ನವೋದ್ಯಮಗಳ ಶೇ.30ರಷ್ಟು ಆದಾಯ ಸಂಶೋಧನೆಗಿರಲಿ: ಸಚಿವ ಅಶ್ವತ್ಥ್ ನಾರಾಯಣ
*‘ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟಪ್-2022’ಸಮಾವೇಶ
* ನವೋದ್ಯಮಗಳು ಭಾರತವನ್ನೇ ಉತ್ಪಾದನೆಯ ತೊಟ್ಟಿಲನ್ನಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಬೇಕು
* ಸಂಶೋಧನೆಗೆ ಮತ್ತು ಅಭಿವೃದ್ಧಿಗೆ ಮೀಸಲಿಡಬೇಕು
ಬೆಂಗಳೂರು(ಜೂ.09): ನವೋದ್ಯಮಗಳು ತಮ್ಮ ಆದಾಯದಲ್ಲಿ ಶೇ.30ರಷ್ಟನ್ನಾದರೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ. ಎನ್.ಅಶ್ವತ್ಥ್ ನಾರಾಯಣ ಅಭಿಪ್ರಾಯಪಟ್ಟರು.
ಬುಧವಾರ ಅಖಿಲ ಭಾರತ ರೋಬೋಟಿಕ್ಸ್ ಮತ್ತು ಇನ್ನೋವೇಶನ್ ಸಮಿತಿ (ಎಐಸಿಆರ್‌ಎ) ನಗರದಲ್ಲಿ ಆಯೋಜಿಸಿದ್ದ ‘ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟಪ್-2022’ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನವೋದ್ಯಮಗಳು ಭಾರತವನ್ನೇ ಉತ್ಪಾದನೆಯ ತೊಟ್ಟಿಲನ್ನಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಬೇಕು. ಅದರೊಂದಿಗೆ ತಾವು ಗಳಿಸಿದ ಲಾಭದಲ್ಲಿ ಕನಿಷ್ಠ ಶೇ.30ರಷ್ಟನ್ನು ದೇಶದಲ್ಲಿ ತಾಂತ್ರಿಕತೆಯ ಬೆಳವಣಿಗೆಗೆ ಉಪಯೋಗಿಸಬೇಕು. ಮುಖ್ಯವಾಗಿ ಸಂಶೋಧನೆಗೆ ಮತ್ತು ಅಭಿವೃದ್ಧಿಗೆ ಮೀಸಲಿಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ನವೋದ್ಯಮಿಗಳು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಟೆಕ್ ಶೃಂಗಕ್ಕೆ ಮೋದಿ ಆಹ್ವಾನ
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಲ್ಲಿ ಉದ್ಯಮಗಳ ಅಗತ್ಯ, ಅವರಿಗೆ ಬೇಕಾದ ಕೌಶಲ್ಯ, ಸೂಕ್ತ ಪಠ್ಯಕ್ರಮ, ಸಂವಹನ ತರಬೇತಿ ಇತ್ಯಾದಿಗಳಿಗೆ ಗಮನ ಕೊಡಲಾಗಿದೆ. ಉದ್ಯಮಶೀಲತೆಗೆ ಪ್ರೋತ್ಸಾಹ ಕೊಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜತೆ ಹೆಜ್ಜೆ ಇಡುತ್ತಿದೆ. ಇದಕ್ಕೆ ತಕ್ಕಂತೆ ಬೆಂಗಳೂರು ನಗರವು ದೇಶದ ನವೋದ್ಯಮ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇರುವಷ್ಟು ಕಾಸ್ಮೋಪಾಲಿಟನ್ ಸಂಸ್ಕೃತಿ ದೇಶದ ಉಳಿದೆಲ್ಲೂ ಇಲ್ಲ. ನಮ್ಮಲ್ಲಿ ಭಾಷೆ, ಧರ್ಮ ಇತ್ಯಾದಿಗಳ ಹೆಸರಿನಲ್ಲಿ ಸಂಕುಚಿತ ಧೋರಣೆಯನ್ನು ಯಾವತ್ತೂ ಬೆಳೆಸಿಲ್ಲ. ರಾಜ್ಯವು ಇಡೀ ಜಗತ್ತಿನ ಜನರನ್ನು ಸ್ವಾಗತಿಸುತ್ತದೆ. ರಾಜ್ಯವು ಮೊದಲಿನಿಂದಲೂ ಉದ್ಯಮಶೀಲ ವಾತಾವರಣಕ್ಕೆ ಪ್ರೋತ್ಸಾಹ ಕೊಡುತ್ತಲೇ ಬಂದಿದೆ. ಇತ್ತೀಚಿನ ದಶಕಗಳಲ್ಲಿ ಐಟಿ, ಬಿಟಿ ಜತೆಗೆ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಂಡಿದ್ದು, ಇಡೀ ಜಗತ್ತಿನ ಗಮನ ಸೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ಎಐಸಿಆರ್‌ಎ ಉಪಾಧ್ಯಕ್ಷೆ ಅಲಕಾ ಸಚದೇವ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.