ಬೆಂಗಳೂರು(ನ.13): ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಸಂಬಂಧ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪರ ನಿಂತರೆ ಮುಸ್ಲಿಂ ಮತಗಳು ತಪ್ಪಿ ಹೋಗಬಹುದು ಎಂದು ಕಾಂಗ್ರೆಸ್‌ಗೆ ಭಯ. ಹೀಗಾಗಿಯೇ ಅವರು ತಪ್ಪೆಸಗಿದ್ದಾರೆ ಎಂಬ ಪಕ್ಷದ ಮುಖಂಡರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ವ್ಯಾಖ್ಯಾನಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಶ್ರೀನಿವಾಸಮೂರ್ತಿ ಒಬ್ಬ ದಲಿತ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್‌ ಅವರಿಗೆ ರಕ್ಷಣೆ ಕೊಡಬೇಕಿತ್ತು. ಆದರೆ ಕಾಂಗ್ರೆಸ್‌ ಹೆಚ್ಚಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಪಕ್ಷ. ಅಖಂಡ ಪರ ನಿಂತರೆ, ಮುಸ್ಲಿಂ ಮತಗಳು ಕೈ ತಪ್ಪಿ ಹೋಗಬಹುದೆಂಬ ಭಯ ಕಾಂಗ್ರೆಸ್‌ಗಿದೆ. ಅದಕ್ಕೇ ಅವರು ಕ್ರಮ ತೆಗೆದುಕೊಳ್ತಿಲ್ಲ. ಅಖಂಡ ಶ್ರೀನಿವಾಸ್‌ಮೂರ್ತಿ ಹೋದರೆ ಬೇರೊಬ್ಬ ನಾಯಕನನ್ನು ಕರೆತರಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದ್ದಾಗಿದೆ ಎಂದರು.

ಅಖಂಡ ಸ್ಥಿತಿ ನೋಡಿದ್ರೆ ಮರುಕ ಹುಟ್ಟುತ್ತೆ: ಅಶೋಕ್‌

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಎಂಬ ಎರಡು ಬಣಗಳಿವೆ. ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯ ಬಣವಾದರೆ, ಸಂಪತ್‌ರಾಜ್‌ ಡಿ.ಕೆ.ಶಿವಕುಮಾರ್‌ ಬಣ. ಹೀಗಾಗಿಯೇ ಡಿಕೆಶಿ, ಅಖಂಡಗೆ ರಕ್ಷಣೆ ನೀಡುತ್ತಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ವಿನಯ್‌ ಕುಲಕರ್ಣಿ ಬಂಧನ: 'ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ'

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡ ಸ್ಥಿತಿ ನೋಡಿದರೆ ಮರುಕ ಉಂಟಾಗುತ್ತದೆ. ಅಖಂಡ ಮನೆಗೆ ಬೆಂಕಿ ಹಾಕಿ ಕೊಲ್ಲಲು ಬೆಂಬಲ ನೀಡಿದ ಆರೋಪ ಹೊಂದಿರುವ ಸಂಪತ್‌ರಾಜ್‌ರನ್ನು ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಅವರ ನಾಯಕರೇ ಅಖಂಡ ಶ್ರೀನಿವಾಸಮೂರ್ತಿ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಅಖಂಡ ಅವರಿಗೆ ಸರ್ಕಾರದಿಂದ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.

ಸಂಪತ್‌ ಅಡಗಿದ್ದರೆ ನಾವು ಹುಡುಕಬೇಕಾ?: ಸಿದ್ದು

ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ, ಮಾಜಿ ಮೇಯರ್‌ ಸಂಪತ್‌ರಾಜ್‌ ಚ್ಚಿಟ್ಟುಕೊಂಡಿದ್ದರೆ ಹುಡುಕಲಿ. ಅವರ ಕೈಯಲ್ಲಿ ಆಗಲ್ವಾ? ಪ್ರತಿಪಕ್ಷದವರು ಪತ್ತೆಹಚ್ಚಬೇಕಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಡಿ.ಜೆ.ಹಳ್ಳಿ ಪ್ರಕರಣದ ಆರೋಪಿ ಸಂಪತ್‌ರಾಜ್‌ ತಲೆಮರೆಸಿಕೊಂಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಂಪತ್‌ರಾಜ್‌ ಬಚ್ಚಿಟ್ಟುಕೊಂಡಿದ್ದಾರೆ ಅಂತಾರಲ್ಲ ಹುಡುಕಲಿ. ಯಾವುದೋ ನೆಪ ಹೇಳಿ ತಪ್ಪಿಸಿಕೊಳ್ಳುವುದಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇಲ್ಲ, ಬಿಜೆಪಿಯವರದ್ದೇ ಸರ್ಕಾರ ಇದೆ. ಪೊಲೀಸರು, ಸರ್ಕಾರ ಇರೋದು ಯಾಕೆ? ಅವರ ಕೈಯಲ್ಲಿ ಆಗಲ್ವಾ? ಪ್ರತಿಪಕ್ಷ ಕಾಂಗ್ರೆಸ್ಸೋ, ಇಲ್ಲ ಪ್ರತಿಪಕ್ಷ ನಾಯಕರು ಪತ್ತೆ ಹಚ್ಚೋಕೆ ಆಗುತ್ತಾ?’ ಎಂದು ಪ್ರಶ್ನಿಸಿದರು.

ಉಪ ಚುನಾವಣೆಯಲ್ಲಿ ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್‌ ಸೋಲಬೇಕು ಎಂದು ಸಿದ್ದರಾಮಯ್ಯ ಪ್ಲ್ಯಾನ್‌ ಮಾಡಿದ್ದರು. ಶಿರಾದಲ್ಲಿ ಕಾಂಗ್ರೆಸ್‌ ಸೋಲಬೇಕು ಎಂದು ಡಿ.ಕೆ. ಶಿವಕುಮಾರ್‌ ತಂತ್ರಗಾರಿಕೆ ಮಾಡಿದರು. ಈ ಇಬ್ಬರ ನಾಯಕರ ಬಯಕೆಗಳೂ ಈಡೇರಿವೆ. ಹೀಗಾಗಿ ಆರ್‌.ಆರ್‌.ನಗರದಲ್ಲಿ ನಮ್ಮ ಗೆಲುವಿಗೆ ಪರೋಕ್ಷವಾಗಿ ಸಿದ್ದರಾಮಯ್ಯ ಕಾರಣ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.