ಕೊಪ್ಪಳ(ಮೇ.20): ಮುಖ್ಯಮಂತ್ರಿ ಯಡಿಯೂರಪ್ಪ ಜತೆಯಲ್ಲಿ ಇರುವಾಗಲೆಲ್ಲಾ ಅವರನ್ನು ಹೊಗಳುವ, ಅಭಿನಂದನೆ ಸಲ್ಲಿಸುವ ಡಿ.ಕೆ. ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಉಳಿಯಲು ಹೊರಗಡೆ ಸರ್ಕಾರವನ್ನು ಟೀಕೆ ಮಾಡುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕುಟುಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ, ಕಾರ್ಮಿಕರು ನಡೆದುಕೊಂಡೆ ಹೋದರೂ ಅವರ ನೆರವಿಗೆ ಬರಲು ಆಗಿಲ್ಲ ಎನ್ನವ ಡಿ.ಕೆ. ಶಿವಕುಮಾರ ಅವರ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದರು.

ಭಿಕ್ಷುಕರಿಂದ ಕೊಪ್ಪ​ಳ​ದಲ್ಲಿ ಕೊರೋನಾ ಮಹಾಸ್ಫೋಟ?

ಯಡಿಯೂರಪ್ಪ ಅವರು ಜತೆಯಲ್ಲಿದ್ದಾಗ ಹೊಗಳುವುದನ್ನು ನಾನೇ ನೋಡಿದ್ದೇನೆ, ಒಂದಲ್ಲ ಹತ್ತಾರು ಬಾರಿ ಅಭಿನಂದಿಸಿದ್ದಾರೆ. ಹೊರಗಡೆ ಹೋಗಿ ತಕ್ಷಣ ಈ ರೀತಿ ಹೇಳಿಕೆ ನೀಡಿದರೆ ಏನರ್ಥ? ಸರ್ಕಾರ ಕೊರೋನಾವನ್ನು ಸಮರ್ಥವಾಗಿಯೇ ಎದುರಿಸಿದೆ. ದೇಶದಲ್ಲಿಯೇ ಕರ್ನಾಟಕ ಸರ್ಕಾರ ಅತ್ಯುತ್ತಮವಾಗಿ ಜನರಿಗೆ ಸ್ಪಂದಿಸಿದೆ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಲಿಗೆಗೆ ಎಲುಬು ಇಲ್ಲವೆಂದು ಏನೇನು ಮಾತನಾಡುತ್ತಾರೆ. ಅವರು ಹೇಳಿದ್ದೇ ವೇದವಾಕ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊರೋನಾ ನಿವಾರಣೆಯಲ್ಲಿಯೂ ಸರ್ಕಾರದಲ್ಲಿದ್ದವರು ಹಣ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಹೇಳಿದ್ದು ವೇದವಾಕ್ಯವಲ್ಲ ಎಂದು ಮತ್ತೊಮ್ಮೆ ಛೇಡಿಸಿದರು.