ಚಿತ್ರದುರ್ಗ(ಮಾ.14): ಕಾಂಗ್ರೆಸ್‌ ನಾಯಕರು ಭದ್ರಾವತಿಯನ್ನು ಪಾಕಿಸ್ತಾನ ಮಾಡೋಕೆ ಹೊರಟಿದ್ದಾರಾ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸಂಗಮೇಶ್‌ ಮಗ ತಪ್ಪು ಮಾಡಿರುವುದರಿಂದಲೇ ಪೊಲೀಸರು ಕೇಸ್‌ ಹಾಕಿದ್ದಾರೆ. ಇದನ್ನೇ ಕಾಂಗ್ರೆಸ್ಸಿಗರು ದೊಡ್ಡದು ಮಾಡಿ ಶಿವಮೊಗ್ಗ ಚಲೋ ಹಮ್ಮಿಕೊಂಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರ್‌ಎಸ್‌ಎಸ್‌, ಹಿಂದೂ ಕಾರ್ಯಕರ್ತರ ಮೇಲೆ 4 ಸಾವಿರ ಕೇಸ್‌ ಹಾಕಿಸಿದ್ದರು. ಸಾಲದೆಂಬಂತೆ ಕೇಸ್‌ ಹಾಕಿ 24 ಗಂಟೆ ಒಳಗೆ ರೌಡಿಶೀಟರ್‌ ಮಾಡಿಸುತ್ತಿದ್ದರು. ಅಂತಹ ಕೆಲಸಕ್ಕೆ ಬಿಜೆಪಿ ಕೈ ಹಾಕಿಲ್ಲ ಎಂದು ಹೇಳಿದರು.

ಹಿಂದೂ ಕಾರ್ಯಕರ್ತರ ಮೇಲೆ ಸಿದ್ದರಾಮಯ್ಯ ಕೇಸ್‌ ಹಾಕಿಸುವಾಗ ಅಂದೇ ನಾನು ಎಚ್ಚರಿಕೆ ನೀಡಿದ್ದೆ. ಇವತ್ತು ನೀವು ಮೇಲಿದ್ದೀರಾ, ನಾವು ಕೆಳಗಿದ್ದೇವೆ. ನಾವು ನಾಳೆ ಮೇಲೆ ಬರುತ್ತೇವೆ ಎಂದು ಎಚ್ಚರಿಸಿದ್ದೆ. ಕಾಲ ಎಲ್ಲದಕ್ಕೂ ಉತ್ತರ ನೀಡಿದೆ ಎಂದು ತಿಳಿಸಿದರು.

ಚಿತ್ರದುರ್ಗ: ಶಾಸಕ ಸಂಗಮೇಶ್ ಪುತ್ರನ ಬಂಧನ

ಕಾಂಗ್ರೆಸ್ಸಿಗರು ನೈತಿಕವಾಗಿ, ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಅವರು ಏನು, ಅವರ ಚಾಳಿ ಎಂತಹದ್ದು ಎಂಬುದು ನಾಡಿನ ಜನಕ್ಕೆ ಗೊತ್ತಿದೆ. ಎಲ್ಲದಕ್ಕೂ ರಾಮನ ಹೆಸರು ಹೇಳಿದರೆ ನಾವು ಸಹಿಸಿಕೊಂಡು ಇರಲು ಸಾಧ್ಯವಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯವರು ರಾಮನ ಹೆಸರು ಹೇಳಿಕೊಂಡೇ ರಾಜಕಾರಣ ಮಾಡ್ತೇವೆ. ಆತನ ಪರವಾಗಿ ಘೋಷಣೆ ಕೂಗ್ತೇವೆ ಎಂದು ಶ್ರೀರಾಮಲು ತಿರುಗೇಟು ನೀಡಿದರು.
ಜಾರಕಿಹೊಳಿ ಆರೋಪ ಮುಕ್ತರಾಗಲಿದ್ದಾರೆ

ಇನ್ನೂ 23 ಸಿಡಿಗಳಿವೆ ಎಂಬ ಬಸವರಾಜ ಯತ್ನಾಳ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಎಸ್‌ಐಟಿ ತನಿಖೆಯಿಂದ ಎಲ್ಲವೂ ಹೊರಗೆ ಬರಲಿದೆ. ರಮೇಶ್‌ ಜಾರಕಿಹೊಳಿ ಆರೋಪ ಮುಕ್ತರಾಗುತ್ತಾರೆ. ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಕೆಲವರು ಮಾಡಿದ್ದು ಅದು ಫಲಿಸುವುದಿಲ್ಲವೆಂದರು.