ನಾನೇ ಸಿಎಂ ಆದ್ರೂ 15 ದಿನದಲ್ಲಿ ಮೀಸಲಾತಿ ಅಸಾಧ್ಯ: ಸಚಿವ ಸಿ.ಸಿ.ಪಾಟೀಲ್
* ನಮ್ಮ ಸಮಾಜಕ್ಕೆ 3ಬಿ ಕೊಟ್ಟಿದ್ದೇ ಯಡಿಯೂರಪ್ಪ
* ಮೀಸಲಾತಿ 50 ಪ್ರತಿಶತ ಮೀರಬಾರದು ಅನ್ನುವ ನಿಯಮ
* ಸಂವಿಧಾನದ ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ಪ್ರಯತ್ನ
ಗದಗ(ಸೆ.26): ಪಂಚಮಸಾಲಿ ಸಮುದಾಯದ ನಾನೇ ಮುಖ್ಯಮಂತ್ರಿಯಾದರೂ 15ದಿನದಲ್ಲಿ 2ಎ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ(CC Patil) ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ(Panchamasali) ಮೀಸಲಾತಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನಸ್ಸಿರಲಿಲ್ಲ ಎನ್ನುವ ಆರೋಪವನ್ನು ನಾನು ಒಪ್ಪುದಿಲ್ಲ. ಈ ವಿಷಯವಾಗಿ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.
ಯಡಿಯೂರಪ್ಪ ಕೊಟ್ಟ ಗಡುವು ಅಂತ್ಯ: ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ
ನಮ್ಮ ಸಮಾಜಕ್ಕೆ 3ಬಿ ಕೊಟ್ಟಿದ್ದೇ ಯಡಿಯೂರಪ್ಪ, ಈ ವಿಷಯ ರಾಜ್ಯದ ಜನತೆ ಗೊತ್ತಿದೆ. ನಮ್ಮದು ಒಕ್ಕೂಟ ವ್ಯವಸ್ಥೆ. ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ಅನ್ನೋದು ನನ್ನ ಬಯಕೆ. ಅದಕ್ಕಾಗಿ ಪ್ರಯತ್ನ ನಡೆಯುತ್ತಿದೆ. ನಮ್ಮ ಸಮುದಾಯಕ್ಕೂ ಮೀಸಲಾತಿ ಸಿಗಬೇಕು. ಅದರ ಜೊತೆಗೆ ಬೇರೆ ಸಮಾಜದವರಿಗೆ ಅನ್ಯಾಯವಾಗಬಾರದು. ಮೀಸಲಾತಿ(Reservation) 50 ಪ್ರತಿಶತ ಮೀರಬಾರದು ಅನ್ನುವ ನಿಯಮವಿದೆ. ಸಂವಿಧಾನದ ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಮೊನ್ನೆಯಷ್ಟೇ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಮಾತನಾಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji), ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಕೊಟ್ಟ ಗಡುವು ಮುಗಿದಿದೆ. ಸರ್ಕಾರ ಈ ಹಂತದಲ್ಲಾದರೂ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಅಕ್ಟೋಬರ್ ಆರಂಭದಿಂದಲೇ ಮೀಸಲಾತಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.