ಕುಮಾರಸ್ವಾಮಿ ಅಧ್ಯಯನ ಮಾಡಬೇಕು, ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆದ್ರೆ ಏನು ಬರುತ್ತೆ: ಎಚ್‌ಡಿಕೆಗೆ ಖಂಡ್ರೆ ತಿರುಗೇಟು!
ಒನ್ಸ್ ಎ ಫಾರೆಸ್ಟ್ ಈಸ್ ಆಲ್‌ವೇಸ್ ಫಾರೆಸ್ಟ್ ಅಂತಾ ಸರ್ವೋಚ್ಚ ನ್ಯಾಯಾಲಯ ತೀರ್ಪಿದೆ. ಆ ತೀರ್ಪಿನನ್ವಯ ಅರಣ್ಯ ಭೂಮಿಯನ್ನ ಯಾರಿಗೂ ಕೊಡೋಕೆ, ಮಾರಾಟ, ದಾನ ಮಾಡಲಿಕ್ಕೆ ಬರುವುದಿಲ್ಲ. ಅರಣ್ಯೇತರ ಕಾರ್ಯಗಳಿಗೂ ಬಳಕೆ ಮಾಡೋಕೆ ಬರುವುದಿಲ್ಲ: ಸಚಿವ ಈಶ್ವರ ಖಂಡ್ರೆ
ಬೀದರ್(ಅ.30): ಎಲ್ಲರಿಗೂ ಒಂದೇ ನ್ಯಾಯ ಇದೆ, ಕುಮಾರಸ್ವಾಮಿ ಅವರು ದಾಖಲೆ ಪರಿಶೀಲಿಸಿ ಮಾತನಾಡ್ಬೇಕು. ಕುಮಾರಸ್ವಾಮಿ ಅವರು ಆಲೋಚನೆ, ಆತ್ಮಾವಲೋಕನ ಮಾಡಿಕೊಳ್ಳಲಿ ಬೆಂಗಳೂರು ಬೆಳೆಯುತ್ತಿದೆ. ಅರಣ್ಯ, ಪ್ರಕೃತಿ, ಪರಿಸರ ಉಳಿಬೇಕಾ ಅಥವಾ ಕಾಂಕ್ರಿಟ್ ಜಂಗಲ್ ಆಗ್ಬೇಕಾ?. 60ರ ದಶಕದಲ್ಲಿ ಉದ್ಯೋಗಕ್ಕಾಗಿ ಕೈಗಾರಿಕೆ ಮಾಡ್ಬೆಕೆಂಬ ಉದ್ದೇಶದಿಂದ ಎಚ್ಎಂಟಿಗೆ ಭೂಮಿ ಕೊಟ್ಟಿದ್ದೇವೆ. ಈಗ ಖಾಸಗಿಯವರಿಗೆ, ಬಿಲ್ಡರ್ಸ್‌ಗಳಿಗೆ 170 ಎಕರೆ ಜಮೀನು ಮಾರಾಟ ಮಾಡಿ 330 ಕೋಟಿ ರೂ. ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಒನ್ಸ್ ಎ ಫಾರೆಸ್ಟ್ ಈಸ್ ಆಲ್‌ವೇಸ್ ಫಾರೆಸ್ಟ್ ಅಂತಾ ಸರ್ವೋಚ್ಚ ನ್ಯಾಯಾಲಯ ತೀರ್ಪಿದೆ. ಆ ತೀರ್ಪಿನನ್ವಯ ಅರಣ್ಯ ಭೂಮಿಯನ್ನ ಯಾರಿಗೂ ಕೊಡೋಕೆ, ಮಾರಾಟ, ದಾನ ಮಾಡಲಿಕ್ಕೆ ಬರುವುದಿಲ್ಲ. ಅರಣ್ಯೇತರ ಕಾರ್ಯಗಳಿಗೂ ಬಳಕೆ ಮಾಡೋಕೆ ಬರುವುದಿಲ್ಲ. ಅರಣ್ಯೇತರ ಕಾರ್ಯ ಮಾಡ್ತೀವಿ ಅಂದ್ರೆ ಫಾರೆಸ್ಟ್ ಕ್ಲಿಯರೆನ್ಸ್ ಮಾಡ್ಕೊಂಡು, ಪರ್ಯಾಯ ಜಮೀನು ಕೊಡ್ಬೇಕು. ಈ ಎಲ್ಲ ಕಾಯ್ದೆಯನ್ನ ಕೇಂದ್ರ ಸಚಿವರು ಅಧ್ಯಯನ ಮಾಡಬೇಕು. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆದ್ರೆ ಏನು ಬರುತ್ತೆ ಎಂದು ಎಚ್‌ಡಿಕೆ ವಿರುದ್ಧ ಕೆಂಡ ಕಾರಿದ್ದಾರೆ.
ರಾಜಕಾರಣಕ್ಕಾಗಿ 'ಟಾಕ್ಸಿಕ್' ಸಿನಿಮಾಗೆ ತೊಂದ್ರೆ ಕೊಟ್ರಾ ಸಚಿವ ಈಶ್ವರ ಖಂಡ್ರೆ; ಕುಮಾರಸ್ವಾಮಿ ಕಿಡಿ
ಶ್ರೀನಿವಾಸಪುರದಲ್ಲಿ ಜನಪ್ರತಿನಿಧಿಯೊಬ್ಬರು 120 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಸುಳ್ಳು ಹೇಳುವವರಿಗೆ ನಾನೇನು ಮಾಡಲಿ. ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದೇವೆ. ನಾನೇನು ವೈಯಕ್ತಿಕವಾಗಿ, ಕಟ್ಟಡ ಕಟ್ಟಲಿಕ್ಕೆ ಭೂಮಿ ಕೇಳಿಲ್ಲ. ಅಲ್ಲೊಂದು ಲಾಲ್‌ಬಾಗ್ ರೀತಿ ಉದ್ಯಾನವನ ಮಾಡ್ತೀವಿ. ನಾವೇನು ಆ ಭೂಮಿ ತೆಗೆದುಕೊಂಡು ಮಾರಾಟ ಮಾಡುವವರಿದ್ದೀವಾ?. ಕುಮಾರಸ್ವಾಮಿ ಬೇಕಾದ್ರೆ ಜನಾಭಿಪ್ರಾಯ ಪಡೆಯಲಿ. ಆ ಭೂಮಿಯಲ್ಲಿ ಉದ್ಯಾನವನ ಆಗ್ಬೇಕಾ ಅಥವಾ ಕಾಂಕ್ರೀಟ್ ಜಂಗಲ್ ಆಗ್ಬೇಕಾ?. ಅಥವಾ ಭೂಗಳ್ಳರಿಗೆ ಆ ಭೂಮಿ ಮಾರಾಟ ಮಾಡ್ಬೇಕಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಸಚಿವ ಈಶ್ವರ್ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.