್ಲಿ ಲೋಪವಾದರೆ ಯಾರ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇನೆ. ಅದಕ್ಕೆ ಅವಕಾಶ ಕೊಡದಂತೆ ಕಾಮಗಾರಿ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಾಂತಾ ಎಸ್. ಹಾವೇರಿ ಸಭೆ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಶ್ರೀಶೈಲ್ ತಳವಾರ, ಬಿಇಒ ಮೌನೇಶ, ಲೋಕೋಪಯೋಗಿ ಇಲಾಖೆಯ ಎಇಇ ಪಿ.ಹೇಮಂತರಾಜ್, ಎಂಜಿನಿಯರ್ ಶರಣಬಸಪ್ಪ, ಸಚಿನ್ ಪಾಟೀಲ, ಬಿಜೆಪಿ ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ಶಿವಶಂಕರರಾವ್ ದೇಸಾಯಿ, ಶಂಕರಗೌಡ ಟಣಕನಕಲ್, ರತನ್ ದೇಸಾಯಿ, ಶರಣಪ್ಪ ಇಳಗೇರ, ಈಶಪ್ಪ ಆರೇರ್, ಬಸನಗೌಡ ತೊಂಡಿಹಾಳ, ರುದ್ರಗೌಡ ಕೆಂಚಮ್ಮನವರ್, ಶಿವಣ್ಣ ವಾದಿ, ರಸೂಲಸಾಬ ಹಿರೇಮನಿ, ತೇಜನಗೌಡ ಪಾಟೀಲ, ವೀರನಗೌಡ ಪಾಟೀಲ, ಪ್ರಭುಗೌಡ ಪಾಟೀಲ, ತೋಟಪ್ಪ ಬೇವೂರು, ಪ್ರಕಾಶ ಮಾಲಿಪಾಟೀಲ, ರಾಜಪ್ಪ ಹುಳ್ಳಿ, ರಂಗನಾಥ ವೆಲ್ಮಕೊಂಡಿ, ಸಿಪಿಐ ಎಂ.ನಾಗರಡ್ಡಿ ಸೇರಿದಂತೆ ಮತ್ತಿತರರು ಇದ್ದರು.