ಕನಕಗಿರಿ(ಏ.17): ತೀರಾ ಬಡತನದ ಹಿನ್ನೆಲೆಯಲ್ಲಿ ಮಾವನ ಆಶ್ರಯದಲ್ಲಿ ಬೆಳೆದ ತಾಲೂಕಿನ ಕೆ. ಕಾಟಾಪೂರ ಗ್ರಾಮದ ಬಾಲಕಿಯೋರ್ವಳು ರಾಷ್ಟ್ರೀಯ ಭದ್ರತಾ ಪಡೆಗೆ ಆಯ್ಕೆಯಾಗಿದ್ದು ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಕೆ.ಕಾಟಾಪೂರ ಗ್ರಾಮದ ಲಕ್ಷ್ಮೀ ಪಚ್ಚೇರ ರಾಷ್ಟ್ರೀಯ ಭದ್ರತಾ ಪಡೆಯ ಸಶಸ್ತ್ರ ಸೀಮಾ ಪಡೆ (ಎಸ್‌ಎಸ್‌ಬಿ)ಗೆ ಆಯ್ಕೆಯಾಗಿದ್ದಾಳೆ.

ಲಕ್ಷ್ಮೀ ತನ್ನ ಸೋದರ ಮಾವ ಹನುಮಂತಪ್ಪ ಗುಡ್ಡಣ್ಣನವರ್‌ ಆಶ್ರಯದಲ್ಲಿ ಪ್ರಾಥಮಿಕ, ಪ್ರೌಢ, ಪಿಯುಸಿ ಹಾಗೂ ಪದವಿಯವರೆಗೆ ವ್ಯಾಸಂಗ ಮಾಡಿದ್ದಾಳೆ. ಹನುಮಂತಪ್ಪ ಗುಡ್ಡಣ್ಣನವರ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದು, ಸದ್ಯ ಮೈಸೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2019ರಲ್ಲಿ ಲಕ್ಷ್ಮೀ ಪಚ್ಚೇರ್‌ ರಾಷ್ಟ್ರೀಯ ಭದ್ರತಾ ಪಡೆಯ ವಿಭಾಗದ ಶಸಸ್ತ್ರ ಸೀಮಾ ಪಡೆ (ಎಸ್‌ಎಸ್‌ಬಿ) ಪರೀಕ್ಷೆ ಬರೆದಿದ್ದಳು. 2020ರಲ್ಲಿಯೇ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಲಿಲ್ಲ. 2021ರಲ್ಲಿ ಫಲಿತಾಂಶ ಬಂದಿದ್ದು, ಲಕ್ಷ್ಮೀ ಶಸಸ್ತ್ರ ಸೀಮಾ ಪಡೆಗೆ ಜಿಲ್ಲೆಯ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.

ಹನುಮ ಜನ್ಮಸ್ಥಳ ವಿವಾದ: ಇತಿಹಾಸ ತಜ್ಞರಿಂದ ಸಂಶೋಧನೆ ಅಗತ್ಯ, ಲಿಂಬಾವಳಿ

ಏ. 19ರಂದು ತರಬೇತಿಗೆ ಹಾಜರಾಗಲಿರುವ ಲಕ್ಷ್ಮೀಗೆ ತಹಸೀಲ್ದಾರ ರವಿ ಅಂಗಡಿ ವೈಯಕ್ತಿಕವಾಗಿ 5 ಸಾವಿರ ರು. ಧನಸಹಾಯ ಮಾಡಿದ್ದಾರೆ. ಯುವತಿಯ ಈ ಸಾಧನೆಗೆ ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು ಸಹಾಯಹಸ್ತ ಚಾಚಿದ್ದಾರೆ. ಆಸ್ಸಾಂನ ರಾಜ್ಯದ ಭೂತಾನ್‌-ನೇಪಾಳ ಗಡಿಯಲ್ಲಿ ತರಬೇತಿ ಪಡೆದು ಕಾರ್ಯನಿರ್ವಹಿಸಲಿದ್ದಾಳೆ.

ಯುವತಿಯ ಪೋಷಕರು ಕೂಲಿ- ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೂವರು ಸಹೋದರರ ಪೈಕಿ ಇಬ್ಬರು ಓದುತ್ತಿದ್ದು, ಇನ್ನೊಬ್ಬ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾನೆ. ಕಡುಬಡತನದ ನಡುವೆಯೂ ದೇಶ ಸೇವೆಗೆ ಅವಕಾಶ ದೊರೆತು, ಗ್ರಾಮಕ್ಕೆ ಕೀರ್ತಿ ತಂದಿರುವ ಲಕ್ಷ್ಮೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರು ಹಾಗೂ ಚನಾಯಿತ ಪ್ರತಿನಿಧಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ದೇಶ ಕಾಯುವ ಮಹಾನ್‌ ಕಾರ್ಯ ದೊರೆತಿರುವುದಕ್ಕೆ ಬಹಳ ಸಂತೋಷವಾಗಿದೆ. ಯೋಧರಾಗಿ ನಿವೃತ್ತಿ ಹೊಂದಿದ ಸೋದರ ಮಾವನ ಪ್ರೇರಣೆಯೇ ಇದಕ್ಕೆ ಸ್ಫೂರ್ತಿ. ಜೀವನದಲ್ಲಿ ಅವರ ಋುಣ ತೀರಿಸುವ ವಿಶ್ವಾಸ ಹೊಂದಿದ್ದೇನೆ ಎಂದು ಶಸಸ್ತ್ರ ಸೀಮಾ ಪಡೆಗೆ ಆಯ್ಕೆಯಾದ ಯುವತಿ ಲಕ್ಷ್ಮೀ ಪಚ್ಚೇರ ತಿಳಿಸಿದ್ದಾರೆ.

ದೇಶ ರಕ್ಷಿಸುವ ದೊಡ್ಡ ಜವಾಬ್ದಾರಿಯುತ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಬಡ ಕುಟುಂಬದ ಯುವತಿ ಎಸ್‌ಎಸ್‌ಬಿ ಪಡೆಗೆ ಆಯ್ಕೆಯಾಗಿ ಜಿಲ್ಲೆ, ತಾಲೂಕು ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವ ಲಕ್ಷ್ಮೀಗೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಹಸೀಲ್ದಾರ ರವಿ ಅಂಗಡಿ ಹೇಳಿದ್ದಾರೆ.