ರಾಜಕಾರಣಕ್ಕಾಗಿ 'ಟಾಕ್ಸಿಕ್' ಸಿನಿಮಾಗೆ ತೊಂದ್ರೆ ಕೊಟ್ರಾ ಸಚಿವ ಈಶ್ವರ ಖಂಡ್ರೆ; ಕುಮಾರಸ್ವಾಮಿ ಕಿಡಿ
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಸೆಟ್‌ಗಾಗಿ ಮರಗಳನ್ನು ಕಡಿದ ಆರೋಪದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಹೆಚ್‌ಎಂಟಿಯಿಂದ 2002ರಲ್ಲಿಯೇ ಕೆನೆರಾ ಬ್ಯಾಂಕ್‌ಗೆ ಜಾಗವನ್ನು ಭೋಗ್ಯಕ್ಕೆ ನೀಡಲಾಗಿದ್ದು, ಖಂಡ್ರೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಮನಗರ (ಅ.30): ಅರಣ್ಯ ಸಚಿವ ಈಶ್ವರ ಖಂಡ್ರೆ ಪೀಣ್ಯ ಬಳಿ ಹಿಂದೂಸ್ತಾನ್ ಮಷಿನ್ ಟೂಲ್ಸ್ (ಹೆಚ್ಎಂಟಿ) ಸಂಸ್ಥೆಗೆ ಸೇರಿದ ಜಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾದ ಸೆಟ್ ಹಾಕಲು ಸಾವಿರರಾರು ಮರಗಳನ್ನು ಕಡಿದು ಹಾಕಲಾಗಿದೆ ಎಂದು ಹೇಳಿದ್ದಾರೆ. ಆದರೆ, ಈ ಜಾಗವನ್ನು ಹೆಚ್‌ಎಂಟಿಯಿಂದ 2002ರಲ್ಲಿಯೇ ಕೆನೆರಾ ಬ್ಯಾಂಕ್‌ಗೆ ಆ ಜಾಗವನ್ನ ಭೋಗ್ಯಕ್ಕೆ (ಲೀಸ್) ಕೊಟ್ಟಿದೆ. ಆದರೆ, ಇದರಲ್ಲಿ ಗೊಂದಲ ಸೃಷ್ಟಿ ಮಾಡುವುಕ್ಕೆ ಅರಣ್ಯ ಸಚಿವರು ಮುಂದಾಗಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಚನ್ನಪಟ್ಟಣದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್‌ಎಂಟಿ ಸಂಸ್ಥೆಯಿಂದ ಕೆನೆರಾ ಬ್ಯಾಂಕ್‌ಗೆ ಆ ಜಾಗವನ್ನ 2002ರಲ್ಲಿಯೇ ಲೀಜ್ ಗೆ ಕೊಟ್ಟಿದೆ. ಇದನ್ನ ಗೊಂದಲ ಸೃಷ್ಟಿ ಮಾಡಲು ಅರಣ್ಯ ಸಚಿವರು ಮುಂದಾಗಿದ್ದಾರೆ. ರಾಜ್ಯದಲ್ಲಿ ಅರಣ್ಯ ಒತ್ತುವರಿ ತೆರವು ಮಾಡಲು ಹೊರಟ್ಟಿದ್ದಾರೆ. ಆ ಕೆಲಸ ಮಾಡುತ್ತಿದ್ದಾರಾ..? ಅರಣ್ಯ ಇಲಾಖೆಯಿಂದ ಎಚ್‌ಎಂಟಿ ಗೆ ನೋಟಿಸ್ ಕೊಟ್ಟಿದೆ. ಶ್ರೀನಿವಾಸಪುರದಲ್ಲಿ 120 ಎಕರೆ ಭೂಮಿ ಒತ್ತುವರಿಯಾಗಿದೆ. 61 ಎಕರೆಯನ್ನ ಸರ್ವೆ ಮಾಡಿ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಆದೇಶ ಆಗಿದೆ. ಆ ಒತ್ತುವರಿ ಭೂಮಿ ವಿಷಯದಲ್ಲಿ ಅರಣ್ಯ ಸಚಿವರು ಅಧಿಕಾರಿಗಳಿಗೆ ಏನ್ ಸೂಚನೆ ಕೊಟ್ಟಿದ್ದಾರೆ ಅಂತ ಗೊತ್ತು. ಆ ವಿಚಾರದಲ್ಲಿ ಈಶ್ವರ್ ಖಂಡ್ರೆ ಏನ್ ಮಾಡ್ತಿದ್ದೀಯಪ್ಪ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾಗೆ ಶಾಕ್ ಕೊಟ್ಟ ಸಚಿವ ಖಂಡ್ರೆ; ಅರಣ್ಯ ಅಪರಾಧ ಕೇಸ್ ರಿಜಿಸ್ಟರ್!
ಬಡವರಿಗೆ ಒಂದು ನ್ಯಾಯ, ನಿಮ್ಮ ಕಾಂಗ್ರೆಸ್‌ನವರಿಗೆ ಒಂದು ನ್ಯಾಯನಾ? ನೀವು ಯಾರಿಗೆ ರಕ್ಷಣೆ ಕೊಡುತ್ತಿದ್ದೀರಿ. ಅರಣ್ಯ ಭೂಮಿಗೆ ರಕ್ಷಣೆ ಕೊಡುತ್ತಿದ್ದೀರೋ ಅಥವಾ ಒತ್ತುವರಿ ಮಾಡಿಕೊಂಡವರಿಗೆ ರಕ್ಷಣೆ ಕೊಡುತ್ತಿದ್ದೀರೋ? ಎಲ್ಲದರ ಬಗ್ಗೆ ಮುಂದೆ ಮಾಹಿತಿ ಕೊಡುತ್ತೇನೆ. ಎಚ್‌ಎಂಟಿ ಆವರಣಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದೆ. ಅದರ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಪ್ರಚಾರಕ್ಕಾಗಿ ಈ ವಿಚಾರ ತೆಗೆದುಕೊಳ್ಳಲ್ಲ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಇಡಿ ಪ್ರವೇಶ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ಕಳೆದ ನಾಲ್ಕೈದು ವಾರಗಳಿಂದ ಹಲವಾರು ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದಾರೆ. ಸಾಕಷ್ಟು ವಿಚಾರಗಳು ಹೊರಗಡೆ ಬರುತ್ತಿದ್ದಾವೆ. ದಾಖಲೆಗಳು ಕಳ್ಳತನ ಆಗಿವೆ, ಮಂಗ ಮಾಯ ಆಗಿವೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸತ್ಯ ಮೇವ ಜಯತೆ ಅಂತ ಹೇಳುತ್ತಿದ್ದರು. ಈಗ ಸತ್ಯ ಮೇವ ಜಯತೆ ಹೊರಗಡೆ ಬರುತ್ತಿದೆ ಎಂದು ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: VIDEO | ಕರ್ನಾಟಕದ 3 ಕ್ಷೇತ್ರಗಳ ಉಪ ಚುನಾವಣೆ: ನಿಖಿಲ್, ಯೋಗೇಶ್ವರ್, ಭರತ್ ಬೊಮ್ಮಾಯಿ ಆಸ್ತಿ ಎಷ್ಟು? ಯಾರು ಶ್ರೀಮಂತರು?
ಉಪಚುನಾಣೆಯಲ್ಲಿ ನಿಖಿಲ್ ಸೋಲಿಸಲು ಕಾಂಗ್ರೆಸ್ ಕುತಂತ್ರ ಆರಂಭಿಸಿದೆ. ನನ್ನ ಮುಂದಿನ ಬೆಳವಣಿಗೆ ಕುಗ್ಗಿಸಬಹುದು ಎಂದು ಲೆಕ್ಕಾಚಾರ ಮಾಡಿದ್ದಾರೆ. ರಾಜಕೀಯದಲ್ಲಿ ನನ್ನ ಮುಗಿಸಬೇಕು ಅಂತ ಹೊರಟಿದ್ದಾರೆ. ನಾನು ಕೇಂದ್ರ ಮಂತ್ರಿ ಆಗಿರುವುದನ್ನ ಅವರು ಸಹಿಸುತ್ತಿಲ್ಲ. ಅವರಿಗೆ ನಿಖಿಲ್‌ಗಿಂತ ಕುಮಾರಸ್ವಾಮಿ ಹೆಚ್ಚು ಟಾರ್ಗೆಟ್ ಆಗಿದ್ದಾರೆ. ಅವರ ಯಾವುದೇ ಕುತಂತ್ರಗಳು ಚನ್ನಪಟ್ಟಣ ಜನತೆ ಮುಂದೆ ನಡೆಯಲ್ಲ.ಕಳೆದ ವಿಧಾನ ಸಭೆ ಚುನಾವಣೆಯಿಂದ ಜೆಡಿಎಸ್ ಮುಗಿಸಬೇಕು ಎಂದು ಷಡ್ಯಂತ್ರ ಮಾಡಿ 19 ಸ್ಥಾನಕ್ಕೆ ಜೆಡಿಎಸ್ ಇಳಿಸಿದ್ದಾರೆ. ಅವರೆಲ್ಲ ಕಾಂಗ್ರೆಸ್‌ಗೆ ಬರುತ್ತಾರೆ ಅಂದರು. ಆದರೆ, ಯಾರನ್ನು ಅಲುಗಾಡಿಸಲು ಆಗಲಿಲ್ಲ ಎಂದು ವಾಗ್ದಾಳಿ ಮಾಡಿದರು.