* ಸಾರಿಗೆ ನೌಕರರ ವೇತನ ಹೆಚ್ಚಳ ಶೀಘ್ರ* ಬಿಎಂಟಿಸಿ ಹೆಚ್ಚುವರಿ ಸಿಬ್ಬಂದಿ ವಾಕರಸಾಸಂಗೆ ವರ್ಗಾವಣೆ* ರಾಜ್ಯಕ್ಕೆ 4 ಸಾವಿರ ಹೊಸ ಬಸ್ ಖರೀದಿ
ಉತ್ತರ ಕನ್ನಡ(ಮೇ.05): ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತು ಮುಖ್ಯಮಂತ್ರಿ ಜತೆ ಮಾತನಾಡಿದ್ದು, ಶೀಘ್ರದಲ್ಲಿ ವೇತನ ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಹೇಳಿದರು.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ(NWKRTC) ಸಿದ್ದಾಪುರ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ 4 ಸಾವಿರ ಬಸ್ ಬರಲಿದೆ. ಉತ್ತರ ಕನ್ನಡ(Uttara Kannada) ವಿಭಾಗಕ್ಕೂ ಹೆಚ್ಚಿನ ಬಸ್ ನೀಡಲಾಗುವುದು. ರಾಜ್ಯದ(Karnataka) ಎಲ್ಲ ಬಸ್ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟಕ್ಕೆ ಮಳಿಗೆ ಹಾಗೂ ಕುಳಿತು ಓದಲು ಬೇಕಾದ ರೂಮ್ ವ್ಯವಸ್ಥೆ ಮಾಡಲಾಗುವುದು ಎಂದರು.
ಕೋವಿಡ್(Covid-19) ಬಂದ ನಂತರ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಸಾರಿಗೆ ಸಂಸ್ಥೆ ಲಾಭದಾಯಕ ಮಾಡುವ ಇಚ್ಚಾಶಕ್ತಿ ಯಾರಿಗೂ ಇಲ್ಲ. ಸಿದ್ದಾಪುರ(Siddapur) ಹಳೆ ಬಸ್ ನಿಲ್ದಾಣದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕೂಡಲೇ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
BMTC: ಬೆಲೆ ಏರಿಕೆ ಮಧ್ಯೆ ಮತ್ತೊಂದು ಶಾಕಿಂಗ್ ಸುದ್ದಿ..!
ಕಲುಷಿತಗೊಳ್ಳುತ್ತಿರುವ ಇಂದಿನ ರಾಜಕಾರಣದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಿತ್ತೂರ ಕರ್ನಾಟಕದ ಆಧುನಿಕ ಗಾಂಧಿಯಿದ್ದಂತೆ ಸ್ವಾರ್ಥಿಗಳೇ ತುಂಬಿರುವ ರಾಜಕಾರಣದಲ್ಲಿ ಕಾಗೇರಿಯವರಂತವರು ಇರುವುದು ತೀರಾ ವಿರಳ. ಅವರನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಮಾತನಾಡಿ, ಸಿದ್ದಾಪುರದ ಜನರ ಬೇಡಿಕೆ ಈಡೇರಿಸಲು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ನನಗೆ ಬೇರೆಯವರಂತೆ ಡಂಗುರ ಬಾರಿಸಲು ಬರುವುದಿಲ್ಲ. ಅಭಿವೃದ್ಧಿ ಕಾರ್ಯ ಮಾಡುತ್ತಲೇ ಇರುತ್ತೇನೆ. ಸಂಸ್ಥೆಯ ಇಂಜಿನಿಯರಿಂಗ್ ವಿಭಾಗ ಸಾಕಷ್ಟುಸುಧಾರಿಸಬೇಕಿದೆ. ಸಿದ್ದಾಪುರದ ಹಳೆ ಬಸ್ ನಿಲ್ದಾಣದ ಜಾಗ ಖಾಲಿಯಾಗಿಡದೇ ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು. ಸಿದ್ದಾಪುರಕ್ಕೆ ಅಕ್ಕುಂಜಿಯಲ್ಲಿ 7 ಎಕರೆ ಜಾಗ ಗುರುತಿಸಲಾಗಿದ್ದು, ಡಿಪೋ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ್ ಮಾತನಾಡಿ, 2019ರಿಂದ ಆದಾಯವಿಲ್ಲದೇ ಸಾಕಷ್ಟು ನಷ್ಟದಲ್ಲಿದ್ದರೂ ಸಾರ್ವಜನಿಕರ ಸೇವೆಯಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲಾಗಿದೆ. ಸಂಸ್ಥೆಯಲ್ಲಿ 2 ಸಾವಿರ ಚಾಲಕ-ನಿರ್ವಾಹಕರು ನಿವೃತ್ತರಾಗಿದ್ದು, ಕೊರತೆಯಿರುವ ಸಿಬ್ಬಂದಿಯನ್ನು ತುಂಬಲು ಸಚಿವರಿಗೆ ಮನವಿ ಮಾಡಲಾಗಿದೆ. ಸರ್ಕಾರದಿಂದ ಬರಬೇಕಾದ 1 ಸಾವಿರ ಕೋಟಿ ಸಹಾಯಧನಕ್ಕಾಗಿ ಕೋರಲಾಗಿದೆ. ಸಾರ್ವಜನಿಕರ ಸಹಕಾರದಿಂದ ಸಂಸ್ಥೆ ಬಲಪಡಿಸಬೇಕಾಗಿದೆ ಎಂದರು.
ಈ ವೇಳೆ ಸಿದ್ದಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಕೆಲಗೇರಿ, ನಿರ್ದೇಶಕ ಸಿದ್ದಲಿಂಗ ಮಠದ್, ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ ಉಪಸ್ಥಿತರಿದ್ದರು.
ಬಿಎಂಟಿಸಿ ಹೆಚ್ಚುವರಿ ಸಿಬ್ಬಂದಿ ವಾಕರಸಾಸಂಗೆ ವರ್ಗಾವಣೆಗೆ ಪರಿಶೀಲನೆ
ಶಿರಸಿ: ಬಿಎಂಟಿಸಿಯಲ್ಲಿ(BMTC) ಹೆಚ್ಚುವರಿ ಇರುವ ಚಾಲಕ, ಕಂಡಕ್ಟರ್‌ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ನಗರದ ಹಳೇ ಬಸ್ ನಿಲ್ದಾಣ ಕಟ್ಟಡ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದ ಅವರು, ರಾಜ್ಯಕ್ಕೆ 4 ಸಾವಿರ ಹೊಸ ಬಸ್ ಖರೀದಿಸಲಾಗುತ್ತಿದ್ದು, ಅದರಲ್ಲಿ 150 ಬಸ್‌ಗಳನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡುತ್ತೇವೆ. ಚಾಲಕ ವೃತ್ತಿಯಲ್ಲಿ ಇರುವವರು ಹಲವು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ. ಪ್ರತಿ ತಿಂಗಳೂ ಅವರಿಗೆ ಸಂಬಳ ನೀಡುವ ವ್ಯವಸ್ಥೆ ಮಾಡುತ್ತೇವೆ. ಅವರ ವೇತನ ಪರಿಷ್ಕರಣೆಯನ್ನು ಶೀಘ್ರ ಮಾಡುತ್ತೇವೆ. ಪ್ರತಿಭಟನೆ ವೇಳೆ ವರ್ಗಾವಣೆಗೊಂಡವರಿಗೆ ಮಾತೃ ಡಿಪೋದಲ್ಲಿ ಕೆಲಸ ಮಾಡುವ ಅವಕಾಶ ಮಾಡಿಕೊಡಲಿದ್ದೇವೆ ಎಂದು ಭರವಸೆ ನೀಡಿದರು.
ಬಿಎಂಟಿಸಿ ‘ಡಿಜಿಟಲ್ ಪಾಸ್’ ಲೋಕಾರ್ಪಣೆ: ಕ್ಯುಆರ್ ಕೋಡ್ ತೋರಿಸಿ ಪ್ರಯಾಣ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿರಸಿಯ ಹಳೆ ಬಸ್ ನಿಲ್ದಾಣ 1968ರಲ್ಲಿ ನಿರ್ಮಾಣಗೊಂಡಿತ್ತು. ಕಟ್ಟಡ ಶಿಥಿಲಗೊಂಡ ಕಾರಣ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾದರೂ ಕೆಲ ತೊಂದರೆ ಉಂಟಾಗಿತ್ತು. 12 ತಿಂಗಳಿನಲ್ಲಿ ಈ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಪಂಡಿತ ಸಾರ್ವಜನಿಕ ಲೈಬ್ರರಿ ಕಟ್ಟಡದ ಜಾಗವನ್ನೂ ಬಳಸಿಕೊಳ್ಳುವ ಯತ್ನ ನಡೆದಿದೆ. ಬಸ್ ಸ್ಟ್ಯಾಂಡ್ ಎಂದರೆ ವಾಣಿಜ್ಯ ಮಳಿಗೆಯಲ್ಲ. ಅಲ್ಲಿಯ ಜಾಗ ಸಾರ್ವಜನಿಕರಿಗೆ ಲಭ್ಯವಾಗುವಂತಾಗಬೇಕು ಎಂದರು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಸರ್ಕಾರದಿಂದ ಹೊಸ ಬಸ್ ಖರೀದಿಗೆ ಅನುದಾನ ಬೇಕಾಗಿದೆ. ಗ್ರಾಮೀಣ ಪ್ರದೇಶಕ್ಕೆ ಚಾಲಕ, ನಿರ್ವಾಹಕರ ಕೊರತೆ ಉಂಟಾಗಿದೆ. ಕನಿಷ್ಠ 500 ಬಸ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅಗತ್ಯವಿದೆ ಎಂದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ ಇತರರಿದ್ದರು.
