*   2ಎ ಸರ್ಕಾರಕ್ಕೆ ಕೊಟ್ಟ ಗಡುವು ಅಂತ್ಯ, ಅಕ್ಟೋಬರ್‌ಗೆ ಸತ್ಯಾಗ್ರಹ*  ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಸಮಾವೇಶ*  ಜಯಮೃತ್ಯುಂಜಯ ಶ್ರೀಗಳ ಎಚ್ಚರಿಕೆ ಗುಡುಗು 

ಬೆಳಗಾವಿ(ಸೆ.25): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಕೊಟ್ಟ ಗಡುವು ಮುಗಿದಿದೆ. ಸರ್ಕಾರ ಈ ಹಂತದಲ್ಲಾದರೂ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಅಕ್ಟೋಬರ್‌ ಆರಂಭದಿಂದಲೇ ಮೀಸಲಾತಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ (Jayamrutunjaya Swamiji) ಎಚ್ಚರಿಕೆ ನೀಡಿದ್ದಾರೆ. 

ನಗರದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಸಮಾವೇಶದಲ್ಲಿ ಮಾತನಾಡಿ ಇದು ನಮ್ಮ ಅಂತಿಮ ಹೋರಾಟ, ಮೀಸಲಾತಿ(Reservation) ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸರ್ಕಾರ ಕೊಟ್ಟ ಮಾತು ಮರೆಯುತ್ತಿರುವ ಹಿನ್ನೆಲೆಯಲ್ಲಿ ಹೋರಾಟ ಪುನರ್‌ ಆರಂಭಿಸಲಾಗಿದೆ. ಮಲೆ ಮಹಾದೇಶ್ವರ ಬೆಟ್ಟದಿಂದ ಆರಂಭಗೊಂಡಿರುವ ಅಭಿಯಾನಕ್ಕೆ ಈಗ 30 ದಿನ ತುಂಬಿದೆ. ಇದು ಸಂಭ್ರಮದ ಸಮಾವೇಶವಲ್ಲ. ಹಕ್ಕೊತ್ತಾಯದ ಅಭಿಯಾನ ಎಂದರು. ನಾನು ಹೋರಾಟ ಮಾಡಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ನಾನು ಇಂದೇ ಹೋರಾಟ ಕೈ ಬಿಡುತ್ತೇನೆ. ಈ ಹಸಿರು ಶಾಲು ನಿಮ್ಮ ಕೊರಳಿಗೆ ಹಾಕುತ್ತೇನೆ. ಯಾರು ಹೋರಾಟ ನಡೆಸಲು ಮುಂದೆ ಬರುತ್ತಾರೆ ಅವರಿಗೆ ನೇತೃತ್ವ ವಹಿಸಿ ಕೊಡಲು ಸಿದ್ಧ ಎಂದರು.

ಪಂಚಮಸಾಲಿ ಹೋರಾಟ ಹತ್ತಿಕ್ಕಲು ಷಡ್ಯಂತ್ರ: ಕೂಡಲ ಶ್ರೀ

ಅ.1ರಿಂದ ಮಕ್ಕಳ ಜತೆ ಧರ​ಣಿ​:

2 ಎ ಮೀಸಲಾತಿಗಾಗಿ ಆಗ್ರಹಿಸಿ ಅ.1ರಿಂದ ಮಕ್ಕಳ ಜತಗೆ ಧರಣಿ ಮಾಡುತ್ತೇವೆ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು. ನಾವು ಪ್ರತಿಭಟನೆ ಮಾಡಿದರೆ ಕಲ್ಲು ಹೊಡೆಸುತ್ತೇವೆಂದು ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಕಲ್ಲು ಎಸೆಯಲಿ ನೋಡೋಣ ಎಂದು ಕಾಶಪ್ಪನವರ್‌ ಸವಾಲು ಹಾಕಿದರು.