ಗಂಗಾವತಿ/ ಕಾರ​ಟ​ಗಿ(ಮೇ.20): ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ. 

ನವಲಿ ಗ್ರಾಮದ ಹತ್ತಿರ ಜಲಾಶಯ ನಿರ್ಮಾಣದ ಸ್ಥಳವನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಈಗಾಗಲೇ ಸರ್ಕಾರ ವಿಸ್ತೃತ ಯೋಜನಾ ವರದಿ ಸಿದ್ಧತೆಗಾಗಿ (ಡಿಪಿಆರ್‌) 14.30 ಕೋಟಿ ಅನುದಾನ ಮಂಜೂರಿ ಮಾಡಿದೆ. ಇದರಿಂದಾಗಿ ಈ ಯೋಜನೆಯ ಸ್ಪಷ್ಟ ಚಿತ್ರಣ ಬರುತ್ತಿದ್ದು, ಈ ಭಾಗದ ರೈತರಿಗೆ ಮತ್ತು ಕೆಳ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.

'ಅಧ್ಯಕ್ಷ ಗಾದಿಯಲ್ಲಿ ಉಳಿಯಲು ಸರ್ಕಾರ ಟೀಕಿಸು​ತ್ತಿ​ರು​ವ ಡಿ.ಕೆ. ಶಿವಕುಮಾರ'

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತುಂಗಭದ್ರಾ ಜಲಾಶಯದಲ್ಲಿ ಅತಿ ಹೆಚ್ಚು ಹೂಳು ತುಂಬಿದ್ದರಿಂದ ನೀರಿನ ಸಂಗ್ರಹವಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಪರ್ಯಾಯವಾಗಿ ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಿಸಲು ಸಿದ್ಧತೆ ನಡೆಸಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮುಖ್ಯಮಂತ್ರಿ ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಜಲಾಶಯ ನಿರ್ಮಾಣಕ್ಕೆ ಯೋಜನೆ ಸಿದ್ಧತೆಗಾಗಿ ಅನುದಾನ ನೀಡಿದ್ದಾರೆಂದು ತಿಳಿಸಿದರು. ರೈತರು ಜಲಾಶಯ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

ಅಂತಾರಾಷ್ಟ್ರೀಯ ಬತ್ತ ವಹಿವಾಟು

ನವಲಿ ಬಳಿ ರೈಸ್‌ ಪಾರ್ಕ್ ನಿರ್ಮಾಣವಾಗುತ್ತಿರುವು​ದ​ರಿಂದ ಅಂ​ತಾರಾಷ್ಟ್ರೀಯ ಮಟ್ಟದಲ್ಲಿ ಬತ್ತ ವಹಿವಾಟು ನಡೆಯುತ್ತದೆ ಎಂದು ಸಚಿವ ಬಿ.ಸಿ. ಪಾಟೀಲ್‌ ಹೇಳಿದರು. ಈಗಾಗಲೇ ರೈಸ್‌ ಪಾರ್ಕ್ ಕಾಮಗಾರಿ ಭರದಿಂದ ಸಾಗಿದ್ದು, ಇದಕ್ಕಾಗಿ ಸರ್ಕಾರ 120 ಕೋಟಿ ಅನುದಾನ ನೀಡಿದೆ ಎಂದರು.

315 ಎಕರೆ ಪ್ರದೇಶದಲ್ಲಿ ಪಾರ್ಕ್ ವ್ಯಾಪ್ತಿ ಇದ್ದು, ಈ ಪಾರ್ಕ್ನಲ್ಲಿ ಹೊಸ ವೈಜ್ಞಾನಿಕವಾಗಿರುವ ಯಂತ್ರಗಳು ಸೇರಿದಂತೆ ಮಿಲ್‌ಗಳು ಸ್ಥಾಪನೆಯಾಗುತ್ತದೆ ಎಂದರು. ಈ ಭಾಗದ ರೈತರು ರೈಸ್‌ ಮಿಲ್‌ ಸ್ಥಾಪನೆಗೆ ಹೊಲ-ಗದ್ದೆಗಳನ್ನು ನೀಡಿದ್ದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಮೊದಲಿಗೆ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತದೆ. ಹೊಲಗಳನ್ನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಲಾಗುತ್ತದೆ. ಆನಂತರ ಹೊರ ರಾಜ್ಯದವರಿಗೆ ಅವಕಾಶ ನೀಡಲಾಗುತ್ತದೆ ಎಂದರು.

ಕನಕಗಿರಿ ಕ್ಷೇತ್ರದಲ್ಲಿ ಪ್ರವಾಹಪೀಡಿತ ಪ್ರದೇಶಗಳಿಗೆ ಮಂಜೂರಿಯಾದ ಅನುದಾನ ದುರುಪಯೋಗವಾಗಿದೆ ಎಂಬ ಪ್ರಶ್ನೆಗೆ, ದೂರು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಡೇಸೂಗೂರು, ಶಾಸಕ ಪರಣ್ಣ ಮುನವಳ್ಳಿ, ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಬತ್ತ ಮತ್ತು ಅಕ್ಕಿ ಉತ್ಪಾದನಾ ಕೃಷಿ ಮಾರುಕಟ್ಟೆಅಧ್ಯಕ್ಷ ಭಾವಿ ಶರಣಪ್ಪ, ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಮಂಜಪ್ಪ, ಜಿಪಂ ಮಾಜಿ ಅಧ್ಯಕ್ಷ ಬಿ. ಬಸವರಾಜ, ಗ್ರಾಪಂ ಸದಸ್ಯ ಸಿದ್ದರಾಮಪ್ಪ ಉಪ್ಪಳ, ಭೀಮನಗೌಡ ಹರಲಾಪುರ, ಮಲ್ಲಿವೀರಪ್ಪ, ಪಂಚಯ್ಯಸ್ವಾಮಿ ಬಿಜನೂರುಮಠ, ನಾಗರಾಜ ಬಿಲ್ಗಾರ, ಎಪಿಎಂಸಿ ಸದಸ್ಯ ರೆಡ್ಡಪ್ಪ ಖ್ಯಾಡೇದ, ದಾಸಪ್ಪ, ಕಾಡನಗೌಡ, ವೀರೇಶ, ಮರಿರಾಜ ಇತರರು ಇದ್ದರು.