ಗದಗ(ಫೆ.27): ಫೆ 25 ರಂದು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಹೆಚ್‌.ಕೆ. ಪಾಟೀಲ್‌ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್‌ ಹರಿಹಾಯ್ದಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟ್ರ್ಯಾಕ್ಟರ್ ಚಾಲನೆ ಮಾಡಿದ ಹೆಚ್‌.ಕೆ. ಪಾಟೀಲ್‌ ಅವರಿಗೆ ಲೈಸೆನ್ಸ್ ಇದೆಯೇ? ಇದ್ದರೆ ಒಳ್ಳೆದು, ಅವರಲ್ಲಿ ಲೈಸೆನ್ಸ್ ಇರದಿದ್ರೆ ಹಿರಿಯ ರಾಜಕಾರಣಿ ಶೋಭೆ ತರುವಂತದಲ್ಲ. ದೆಹಲಿಯಲ್ಲಿ ನಡೆದ ಘಟನೆಯ ಹಾಗೇ ಮಾಡುವ ವಿಚಾರ ಹೆಚ್‌.ಕೆ. ಪಾಟೀಲ್‌ ಇದ್ದಂತೆ ಇತ್ತು ಎನ್ನಿಸುತ್ತದೆ ಅವರ ವರ್ತನೆ. ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾನೂನಿಗಿಂತ ಮಿಗಿಲಾದವರು ಯಾರು ಇಲ್ಲಾ, ಇನ್ನೊಮ್ಮೆ ಕಾನೂನು ಉಲ್ಲಂಘನೆ ಮಾಡಿದರೆ ಸರ್ಕಾರ ಅಧಿಕಾರ ಬಳಸಬೇಕಾಗುತ್ತದೆ ಎಂದು ಹೇಳಿದ್ದಾರೆ. 

'ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್‌ಎಸ್‌'

ಹೆಚ್‌.ಕೆ. ಪಾಟೀಲ್‌ ನಡೆದುಕೊಂಡ ರೀತಿ ಅತ್ಯಂತ ಖಂಡನೀಯವಾಗಿದ್ದು, ಅವರು ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದಾರೆ. ಅವರಿಂದ ಈ ರೀತಿಯ ವರ್ತನೆ ನಿರೀಕ್ಷೆ ಮಾಡಿರಲಿಲ್ಲ. ಮುಂದೆಯೂ ಹೀಗೆಯೇ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ಖಡಕ್‌ ಎಚ್ಚರಿಕೆ ನೀಡಿದ್ದಾರೆ. 

ಗಡ್ಡ ಬಿಟ್ರೆ., ನೀವು ರವೀಂದ್ರನಾಥ ಟ್ಯಾಗೋರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದ ಹೆಚ್‌.ಕೆ. ಪಾಟೀಲ್‌ ವಿರುದ್ಧ ಸಚಿವ ಸಿ.ಸಿ. ಪಾಟೀಲ್‌ ಹರಿಹಾಯ್ದಿದ್ದಾರೆ. 

ಎಸ್ಪಿ ಯತೀಶ್ ತರಾಟೆಗೆ ತೆಗೆದುಕೊಂಡ ಸಚಿವರು

ಟ್ರ್ಯಾಕ್ಟರ್ ಮೂಲಕ ಜಿಲ್ಲಾಡಳಿತ ಭವನಕ್ಕೆ ಶಾಸಕ ಹೆಚ್‌.ಕೆ.ಪಾಟೀಲ್‌ ನುಗ್ಗಿದ್ದರು. ಹೀಗಾಗಿ ಸಚಿವ ಸಿ. ಸಿ. ಪಾಟೀಲ್‌ ಎಸ್ಪಿ ಎನ್.ಯತೀಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಒಳಗಡೆ ಟ್ರ್ಯಾಕ್ಟರ್ ಯಾಕೆ ಬಿಟ್ರೀ ಅದಕ್ ಯಾರ್ ಅನುಮತಿ ಕೊಟ್ರು. ಅವರ ಸರ್ಕಾರ ಇದ್ದಾಗ ವಿರೋಧ ಪಕ್ಷದವರನ್ನು ಹ್ಯಾಂಗ್ ನಡೆಸಿಕೊಂಡ್ರ ನೋಡಿಲ್ಲಾ? ಟ್ರ್ಯಾಕ್ಟರ್‌ ರ‍್ಯಾಲಿ ನಡೆಯುವಾಗ ಯಾವ ಸಿಬ್ಬಂದಿಗಳು ಇದ್ದರು ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದ್ದಾರೆ. 

ನಾಳೆ ಎಲ್ಲರೂ ಅದನ್ನೇ ಮಾಡ್ತಾರೆ, ಕತ್ತಿ ಮೆರವಣಿಗೆ ಮಾಡಿಕೊಂಡು ಬರ್ತಾರೆ ಅವರನ್ನು ಬಿಡ್ತೀರಾ?, ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಗದಗ ಎಸ್ಪಿ ಯತೀಶ ಅವರಿಗೆ ಸಚಿವ ಸಿ.ಸಿ. ಪಾಟೀಲ್‌ ಖಡಕ್‌ ವಾರ್ನ್ ಮಾಡಿದ್ದಾರೆ.