ಲಾಕ್‌ಡೌನ್‌ಗಿಂತ ಜನರ ಜಾಗೃತಿ ಮುಖ್ಯ| ಕೊರೋನಾ ಸೊಂಕಿಗಿಂತ ಹೆದರಿ ಸತ್ತವರೇ ಜಾಸ್ತಿ| ಕೋವಿಡ್‌ ನಡುವೆಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು|ಅಭಿವೃದ್ಧಿಯನ್ನೂ ಮಾಡಲಾಗುತ್ತದೆ, ರಾಜ್ಯದಲ್ಲಿನ ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ: ಬಿ.ಸಿ.ಪಾಟೀಲ್‌| 

ಕೊಪ್ಪಳ(ಏ.17): ಕೋವಿಡ್‌ ಹೋಗುತ್ತೆ ಎಂದು ನಾವೆಲ್ಲ ನಂಬಿದ್ದೆವು. ಆದರೆ ಮತ್ತೆ ಉಲ್ಬಣಿಸುತ್ತಿದೆ. ಸರ್ಕಾರ ಮತ್ತೆ ಲಾಕ್‌ಡೌನ್‌ ಘೋಷಣೆ ಮಾಡಲ್ಲ. ಇದರಲ್ಲಿ ಜನರು ಸಹಕಾರ ನೀಡಿ, ಅಂತರ ಕಾಪಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

ಕೊಪ್ಪಳದ ಗಿಣಗೇರಾ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಯಡಿಯೂರಪ್ಪ ಅವರು ಲಾಕ್‌ಡೌನ್‌ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ, ಸಿಎಂ ಏ. 18ರಂದು ಮತ್ತೆ ಸರ್ವಪಕ್ಷಗಳ ಸಭೆಯನ್ನೂ ಕರೆದಿದ್ದಾರೆ. ಲಾಕ್‌ಡೌನ್‌ ಮಾಡುವುದು ಸರಿಯಲ್ಲ. ಜನರೂ ಜವಾಬ್ದಾರಿಯಿಂದ ವರ್ತನೆ ಮಾಡಬೇಕು. ಜಾತ್ರೆ, ಮದುವೆ ಸಮಾರಂಭದಲ್ಲಿ ಜನ ನಿಯಂತ್ರಣ ಇರಬೇಕು. ಇಲ್ಲಿ ಜನರ ದೊಡ್ಡ ಪಾತ್ರವಿದೆ ಎಂದರು.

ಮಹಾರಾಷ್ಟ್ರ, ದೆಹಲಿಯಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಸೋಂಕು ಉಲ್ಬಣವಾಗಿದೆ. ನಾವೂ ಜನರಿಗೆ ಇದನ್ನು ಬಿಟ್ಟಿದ್ದೇವೆ. ಜನರಲ್ಲಿ ಜಾಗೃತಿ ಬರಲಿ. ಬರಿ ಕಾನೂನಿನ ಚೌಕಟ್ಟಿನಲ್ಲಿ ಬಿಗಿ ಮಾಡುವುದಕ್ಕಿಂತ ಜನರ ಸಹಕಾರ ಬೇಕಾಗುತ್ತದೆ. ಕಳೆದ ವರ್ಷ ಲಾಕ್‌ಡೌನ್‌ನಿಂದ ತುಂಬಾ ಸಂಕಷ್ಟ ಎದುರಿಸಿದ್ದಾರೆ. ಈ ಬಾರಿ ಸಹಕಾರ ನೀಡದಿದ್ದರೆ ಮುಂದಿನ ದಿನದಲ್ಲಿ ಲಾಕ್‌ಡೌನ್‌ ಅನಿವಾರ್ಯವಾಗಲಿದೆ ಎಂದರು.

ಕೊಪ್ಪಳ: ಕಡುಬಡತನದಲ್ಲಿ ಅರಳಿದ ಪ್ರತಿಭೆ, ರಾಷ್ಟ್ರೀಯ ಭದ್ರತಾ ಪಡೆಗೆ ಯುವತಿ ಆಯ್ಕೆ..!

ಕೋವಿಡ್‌ ನಡುವೆಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು. ಅಭಿವೃದ್ಧಿಯನ್ನೂ ಮಾಡಲಾಗುತ್ತದೆ ಎಂದರಲ್ಲದೇ, ರಾಜ್ಯದಲ್ಲಿನ ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.
ಇನ್ನು ಸಿದ್ದರಾಮಯ್ಯ-ಈಶ್ವರಪ್ಪ ಅವರು ಎರಡು ಮದ್ದಾನೆಗಳಿದ್ದಂತೆ. ಮದ್ದಾನೆಗಳ ಮಧ್ಯೆ ಗುಬ್ಬಿ ಹೋಗಿ ಬುದ್ಧಿ ಹೇಳುವುದು ಪೆದ್ದ ಎನ್ನುವ ಮಾತಿದೆ. ಸಿದ್ದು ಈಶ್ವರಪ್ಪರಿಗೆ ಉತ್ತರ ಕೊಡ್ತಾರೆ. ಈಶ್ವರಪ್ಪ ಅವರು ಸಿದ್ದು ಅವರಿಗೆ ಉತ್ತರ ಕೊಡ್ತಾರೆ. ನಾನು ಗುಬ್ಬಿ ಇದ್ದಂತೆ. ಅದಕ್ಕೆ ನಾನೇಕೆ ಉತ್ತರ ಕೊಡ್ಲಿ ಎಂದರು. ಇದುವರೆಗೂ ಚಿತ್ರಮಂದಿರ ಹಾಗೂ ಹೋಟೆಲ್‌ಗಳಿಗೆ ಅನುಮತಿ ನೀಡಲಾಗಿತ್ತು. ಇಂತಹ ಜಾಗಗಳಲ್ಲಿ ಜನರ ಸಹಕಾರ ಶೇ. 100ರಷ್ಟಿರಬೇಕು. ಆದರೆ, ಕೇವಲ ಶೇ. 50ರಷ್ಟು ಮಾತ್ರ ದೊರಕುತ್ತಿದೆ ಎಂದರು.

ಅಂಜನಾದ್ರಿ ಅಭಿವೃದ್ಧಿಯ ಕುರಿತು ಸಚಿವ ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ನನ್ನ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು. ಆದರೆ ಕೋಟಾ ಶ್ರೀನಿವಾಸ ಅವರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಭೆ ಮುಂದೂಡಿದೆ. ಹನುಮಂತ ಜನಿಸಿದ್ದು ಅಂಜಿನಾದ್ರಿಯಲ್ಲಿಯೇ ಎನ್ನುವುದು ದಾಖಲೆ ಸಾರಿ ಸಾರಿ ಹೇಳುತ್ತವೆ. ಟಿಟಿಡಿಯವರು ಏನೇ ಹೇಳಿದರೂ ನಾವು ಕೊಪ್ಪಳದ ಜನತೆ ಹನುಮಂತ ಜನಿಸಿದ್ದು ಅಂಜಿನಾದ್ರಿಯಲ್ಲೇ ಎಂದು ಹೇಳುತ್ತವೆ. ಅದನ್ನು ಸುಮ್ಮನೆ ಮಾತನಾಡಿ ನಾವು ವಿವಾದ ಮಾಡುವುದಿಲ್ಲ. ರೈತ ಮಿತ್ರ ನೇಮಕ ಮಾಡಿಕೊಳ್ಳುವ ಪ್ರಸ್ತಾಪ ಸರ್ಕಾರದ ಮುಂದಿತ್ತು. ಆದರೆ ಕೋವಿಡ್‌ ಉಲ್ಭಣಿಸಿದ ಹಿನ್ನೆಲೆಯಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದರು.

ಕೋವಿಡ್‌ ಹಿನ್ನೆಲೆಯಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಹೊಲದಲ್ಲಿಯೇ ಬೆಳೆ ನಾಶ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು, ನೀವೆಲ್ಲಾ ಇಂತಹ ಕಾಂಟ್ರವರ್ಸಿ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು. ಇದು ರೈತರ ಸಮಸ್ಯೆ, ಯಾವ ಕಾಂಟ್ರವರ್ಸಿ ಅಲ್ಲ. ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂಬ ಮರು ಪ್ರಶ್ನೆಗೂ ಸಚಿವರು ಗರಂ ಆದರಲ್ಲದೇ, ಕೊನೆಗೆ ಬೆಲೆ ಕುಸಿದಿದೆ ಎಂದಾಕ್ಷಣ ರೈತರು ಬೆಳೆ ನಾಶಮಾಡಬಾರದು. ಸ್ವಲ್ಪ ದಿನ ಕಾದು ಮಾರಾಟ ಮಾಡಬೇಕು ಎಂದು ಹೇಳಿ ವಾಹನವನ್ನೇರಿದರು.

ಕೊರೊನಾ ಸೊಂಕಿಗಿಂತ ಹೆದರಿ ಸತ್ತವರೇ ಜಾಸ್ತಿ

ಕೊರೋನಾ ಸೋಂಕಿಗಿಂತ ಹೆದರಿ ಸತ್ತವರ ಸಂಖ್ಯೆ ಜಾಸ್ತಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು. ನಗರದ ಪ್ರವಾಸಿಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಕೊರೋನಾ ಸೋಂಕು ತಗುಲಿದಾಗ, ಹೆದರಿ ಹೃದಯಾಘಾತದಿಂದ ಸತ್ತವರೇ ಜಾಸ್ತಿ. ಕಳೆದ ಬಾರಿ ಅಷ್ಟೊಂದು ಭಯದ ವಾತಾವರಣ ಇತ್ತು. ಈಗ ಮತ್ತೇ ಅದೇ ವಾತಾವರಣ ಉದ್ಭವಿಸಿದೆ. ಈ ಬಾರಿ ಎಂಟು ದೇಶದ ವೈರಸ್‌ ಮಿಸ್‌ ಆಗಿದೆ. ಅದಾಗ್ಯೂ ಯಾರೂ ಮುಂಜಾಗೃತಾ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಸೋಂಕು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಇದರ ತೀವ್ರತೆ ಕಡಿಮೆಯಾಗಿದೆ. ಜನರು ಜಾಗೃತಿಯಿಂದ ಇರಬೇಕು ಎಂದರು.