Asianet Suvarna News Asianet Suvarna News

'ದುಷ್ಟರ ನಿಗ್ರಹ, ಶಿಷ್ಟರ ಪರಿಪಾಲನೆ ಇಲಾಖೆ ನನಗೆ ಸಿಕ್ಕಿದೆ'

ನಿಮ್ಮೆಲ್ಲರ ಆಶೀರ್ವಾದದಿಂದ ದುಷ್ಟರನ್ನು ನಿಗ್ರಹಿಸುವ, ಶಿಷ್ಟರನ್ನು ಪರಿಪಾಲನೆ ಮಾಡುವ ಇಲಾಖೆ ನನಗೆ ಸಿಕ್ಕಿದೆ ಎಂದ  ಸಚಿವ ಬಸವರಾಜ ಬೊಮ್ಮಾಯಿ| ಈ ಕರ್ತವ್ಯದಲ್ಲಿ ನಾನು ಯಶಸ್ವಿಯಾಗಬೇಕಾದರೆ ಇದಕ್ಕೆ ಆ ದೇವಿಯ ಆಶೀರ್ವಾದ ಅಗತ್ಯ ಎಂದು ಹೇಳಿದ್ದಾರೆ| ಯಾವ ಇಲಾಖೆ ಸಿಗುತ್ತದೆ ಎಂಬುದೇ ನನಗೆ ಗೊತ್ತೇ ಇರಲಿಲ್ಲ| ನಮ್ಮಲ್ಲಿರುವ ದುಷ್ಟನಿಗ್ರಹಗಳನ್ನು ನಿಗ್ರಹಿಸಿದಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಬಂದು ಪರಿಶುದ್ದತೆಯ ಜೀವನ ನಡೆಸಲು ಸಾಧ್ಯವಿದೆ| 

Minister Basavaraj Bommai Talked about his Department
Author
Bengaluru, First Published Oct 3, 2019, 12:30 PM IST

ಶಿಗ್ಗಾಂವಿ(ಅ.3): ನಿಮ್ಮೆಲ್ಲರ ಆಶೀರ್ವಾದದಿಂದ ದುಷ್ಟರನ್ನು ನಿಗ್ರಹಿಸುವ, ಶಿಷ್ಟರನ್ನು ಪರಿಪಾಲನೆ ಮಾಡುವ ಇಲಾಖೆ ನನಗೆ ಸಿಕ್ಕಿದೆ. ಈ ಕರ್ತವ್ಯದಲ್ಲಿ ನಾನು ಯಶಸ್ವಿಯಾಗಬೇಕಾದರೆ ಇದಕ್ಕೆ ಆ ದೇವಿಯ ಆಶೀರ್ವಾದ ಅಗತ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಆವರಣದಲ್ಲಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಸಮಿತಿ ಶಿಗ್ಗಾಂವಿ-ಗಂಜಿಗಟ್ಟಿವತಿಯಿಂದ ಶರನ್ನವರಾತ್ರಿ ಕಾರ್ಯಕ್ರಮದ ಪ್ರಯುಕ್ತ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಬಳಿಕ ಮಾತನಾಡಿದ ಅವರು, ಯಾವ ಇಲಾಖೆ ಸಿಗುತ್ತದೆ ಎಂಬುದೇ ನನಗೆ ಗೊತ್ತೇ ಇರಲಿಲ್ಲ. ಇಲಾಖೆ ಎಂಬುದು ನಿಗದಿಯಾದ ಮೇಲೆ ಆ ದೇವಿಯ ಮುಂದೆ ಕುಳಿತು ನನ್ನಿಂದ ಜನರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು, ದುಷ್ಟರನ್ನು ಸಂಹಾರ ಮಾಡುವ, ಶಿಷ್ಟರನ್ನ ರಕ್ಷಿಸುವ ಶಕ್ತಿಯನ್ನು ಕೊಡು ಎಂದು ಬೇಡಿಕೊಂಡೆ. ನಮ್ಮಲ್ಲಿರುವ ದುಷ್ಟನಿಗ್ರಹಗಳನ್ನು ನಿಗ್ರಹಿಸಿದಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಬಂದು ಪರಿಶುದ್ದತೆಯ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. 

ಈ ಕ್ಷೇತ್ರದ ಜನತೆಯ ಆಶೀರ್ವಾದವಿದ್ದು, ಈ ದೇವಿಯ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ. ಈ ಇಲಾಖೆಯಲ್ಲಿ ಅನ್ಯಾಯ, ಅಪಚಾರ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಈ ಮೂಲಕ ನನ್ನ ಜನತೆಗೆ ನೀಡÜುತ್ತೇನೆ. ನನ್ನ ಕ್ಷೇತ್ರದ ಜನತೆಯ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಂಡು ನನ್ನ ಕರ್ತವ್ಯ ಮಾಡುತ್ತೇನೆ. ಅಧಿಕಾರ ಬರುತ್ತದೆ, ಹೋಗುತ್ತದೆ. ನಮ್ಮ ಕಣ್ಣೆದುರೆ ಅಧಿಕಾರ ಪಡೆದಿದ್ದೇವೆ, ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ, ಜನರ ಆಶೀರ್ವಾದ ಎಲ್ಲಿ ವರೆಗೆ ಇರುತ್ತದೋ ಅಲ್ಲಿ ವರೆಗೆ ನಮ್ಮ ಅಭಿವೃದ್ಧಿಯ ನಿಜವಾದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುತ್ತೇವೆ ಎಂದು ಹೇಳಿದರು.

ದೇವಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ 6 ವರ್ಷ ಆರಾಮವಾಗಿದ್ದೆ. ವಾರದಲ್ಲಿ 4 ದಿನ ನನ್ನ ಕ್ಷೇತ್ರದಲ್ಲಿ ಇರುತ್ತಿದ್ದೆ. ಈಗ ಇಡೀ ರಾಜ್ಯದ ಜನ ಬರುತ್ತಾರೆ. ನನ್ನ ಕ್ಷೇತ್ರದ ಜನರನ್ನು ನೋಡುತ್ತೀರುತ್ತೇನೆ. ಆದರೆ, ಹತ್ತಿರದಿಂದ ಮಾತನಾಡಿಸಲು ಆಗದಿರುವಷ್ಟುಜನ ಇರುತ್ತಾರೆ. ಆಗ ನನಗೆ ಅಪರಾಧಿ ಮನೋಭಾವ ಆವರಿಸಿರುತ್ತದೆ, ಅಪರಾಧಿ ಸ್ಥಾನದಲ್ಲಿ ನಿಂತ ಅನುಭವ ಆಗುತ್ತಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಶರಣರ ಗುಣವನ್ನ ಮರಣದಲ್ಲಿ ನೋಡು ಎಂಬಂತೆ ನಮ್ಮನ್ನಗಲಿದ ಗಣ್ಯರಾದ ಶಂಕ್ರಗೌಡ್ರ ಪಾಟೀಲ, ಚಂದ್ರಣ್ಣ ಯಲಿಗಾರ, ನಾಗಪ್ಪ ಯಲಿಗಾರ, ಟಿ.ವಿ. ದೇಶಪಾಂಡೆ, ಹಂದಿಗನೂರ ದೇಸಾಯಿ ಮತ್ತು ಹನುಮಂತಗೌಡ್ರು ಅವರು ಜಾತ್ರೆ ಹುಟ್ಟು ಹಾಕಿದರು. ಅವರೆಲ್ಲ ಹೆಚ್ಚು ಜ್ಞಾನ ಪಡೆದವರಾಗಿದ್ದರು ಎಂದರು

ನಮ್ಮ ಶಿಗ್ಗಾಂವಿ ಪ್ರವಾಸಿ ಮಂದಿರದ ಹತ್ತಿರ ದ್ಯಾಮವ್ವ ದೇವಿಗೆ ಸಂಬಂಧಿಸಿದ ಜಾಗವಿದ್ದು, ಕಮಿಟಿಯವರು ಮತ್ತು ಗೃಹ ಸಚಿವರು ಕೂಡಿ ಅಲ್ಲಿರುವ ವ್ಯಾಜ್ಯ ಬಗೆಹರಿಸಿ ಅಲ್ಲಿ ಒಂದು ದೊಡ್ಡ ಸಭಾಭವನದ ಮಂಗಳ ಕಾರ್ಯಾಲಯವನ್ನು ಗ್ರಾಮದೇವಿಯ ಹೆಸರಲ್ಲಿ ಕಟ್ಟಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಮಂಜುನಾಥ ಕುನ್ನೂರ ಅವರನ್ನು ದ್ಯಾಮವ್ವ ದೇವಿ ಜಾತ್ರಾ ಮಹೊತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಪ್ರವಚನಕಾರರು, ಗಾಯಕರು, ದ್ಯಾಮವ್ವ ದೇವಿ ಜಾತ್ರಾ ಮಹೊತ್ಸವ ಸಮಿತಿಯ ಸರ್ವ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತಾಧಿಕಾದಿಗಳು ಇದ್ದರು.
 

Follow Us:
Download App:
  • android
  • ios