ಒಂದು ವಾಟ್ಸಾಪ್‌ ಮೆಸೇಜ್‌ಗೆ 2 ಸಾವಿರದಿಂದ 3 ಸಾವಿರ ಜನರು ಸೇರುತ್ತಾರೆ ಎಂದರೆ ಹೇಗೆ ಸಾಧ್ಯ?| ರಾಜಧಾನಿಯಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಸಂಚು. ಇಷ್ಟೆಲ್ಲಾ ಗಲಾಟೆ ಹಿಂಸಾಚಾರ ನಡೆದರೂ ಕಾಂಗ್ರೆಸ್‌ ಪಕ್ಷ ಖಂಡಿಸುತ್ತಿಲ್ಲ ಯಾಕೆ? ಎನ್ನುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ: ಸಚಿವ ಸಿ.ಸಿ. ಪಾಟೀಲ| 

ಗದಗ(ಆ.15): ರಾಜಧಾನಿ ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜೆ. ಹಳ್ಳಿಯಲ್ಲಿ ನಡೆದಿರುವ ಘಟನೆಯನ್ನು ಖಂಡಿಸುವ ನೈತಿಕ ಧೈರ್ಯ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಕಿಡಿಕಾರಿದ್ದಾರೆ.

"

ಗಲಭೆಯ ಕುರಿತು ಗದಗ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಕೇವಲ ಒಂದು ವಾಟ್ಸಾಪ್‌ ಮೆಸೇಜ್‌ಗೆ 2 ಸಾವಿರದಿಂದ 3 ಸಾವಿರ ಜನರು ಸೇರುತ್ತಾರೆ ಎಂದರೆ ಹೇಗೆ ಸಾಧ್ಯ? ರಾಜಧಾನಿಯಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಸಂಚು. ಇಷ್ಟೆಲ್ಲಾ ಗಲಾಟೆ ಹಿಂಸಾಚಾರ ನಡೆದರೂ ಕಾಂಗ್ರೆಸ್‌ ಪಕ್ಷ ಖಂಡಿಸುತ್ತಿಲ್ಲ ಯಾಕೆ? ಎನ್ನುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ.

ನವೀನ್‌ ತಲೆಗೆ 51 ಲಕ್ಷ ಬಹುಮಾನ ಘೋಷಿಸಿದ್ದವನ ಬಂಧನ

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪಿಎಪ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಮೇಲೆ ಪ್ರಕರಣ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಅದೇ ಇಂದಿನ ಘಟನೆಗೆ ಕಾರಣವಾಗಿದೆ. ಕಾಂಗ್ರೆಸ್‌ ಪಕ್ಷಕ್ಕೂ ಹಾಗೂ ಬೆಂಗಳೂರು ಘಟನೆಗೂ ಸಂಪರ್ಕವಿದೆ ಎಂದರೆ ತಪ್ಪಾಗಲಾರದು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಮಾಡಿ ಬಿ.ಎಸ್‌. ಯಡಿಯೂರಪ್ಪನವಿಗೆ ಕೆಟ್ಟಹೆಸರು ತರಬೇಕು ಎನ್ನುವದೇ ಕಾಂಗ್ರೆಸ್‌ ಉದ್ದೇಶವಾಗಿದೆ. ಘಟನೆ ಕುರಿತು ಸೂಕ್ತ ತನಿಖೆ ನಡೆಯುತ್ತಿದ್ದು, ಸದ್ಯದಲ್ಲೇ ಕಾಂಗ್ರೆಸ್‌ ಬಣ್ಣ ಕಳಚಿ ಬೀಳಲಿದೆ.

ಗಲಭೆಗೆ ಕಾರಣವಾಗಿರುವ ಸಂಘಟನೆಗಳ ನಿಷೇಧ ಕುರಿತು ಗುರುವಾರ ಕ್ಯಾಬಿನೆಟ್‌ನಲ್ಲಿ ನಿರ್ಧಾರವಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರ ಆಸ್ತಿಯನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ವಸೂಲಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ರಾಮಣ್ಣ ಲಮಾಣಿ ಹಾಗೂ ಎಸ್‌.ವಿ. ಸಂಕನೂರ ಹಾಜರಿದ್ದರು.