*  ಬೆದರಿಕೆ ಹಾಕುವವರಿಗೆ ಪ್ರಧಾನಿಯವರ ಕಣ್ಣು, ಕೂದಲು ಕೂಡ ಮುಟ್ಟಲು ಸಾಧ್ಯವಿಲ್ಲ*  ಯಾವ ಧರ್ಮದಲ್ಲಿಯೂ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಹೇಳಿಲ್ಲ*  ವಿದ್ಯಾರ್ಥಿಗಳಿಗೆ ಶೀಘ್ರ ಟ್ಯಾಬ್‌ ವಿತರಣೆ 

ಕುಂದಾಪುರ(ಜೂ.30):  ತಮ್ಮ ಅಧಿಕಾರದ ಅವಧಿಯಲ್ಲಿ ಇಂತಹ ನೂರಾರು ಸವಾಲು ಹಾಗೂ ಬೆದರಿಕೆಗಳನ್ನು ಎದುರಿಸಿರುವ ಪ್ರಧಾನಿ ಮೋದಿಯವರಿಗೆ ರಾಜಸ್ಥಾನದ ಉದಯಪುರ ಹತ್ಯೆಕೋರರು ನೀಡಿರುವ ಬೆದರಿಕೆಗೆ ಹೆದರಲ್ಲ. ಈ ರೀತಿಯ ಬೆದರಿಕೆ ಹಾಕುವವರಿಂದ ಪ್ರಧಾನಿಯವರ ಕಣ್ಣು ಹಾಗೂ ಕೂದಲು ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್‌. ಅಶ್ವತ್ಥ್‌ ನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿನ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ನಡೆಯುತ್ತಿರುವ ಬೃಹತ್‌ ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಯಾವ ಧರ್ಮದಲ್ಲಿಯೂ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಹೇಳಿಲ್ಲ, ಅಧರ್ಮಿಗಳು, ಮೂಢರು, ಮುಟ್ಟಾಳರು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಧರ್ಮದ ಪರವಾಗಿ ಇರುವವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ಪಜಾಪ್ರಭುತ್ವದಲ್ಲಿ ಎಲ್ಲ ರೀತಿಯ ಭಾವನೆ, ಸಂಸ್ಕೃತಿ, ಧರ್ಮವನ್ನು ಕಾಪಾಡಿಕೊಂಡು ಅನುಷ್ಠಾನ ಮಾಡಿ ನಡೆಸಿಕೊಂಡು ಹೋಗಲು ಅವಕಾಶವಿದೆ. ಈ ವಿಚಾರದಲ್ಲಿ ಕಾನೂನು ತನ್ನ ನಿಷ್ಠುರ ನಿಲುವನ್ನು ತೆಗೆದುಕೊಳ್ಳಬೇಕು, ಇಂತಹ ಕೌರ್ಯ ಮರುಕಳಿಸದಂತೆ ಸಂಬಂಧಪಟ್ಟರಾಜ್ಯ ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಹಾಗೂ ಮುಂದೆ ಇಂತಹ ಘಟನೆ ವಹಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.

ನವೋದ್ಯಮಗಳ ಶೇ.30ರಷ್ಟು ಆದಾಯ ಸಂಶೋಧನೆಗಿರಲಿ: ಸಚಿವ ಅಶ್ವತ್ಥ್‌ ನಾರಾಯಣ

ವಸುದೈವ ಕುಟುಂಬಕಂ ಕಲ್ಪನೆಯೊಂದಿಗೆ ಬಾಳುತ್ತಿರುವ ಭಾರತಕ್ಕೆ ಅಪಾರವಾದ ಶಕ್ತಿ ಇದೆ. ಅನೇಕ ಸವಾಲುಗಳನ್ನು ಎದುರಿಸಿರುವ ನಮ್ಮ ದೇಶ ಇದ್ಯಾವುದಕ್ಕೂ ಜಗ್ಗುವುದಿಲ್ಲ. ಅಮಾಯಕನ ಶಿರಚ್ಛೇದ ಮಾಡುವ ಮೂಲಕ ಗೊಡ್ಡು ಬೆದರಿಕೆ ಹಾಕಿರುವವರು, ತಮ್ಮ ಹೀನ ಕೃತ್ಯದ ಮೂಲಕ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಕೀಳು ಮಟ್ಟದ ಯೋಜನೆ ಹಾಗೂ ಸಂಸ್ಕೃತಿಯನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಉಡುಪಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಸ್ಥಾಪನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಕುರಿತು ಪ್ರಾಸ್ತಾಪನೆ ಇದ್ದು, ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾರಿಗೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಆಹಾರ ನಿಗಮದ ಅಧ್ಯಕ್ಷ ಕಿರಣ್‌ ಕುಮಾರ ಕೊಡ್ಗಿ ಇದ್ದರು.

ವಿದ್ಯಾರ್ಥಿಗಳಿಗೆ ಶೀಘ್ರ ಟ್ಯಾಬ್‌ ವಿತರಣೆ: 

ತೆಕ್ಕಟ್ಟೆಯ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ. ಅಶ್ವತ್ಥ್‌ ನಾರಾಯಣ್‌ ಅವರು, ಕೋವಿಡ್‌ ಕಾರಣದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಟ್ಯಾಬ್‌ಗಳನ್ನು ವಿತರಣೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತಿದ್ದು, ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಪದವಿ ಕಾಲೇಜುಗಳಲ್ಲಿ ಕ್ರೀಡಾ ನಿರ್ದೇಶಕರ ಹಾಗೂ ಗ್ರಂಥಪಾಲಕರ ನೇಮಕಾತಿಯ ಕುರಿತು ಬೇಡಿಕೆ ಇದ್ದು, ಈ ವಿಚಾರಗಳು ಸರ್ಕಾರದ ಗಮನದಲ್ಲಿ ಇದ್ದು, ಆದ್ಯತೆಯ ಮೇರೆಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.