ಹಾವೇರಿ(ಜೂ.29): ಜಿಲ್ಲೆಯ ಜನರ ಬಹುದಿನಗಳ ಮೆಡಿಕಲ್‌ ಕಾಲೇಜು ಕನಸು ನನಸಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾದ ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. 478 ಕೋಟಿ ರು. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಕೆಬಿಆರ್‌ ಇನ್ಫ್ರಾಟೆಕ್‌ ಸಂಸ್ಥೆ ಪಡೆದುಕೊಂಡಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ.

ಮೆಡಿಕಲ್‌ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ.60 ಮತ್ತು 40ರ ಅನುಪಾತದಲ್ಲಿ ಅನುದಾನ ನೀಡಲಿವೆ. ಸ್ಥಳ ಗೊಂದಲ ಈಗಾಗಲೇ ಬಗೆಹರಿದಿದ್ದು, ತಾಲೂಕಿನ ದೇವಗಿರಿ ಯಲ್ಲಾಪುರದಲ್ಲಿ ಮೆಡಿಕಲ್‌ ಕಾಲೇಜು ಆರಂಭಕ್ಕೆ ಸ್ಥಳ ನಿಗದಿಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಕರೆದ ಟೆಂಡರ್‌ ಪ್ರಕ್ರಿಯೆ ಈಗ ಮುಗಿದಿದ್ದು, ಬೆಂಗಳೂರಿನ ಕೆಬಿಆರ್‌ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ. ಇದರೊಂದಿಗೆ ಆರಂಭಿಕ ಪ್ರಕ್ರಿಯೆ ಮುಗಿದಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅಂದರೆ, 2021-22ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗುವ ಎಲ್ಲಾ ಸಾಧ್ಯತೆ ಕಂಡುಬರುತ್ತಿದೆ.

ಮದುವೆ ನಿಲ್ಲಿಸಿದ ಕೊರೋನಾ ವೈರಸ್ , ಮಧಮಗಳೂ ಸೇರಿದಂತೆ 20 ಜನ ಕ್ವಾರಂಟೈನ್!

ಈಗಾಗಲೇ ಮೆಡಿಕಲ್‌ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ಒಪ್ಪಿಗೆ ನೀಡಿದೆ. 2012ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಘೋಷಣೆಯಾಗಿ ಆಬಳಿಕ ನನæಗುದಿಗೆ ಬಿದ್ದಿದ್ದ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಮತ್ತೆ ಬಿಜೆಪಿ ಸರ್ಕಾರದಿಂದಲೇ ಅನುಷ್ಠಾನವಾಗುತ್ತಿದೆ.

ಕೇಂದ್ರ ಸರ್ಕಾರ ಕಾಲೇಜು ಆರಂಭಕ್ಕೆ ಅಗತ್ಯವಿರುವ 195 ಕೋಟಿ ರು.ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಕಳೆದ ಅನೇಕ ವರ್ಷಗಳಿಂದ ಹಾವೇರಿಗೆ ಮೆಡಿಕಲ್‌ ಕಾಲೇಜು ಕೇವಲ ಭಾಷಣಕ್ಕೆ ಸೀಮಿತವಾಗಿತ್ತು. ಆಡಳಿತ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದವರು ಈ ಬಾರಿ, ಮುಂದಿನ ಬಾರಿ ಎನ್ನುತ್ತಲೇ ಕಾಲ ಕಳೆದಿದ್ದರು. 7 ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಘೋಷಣೆ ಮಾಡಿ 2014ರಲ್ಲಿ ಸಿದ್ದರಾಮಯ್ಯ ಅವರೂ ಮತ್ತೊಮ್ಮೆ ಘೋಷಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ಬಜೆಟ್‌ನಲ್ಲೂ ಮೆಡಿಕಲ್‌ ಕಾಲೇಜು ಆರಂಭಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಬಗ್ಗೆ ಹೇಳುತ್ತ ಬಂದರೂ ಬೇಡಿಕೆ ಈಡೇರಿರಲಿಲ್ಲ. ಅಂತೂ ಈಗ ಮೆಡಿಕಲ್‌ ಕಾಲೇಜಿನ ಕನಸು ನನಸಾಗುವ ಹಂತ ಬಂದಿದೆ.
ನಗರದ ಹೊರವಲಯದ ದೇವಗಿರಿ ಯಲ್ಲಾಪುರ ಬಳಿ ಜಿಲ್ಲಾಡಳಿತವು 53 ಎಕರೆ ಜಾಗವನ್ನು ಗುರುತಿಸಿದ್ದು, ಅದರಲ್ಲಿ 34 ಎಕರೆ ಜಾಗವನ್ನು ಮೆಡಿಕಲ್‌ ಕಾಲೇಜಿಗೆ ಮೀಸಲಿಡಲಾಗಿದೆ. ಅಲ್ಲದೇ ಆ ಜಾಗಕ್ಕೆ ಸಂಬಂಧಿಸಿದ ಪಹಣಿಯಲ್ಲಿ

ಮೆಡಿಕಲ್‌ ಕಾಲೇಜಿನ ಹೆಸರು ನಮೂದಾಗಿದೆ.

ಮೆಡಿಕಲ್‌ ಕಾಲೇಜಿಗೆ ವಿಶೇಷಾಧಿಕಾರಿಯಾಗಿ ಡಾ.ಉದಯ ಮುಳಗುಂದ ಅವರನ್ನು ಸರ್ಕಾರ ನೇಮಿಸಿದೆ. ಮೆಡಿಕಲ್‌ ಕಾಲೇಜು ಕಟ್ಟಡದಲ್ಲಿ ಶೈಕ್ಷಣಿಕ ವಿಭಾಗ, ಪ್ರಯೋಗಾಲಯ, ಲೈಬ್ರರಿ, ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ ವಸತಿಗೃಹ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಇತ್ಯಾದಿ ಕಟ್ಟಡಗಳೂ ಇದರಲ್ಲಿ ಸೇರಿವೆ.

ರಾಜ್ಯ ಸರ್ಕಾರ ಪ್ರಸ್ತುತ ಕೊರೋನಾ ನಿಯಂತ್ರಣಕ್ಕೆ ಹರಸಾಹಸಪಡುತ್ತಿರುವ ನಡುವೆಯೂ ಮೆಡಿಕಲ್‌ ಕಾಲೇಜು ಶಂಕುಸ್ಥಾಪನೆಗೆ ಆದ್ಯತೆ ನೀಡಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಸಿ ಮೆಡಿಕಲ್‌ ಕಾಲೇಜಿಗೆ ಶಂಕು ಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ. ಅಂತೂ ಜಿಲ್ಲೆಯ ಜನರ ಬಹು ವರ್ಷಗಳ ಕನಸು ನನಸಾಗುವ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು, ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಗಳಿಂದಲೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಸಿಎಂ ಅವರನ್ನು ಇಲ್ಲಿಗೆ ಕರೆಸಿ ಅಥವಾ ವರ್ಚುವಲ್‌ ರೀತಿಯಲ್ಲಿ ಚಾಲನೆ ನೀಡಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.