ಚಿಕ್ಕಬಳ್ಳಾಪುರ ಉತ್ಸವದಲ್ಲಿ ತನುಜಾ ಚಿತ್ರದ ಟ್ರೈಲರ್ ಬಿಡುಗಡೆ: ಫೆ.3ಕ್ಕೆ ಸಿನಿಮಾ ತೆರೆಗೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವರು ಬಣ್ಣ ಹಚ್ಚಿ ಅಭಿನಯಿಸಿರುವ ‘ತನುಜಾ’ ಚಿತ್ರದ ಟ್ರೈಲರ್‌ನ್ನು ಚಿಕ್ಕಬಳ್ಳಾಪುರ ಉತ್ಸವದ ಮುಖ್ಯ ವೇದಿಕೆಯಲ್ಲಿ ಶುಕ್ರವಾರ ಸಂಜೆ ಬಿಡುಗಡೆ ಮಾಡಲಾಯಿತು.
ಚಿಕ್ಕಬಳ್ಳಾಪುರ (ಜ.14): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವರು ಬಣ್ಣ ಹಚ್ಚಿ ಅಭಿನಯಿಸಿರುವ ‘ತನುಜಾ’ ಚಿತ್ರದ ಟ್ರೈಲರ್‌ನ್ನು ಚಿಕ್ಕಬಳ್ಳಾಪುರ ಉತ್ಸವದ ಮುಖ್ಯ ವೇದಿಕೆಯಲ್ಲಿ ಶುಕ್ರವಾರ ಸಂಜೆ ಬಿಡುಗಡೆ ಮಾಡಲಾಯಿತು. ವರ್ಣರಂಜಿತ ವೇದಿಕೆ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಚಿತ್ರದ ನಿರ್ದೇಶಕರಾದ ಹರೀಶ್ ಮತ್ತಿತರರು ಟ್ರೈಲರ್ ಹಾಗೂ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸಿದರು.
ನೀಟ್ ಪರೀಕ್ಷೆ ನಿರಾಕರಣೆ ಘಟನೆ ಆಧರಿತ: ಈ ವೇಳೆ ತನುಜಾ ಚಿತ್ರದ ಕುರಿತು ವೇದಿಕೆಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಒಂದು ಹೆಣ್ಣು ಮಗು ಕೋವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು ಪ್ರವೇಶ ನಿರಾಕರಿಸಿದಾಗ ನಾವು ತಕ್ಷಣ ಮಧ್ಯಪ್ರವೇಶಿಸಿ ತನುಜಾ ಎಂಬ ವಿದ್ಯಾರ್ಥಿನಿಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಇದು ಒಂದು ಸಣ್ಣ ಘಟನೆ ಅನಿಸಿದರೂ ಆಕೆಯ ಬದುಕಿನಲ್ಲಿ ಪರಿವರ್ತನೆ ತಂದಿದೆ. ಆಕೆ ಈಗ ಪರೀಕ್ಷೆಯಲ್ಲಿ ರಾರಯಂಕ್ ಪಡೆದು ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆಂದರು.
Chikkaballapur Utsav: ಚಿಕ್ಕಬಳ್ಳಾಪುರ ಭವಿಷ್ಯದಲ್ಲಿ ದೊಡ್ಡ ನಗರವಾಗಲಿದೆ: ಸಚಿವ ಸುಧಾಕರ್
ಅನೇಕರು ಆಕೆಗೆ ಆಗ ಸಹಕಾರ ನೀಡಿದರು. ಆದರೆ ಆ ಘಟನೆ ಸಿನಿಮಾ ಆಗುತ್ತದೆಯೆಂದು ನಾವು ನಿರೀಕ್ಷಿಸರಲಿಲ್ಲ. ಹಿರಿಯ ಪತ್ರಕರ್ತರಾದ ವಿಶ್ವೇಶ್ವರಭಟ್, ನಮ್ಮ ಸ್ನೇಹಿತರಾದ ಪ್ರದೀಪ್ ಈಶ್ವರ್, ಈ ಘಟನೆಗೆ ಪ್ರಮುಖ ರೂವಾರಿಗಳಾಗಿದ್ದಾರೆ. ಈ ಸಿನಿಮಾ ಟ್ರೈಲರ್ ಬಿಡುಗಡೆ ನನಗೆ ಸಂತೋಷ ತಂದಿದೆ. ಈ ಸಿನಿಮಾದಲ್ಲಿ ನನಗೂ ಸಣ್ಣ ಪಾತ್ರ ಕೊಟ್ಟಿದ್ದಾರೆ. ಫೆ.3 ರಂದು ಸಿನಿಮಾ ಬಿಡುಗಡೆ ಆಗುತ್ತದೆ. ಸಿನಿಮಾ ನಿರ್ದೇಶಕರಾದ ಹರೀಶ್ ಹಾಗೂ ಸಿನಿಮಾಗೆ ಅರ್ಶೀವಾದ ಮಾಡಿ ಎಂದು ನೆರದಿದ್ದ ಜನತೆಯಲ್ಲಿ ಸಚಿವ ಸುಧಾಕರ್ ಮನವಿ ಮಾಡಿದರು. ಈ ವೇಳೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಚಿತ್ರದ ಟ್ರೈಲರ್ ವೀಕ್ಷಿಸಿ ಚಿತ್ರಕ್ಕೆ ಶುಭ ಕೋರಿಸಿದರು. ತನುಜಾ ಚಿತ್ರದ ನಿರ್ದೇಶಕರಾದ ಹರೀಶ್ ಸೇರಿದಂತೆ ಚಿತ್ರದ ತಂಡದ ಕೆಲಸ ಸದಸ್ಯರು ಇದ್ದರು.
ಯುವಪೀಳಿಗೆಯಲ್ಲಿ ಸಾಧಿಸುವ ಛಲ ಕೊನೆಯಾಗಬಾರದು: ಸಚಿವ ಸುಧಾಕರ್ ಸಲಹೆ
ಪರದೆ ಮೇಲೆ ಸಿನಿಮಾ ಟ್ರೈಲರ್: ಕೋವಿಡ್ ಕಾರಣಕ್ಕೆ ಮಹತ್ವಕಾಂಕ್ಷಿ ನೀಟ್ ಪರೀಕ್ಷೆಯಿಂದ ವಂಚಿತರಾಗುವ ವಿದ್ಯಾರ್ಥಿಗೆ ಮರಳಿ ಪರೀಕ್ಷೆಗೆ ಅವಕಾಶ ಕೊಟ್ಟಅಲ್ಲಿಂದ ಆಕೆ ಎಂಬಿಬಿಎಸ್ ಕೋರ್ಸ್ ಓದಿ ನಂತರ ವೈದ್ಯರಾಗುವ ಕನಸು ಈಡೇರಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಸನ್ನಿವೇಶದ ಚಿತ್ರದ ಟ್ರೈಲರ್‌ರನ್ನು ವೇದಿಕೆ ಬೃಹತ್ ಪರದೆ ಮೂಲಕ ಪ್ರೇಕ್ಷಕರಿಗೆ ತೋರಿಸಲಾಯಿತು. ಸುಧಾಕರ್ ಅಭಿನಯಿಸುವ ಸನ್ನಿವೇಶವನ್ನು ತೋರಿಸಲಾಯಿತು.