*  ಶೀಘ್ರದಲ್ಲೇ ಬಿಎಂಟಿಸಿ ಟಿಕೆಟ್‌ ದರ ಏರಿಕೆ?*  ಸಗಟು ಡೀಸೆಲ್‌ ದರ ಪ್ರತಿ ಲೀಟರ್‌ಗೆ 25 ಏರಿಕೆ*  ಟಿಕೆಟ್‌ ದರ ಏರಿಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ 

ಬೆಂಗಳೂರು(ಏ.14): ಸಗಟು ಡೀಸೆಲ್‌(Diesel) ದರ ಲೀಟರ್‌ಗೆ 25 ಏರಿಕೆಯಾಗುತ್ತಿದ್ದಂತೆ ಬಿಎಂಟಿಸಿ(BMTC) ಬಸ್‌ ಪ್ರಯಾಣ ದರ ಹೆಚ್ಚಳದ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.

ಡೀಸೆಲ್‌ ಬೆಲೆ ಏರಿಕೆಯಿಂದ ಈಗಾಗಲೇ ನಷ್ಟದಲ್ಲಿ ಸಿಲುಕಿರುವ ಬಿಎಂಟಿಸಿಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಆದ್ದರಿಂದ ನಷ್ಟದ ಪ್ರಮಾಣ ಸರಿದೂಗಿಸುವ ಸಲುವಾಗಿ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಬಾರಿ ಶೇ.20ರಷ್ಟು ಬಸ್‌ ಟಿಕೆಟ್‌ ದರ(Ticket Fare) ಏರಿಕೆಗೆ ಪ್ರಸ್ತಾಪಿಸಿತ್ತು. ಇದೀಗ ಎರಡನೇ ಬಾರಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ.

Bengaluru: ಧಗಧಗ ಹೊತ್ತಿ ಉರಿದ ಬಿಎಂಟಿಸಿ ಬಸ್: ಪ್ರಯಾಣಿಕರು ಸೇಫ್

ಕೊರೋನಾದಿಂದ(Coronavirus) ಕಳೆದ ಎರಡು ವರ್ಷಗಳಲ್ಲಿ ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿದ್ದವು. ಸಿಬ್ಬಂದಿಗೆ ವೇತನ(Salary) ನೀಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಗಟು ಡೀಸೆಲ್‌ ಬೆಲೆ ಲೀಟರ್‌ಗೆ 25 ರು. ಹೆಚ್ಚಳ ಮಾಡಿರುವುದರಿಂದ ಮತ್ತಷ್ಟು ನಷ್ಟಕ್ಕೆ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣದರ ಏರಿಕೆ ಅನಿವಾರ್ಯವಾಗಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೆ, ಪ್ರಯಾಣ ದರ ಏರಿಕೆ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಹೆಚ್ಚಳ ಪ್ರಸ್ತಾವಕ್ಕೆ ಅಂಕಿತ ಬೀಳಲಿದ್ದು, ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದರ ಶೇ.35ರ ವರೆಗೂ ಹೆಚ್ಚಳವಾಗುವ ಸಾಧ್ಯತೆಯಿದೆ. ಬಿಎಂಟಿಸಿ ಬಸ್‌ ದರ ಶೇ.35ರಷ್ಟು ಏರಿಕೆಯಾದರೆ ಪ್ರತಿ ಸ್ಟೇಜ್‌(ಹಂತ) ದರವೂ ಹೆಚ್ಚಾಗಲಿದೆ. ಆರಂಭಿಕ ದರ ಈಗ 5 ರು. ನಂತರ 6.75 ಪೈಸೆ ಆಗಲಿದೆ. ಈ ವೇಳೆ ಚಿಲ್ಲರೆ ಸಮಸ್ಯೆ ಒಡ್ಡಿ ಬಿಎಂಟಿಸಿ 7 ರು.ಗೆ ಹೆಚ್ಚಳ ಮಾಡಬಹುದು. ಇನ್ನು ಇದೇ ವೇಳೆ 10 ರು. ಇರುವ ದರ .13, .15 ಇರುವ ದರ .20ಕ್ಕೆ ಹೆಚ್ಚಳವಾಗಲಿದೆ ಬಿಎಂಟಿಸಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ ‘ಡಿಜಿಟಲ್‌ ಪಾಸ್‌’ ಲೋಕಾರ್ಪಣೆ: ಕ್ಯುಆರ್‌ ಕೋಡ್‌ ತೋರಿಸಿ ಪ್ರಯಾಣ

ತಕ್ಷಣ ಪ್ರಯಾಣ ದರ ಹೆಚ್ಚಳ ಮಾಡುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ದರ ಹೆಚ್ಚಳ ಮಾಡುವ ಉದ್ದೇಶವೂ ಇಲ್ಲ. ಈ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ನಮ್ಮ ಕಚೇರಿಯಿಂದ ಪ್ರಸ್ತಾವನೆ ಕಳುಹಿಸಿಲ್ಲ ಅಂತ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ತಿಳಿಸಿದ್ದಾರೆ.