Asianet Suvarna News Asianet Suvarna News

ತುಳಿತಕ್ಕೊಳಗಾದ ವರ್ಗ ಮೇಲೆತ್ತುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆ: ಸಚಿವ ಮಹದೇವಪ್ಪ

ಸಾಮಾಜಿಕ ಅಸಮಾನತೆ ವಿರುದ್ಧವಾಗಿ ಸಂವಿಧಾನವಿದೆ. ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಟಿಬದ್ಧವಾಗಿದೆ. ತುಳಿತಕ್ಕೊಳಗಾದ ವರ್ಗವನ್ನು ಮೇಲೆತ್ತುವ ಮೂಲಕ ಕಟ್ಟಕಡೆಯ ಮನುಷ್ಯನಿಗೂ ಮೊಟ್ಟಮೊದಲ ಆದ್ಯತೆಯನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

Minister Dr HC Mahadevappa statement at mysuru rav
Author
First Published Feb 10, 2024, 12:21 PM IST

 ಮೈಸೂರು (ಫೆ.10) : ಸಾಮಾಜಿಕ ಅಸಮಾನತೆ ವಿರುದ್ಧವಾಗಿ ಸಂವಿಧಾನವಿದೆ. ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಟಿಬದ್ಧವಾಗಿದೆ. ತುಳಿತಕ್ಕೊಳಗಾದ ವರ್ಗವನ್ನು ಮೇಲೆತ್ತುವ ಮೂಲಕ ಕಟ್ಟಕಡೆಯ ಮನುಷ್ಯನಿಗೂ ಮೊಟ್ಟಮೊದಲ ಆದ್ಯತೆಯನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಮೈಸೂರು ಮಹಾನಗರ ಪಾಲಿಕೆಯು ಶುಕ್ರವಾರ ಆಯೋಜಿಸಿದ್ದ ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿಯಲ್ಲಿ ಆಯ್ಕೆಯಾಗಿರುವ 173 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಿ ಮಾತನಾಡಿದ ಅವರು, ತಳ ಸಮುದಾಯದ ಏಳಿಗೆಯೇ ನಮ್ಮ ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.

 

ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವಿಷಬೀಜ ಬಿತ್ತುವ ರಾಜಕಾರಣ: ಸಚಿವ ಮಹದೇವಪ್ಪ

ಪೌರಕಾರ್ಮಿಕ ಬಂಧುಗಳು ಊರಿನ ಕಸ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಲ್ಲಿ ಪ್ರತಿನಿತ್ಯ ಶ್ರಮವಹಿಸುತ್ತಾರೆ. ಅತ್ಯಂತ ಕಷ್ಟದ, ನಿಕೃಷ್ಟದ ಹಾಗೂ ತ್ಯಾಗದ ಬದುಕು ನಿಮ್ಮದಾಗಿದೆ. ನಿಮ್ಮಿಂದ ಉಳಿದವರು ಸುಖದಿಂದ ಬದುಕುತ್ತಿದ್ದಾರೆ. ನೀವು ಮಾತ್ರ ಕಷ್ಟದ ಜೀವನವನ್ನೆ ನಡೆಸುತ್ತಾರೆ. ಈ ಪರಿಸ್ಥಿತಿ ಸುಧಾರಣೆಗೆ ಸರ್ಕಾರದಿಂದ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಈಗಾಗಲೇ ನಮ್ಮ ಸರ್ಕಾರವು 4400 ಸಫಾಯಿ ಕರ್ಮಚಾರಿಗಳಿಗೆ ತಲಾ 40 ಸಾವಿರ ರು. ಸಹಾಯಧನ ನೀಡಿದೆ‌. ಇದಕ್ಕೆ 18 ಕೋಟಿ ರು. ವ್ಯಯಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಯು ರಾಜ್ಯದಲ್ಲಿ ಎರಡನೇ ದೊಡ್ಡ ಜನಸಂಖ್ಯೆಯ ಪಾಲಿಕೆಯಾಗಿದ್ದು, ಇಂದು ನೇಮಕಾತಿ ಆದೇಶ ನೀಡುತ್ತಿರುವುದು ನನಗೆ ವೈಯಕ್ತಿಕವಾಗಿ ಸಂತೋಷವಿದೆ ಎಂದರು.

ವಿಜ್ಞಾನ, ತಂತ್ರಜ್ಞಾನ ಬೆಳಿದಿದೆ. ವಿದೇಶಗಳಲ್ಲಿ ಸ್ವಚ್ಛತೆ ಕಸುಬು ಒಂದು ವೃತ್ತಿಯಾಗಿದೆ. ನಮ್ಮ ದೇಶದಲ್ಲಿ ಮಾತ್ರ ಒಂದು ವರ್ಗಕ್ಕೆ ಸೀಮಿತವಾಗಿದೆ. ಇಂದು ಧರ್ಮ, ದೇವರು ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ಉದ್ದಗಲಕ್ಕೂ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಿ

ಶಾಸಕ ತನ್ವೀರ್ ಸೇಠ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕತೆ ಹೊಂದಿದ್ದೇವೆ. ಆದರೆ ಕಸವಿಲೇವಾರಿ ಪದ್ಧತಿ ನೇರವಾಗಿ ಮಾನವನಿಗೆ ಸಂಬಂಧಿಸಿದ್ದಾಗಿದೆ. ಈ ವ್ಯವಸ್ಥೆಯಲ್ಲಿ ಬಹಳ ಸುಧಾರಣೆ ತರಬೇಕು. ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರಿಗೆ ವೇತನ ನೀಡುವಾಗ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು ಎಂದರು.

ಮೈಸೂರು ನಗರವು ಜನಸಂಖ್ಯೆಯಲ್ಲಿ ಬೆಳೆಯುತ್ತಿದ್ದು, ಹೊಸ ಬಡಾವಣೆಗಳಲ್ಲೂ ಈಗಿರುವ ಪೌರಕಾರ್ಮಿಕರೇ ಸ್ವಚ್ಛಗೊಳಿಸುತ್ತಿದ್ದಾರೆ. ಆದ್ದರಿಂದ ಇನ್ನೂ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಸರ್ಕಾರವು ಮುಂದಾಗಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ತು ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಮೊದಲಾದವರು ಇದ್ದರು.

ನುಡಿದಂತೆ ನಡೆಯದ ಬಜೆಟ್ ಘೋಷಣೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ: ಸಚಿವ ಮಹದೇವಪ್ಪ

ಹೊರಗುತ್ತಿಗೆಯಲ್ಲಿ ಮೀಸಲಾತಿ ತರಲು ಪರಿಶೀಲನೆ

ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸುವ ಸಲುವಾಗಿ ಹೊರಗುತ್ತಿಗೆ ನೇಮಕಾತಿಯಲ್ಲಿ 100 ಜನರಿಗೆ ಕಡ್ಡಾಯವಾಗಿ 24 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಇರಬೇಕು. ಈ ಬಗ್ಗೆ ನಾನು ಪರಿಶೀಲಿಸುತ್ತಿದ್ದೇನೆ. ಅಗತ್ಯಬಿದ್ದರೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಸ್ವಚ್ಛತೆ ಕಾಪಾಡುವುದು ನಿಮ್ಮ ಜವಬ್ದಾರಿ, ಅದರಂತೆ ನಿಮ್ಮ ಯೋಗಕ್ಷೇಮ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ದೇಶದ ಮೂಲ ನಿವಾಸಿಗಳು ನಾವಾಗಿದ್ದು, ನಮ್ಮ ಸಂಸ್ಕೃತಿ ಸಿಂಧೂ ನದಿಯ ನಾಗರಿತೆಯಾಗಿದೆ. ಪ್ರತಿಯೊಬ್ಬರೂ ಮೂಢನಂಬಿಕೆ ತೊರೆದು ವೈಚಾರಿಕತೆ ರೂಢಿಸಿಕೊಳ್ಳದಿದ್ದರೆ ಶತಮಾನಕ್ಕೂ ನಾವು ಮೇಲೆ ಬರಲು ಸಾಧ್ಯವಿಲ್ಲ.

- ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

 

Follow Us:
Download App:
  • android
  • ios