ಕಂದಾಯ ಸಚಿವ ಆರ್‌.ಅಶೋಕ್‌ ಕಲಬುರಗಿ ಜಿಲ್ಲೆಯ ಮಾಚನಾಳ ತಾಂಡಾದಲ್ಲಿ ಜ.17 ರಂದು ವಾಸ್ತವ್ಯ ಹೂಡಿ ತಾಂಡಾದಲ್ಲಿರುವ ಲಂಬಾಣಿ ಜನರ ಸುಖ-ದುಃಖ ಆಲಿಸಲು

ಕಲಬುರಗಿ (ಜ.17) : ಕಂದಾಯ ಸಚಿವ ಆರ್‌.ಅಶೋಕ್‌ ಕಲಬುರಗಿ ಜಿಲ್ಲೆಯ ಮಾಚನಾಳ ತಾಂಡಾದಲ್ಲಿ ಜ.17 ರಂದು ವಾಸ್ತವ್ಯ ಹೂಡಿ ತಾಂಡಾದಲ್ಲಿರುವ ಲಂಬಾಣಿ ಜನರ ಸುಖ-ದುಃಖ ಆಲಿಸಲು ಮುಂದಾಗಿದ್ದಾರೆ. ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಪ್ರಧಾನಿ ಮೋದಿಯವರು ಜ.19ಕ್ಕೆ ಕಲಬುರಗಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಏತನ್ಮಧ್ಯೆ ಕಂದಾಯ ಸಚಿವರು ತಾಂಡಾಕ್ಕೆ ಭೇಟಿ ನೀಡಿ, ಸಭೆ ನಡೆಸಿ ವಾಸ್ತವ್ಯ ಹೂಡುತ್ತಿರುವುದು ಗಮನ ಸೆಳೆದಿದೆ.

ಬೈಕ್‌ ರಾರ‍ಯಲಿ ಸ್ವಾಗತ: ಕಲಬುರಗಿಗೆ ಜ.17ರ ಮಧ್ಯಾಹ್ನ 3ರ ಹೊತ್ತಿಗೆ ಆಗಮಿಸುವ ಅಶೋಕ್‌ ಅಂದೇ ಸಂಜೆ 5ಕ್ಕೆ ಕಲಬುರಗಿ ತಾಲೂಕಿನ ಮಾಚನಾಳ ತಾಂಡಾಕ್ಕೆ ಭೇಟಿ ನೀಡಲಿದ್ದಾರೆ. ಕಲಬುರಗಿ-ಅಫಜಲ್ಪುರ ದಾರಿಯಲ್ಲಿರುವ ಮಾಚನಾಳ್‌ ಕ್ರಾಸ್‌ನಿಂದ ತಾಂಡಾದವರೆಗೂ ಸಚಿವರನ್ನು ಬೈಕ್‌ ರಾರ‍ಯಲಿ ಮೂಲಕ ಸ್ವಾಗತಿಸಲಾಗುತ್ತಿದೆ. ಇದಕ್ಕಾಗಿ ತಾಂಡಾದವರು ಸಿದ್ಧತೆ ಮಾಡಿಕೊಂಡಿದ್ದಾರೆ. ತಾಂಡಾದಲ್ಲಿ ಅಧಿಕಾರಿಗಳ ಸಮ್ಮುಖ ಗ್ರಾಮ ಸಭೆ ನಡೆಸಲಿರುವ ಅಶೋಕ್‌ ಸಾರ್ವಜನಿಕರಿಂದ ಅಹವಾಲು ಆಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಾಂಡಾದಲ್ಲಿ ಈಗಾಗಲೇ ಸಿದ್ಧಪಡಿಸಲಾಗಿರುವ 80 ವೃದ್ಧಾಪ್ಯ ವೇತನಗಳ ಆದೇಶ ಪ್ರತಿ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಅಲ್ಲದೆ ಪಹಣಿ, ಇತರೆ ಕಂದಾಯ ಇಲಾಖೆಗೆ ಸಂಬಂಧಿಸಿದ ಏನಾದರೂ ಸಮಸ್ಯೆಗಳಿದ್ದಲ್ಲಿ ಜನ ಸಚಿವರ ಗಮನಕ್ಕೆ ತಂದಲ್ಲಿ ಸ್ಥಳದಲ್ಲೇ ಪರಿಹಾರ ನೀಡುವ ಇರಾದೆ ಸಚಿವರು ಹೊಂದಿದ್ದಾರೆ.

ಹೊಸ ಶಾಲೆಯಲ್ಲಿ ವಾಸ್ತವ್ಯ: ಗ್ರಾಮ ಸಭೆ ನಂತರ ತಾಂಡಾದಲ್ಲಿ ಹೊಸತಾಗಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ ಸಚಿವರು ತಮ್ಮ ವಾಸ್ತವ್ಯ ಹೂಡಲಿದ್ದಾರೆ. ಶಾಲೆ ಉದ್ಘಾಟನೆಯೂ ಆದಂತಾಯಿತು ಎಂದು ಜಿಲ್ಲಾಡಳಿತ ಇದೇ ಶಾಲಾ ಕಟ್ಟಡವನ್ನು ಸಚಿವರ ವಾಸ್ತವ್ಯಕ್ಕೆ ಆಯ್ಕೆ ಮಾಡಿದೆ.

Shivamogga: ಜ.28ಕ್ಕೆ ಹೊಳ​ಲೂ​ರ​ಲ್ಲಿ ಸಚಿವ ಅ​ಶೋ​ಕ್‌ ಗ್ರಾಮ ವಾಸ್ತವ್ಯ

ಈಗಾಗಲೇ ಮಾಚನಾಳ ತಾಂಡಾಕ್ಕೆ ಕಲಬುರಗಿ ತಹಸೀಲ್ದಾರ್‌ ವೆಂಕಣ್ಣಗೌಡ ಪಾಟೀಲ್‌ ಹಾಗೂ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಸಿದ್ಧತೆ ಮಾಡಿದ್ದಾರೆ. ಅಲ್ಲಿ ಎಲ್ಲಾ ಹಂತದಲ್ಲೂ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್‌ ವೆಂಕಣಗೌಡರು ಮಾಹಿತಿ ನೀಡಿದ್ದಾರೆ. ಪ್ರಧಾನಿ ಆಗಮನಕ್ಕಾಗಿಯೇ ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದ್ದು, ಈ ಹಂತದಲ್ಲೇ ಕಂದಾಯ ಸಚಿವರ ತಾಂಡಾ ವಾಸ್ತವ್ಯಕ್ಕೂ ಭರದ ಸಿದ್ಧತೆ ಮಾಡಲಾಗಿದೆ.

ಮೂರು ತಿಂಗಳ ಹಿಂದಷ್ಟೇ ಸಚಿವ ಆರ್‌.ಅಶೋಕ್‌ ಸೇಡಂನ ಆಡಕಿಯಲ್ಲಿ ವಾಸ್ತವ್ಯ ಹೂಡಿ ಸಾಕಷ್ಟುಯೋಜನೆಗಳನ್ನು ಊರಿಗೆ ನೀಡಿದ್ದರು. ಜೊತೆಗೆ .1 ಕೋಟಿ ಅನುದಾನ ನೀಡುವ ವಾಗ್ದಾನ ಮಾಡಿದ್ದರು. ಇದೀಗ ಮಾಚನಾಳ ತಾಂಡಾದಲ್ಲಿ ಸಚಿವರು ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಲ್ಲಿ ಕುತೂಹಲ ಗರಿಗೆದರಿದೆ.

ಗ್ರಾಮ ವಾಸ್ತವ್ಯದಿಂದ ಕಟ್ಟಕಡೆ ವ್ಯಕ್ತಿಗೂ ಸೌಲಭ್ಯ: ಶಾಸಕ ಮಾಡಾಳು ವಿರೂಪಾಕ್ಷಪ್ಪ