ಬಳ್ಳಾರಿ(ಜು.19): ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್‌ಡೌನ್‌ ಮಾಡದಿರಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಜರುಗಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.

ಈಗಾಗಲೇ ಲಾಕ್‌ಡೌನ್‌ ಇರುವ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಏರಿಳಿಕೆಯನ್ನು ನೋಡಿಕೊಂಡು ಒಂದು ವಾರಗಳ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಆನಂದ ಸಿಂಗ್‌ ಸಭೆಯಲ್ಲಿ ಪ್ರಕಟಿಸಿದರು. ಇದಕ್ಕೆ ಸಭೆಯಲ್ಲಿದ್ದ ಶಾಸಕರು, ಸಂಸದರು ಒಪ್ಪಿಗೆ ನೀಡಿದರು.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವಿಕೆಗೆ ಯಾವುದೇ ಸಮಸ್ಯೆಯಿಲ್ಲ. ಬೇರೆ ಜಿಲ್ಲೆಗೆ ಹೋಲಿಸಿದರೆ ಇನ್ನು 15 ದಿನಗಳ ಕಾಲ ಕೊರೋನಾ ಸೋಂಕಿತರ ಚಿಕಿತ್ಸೆ ಒದಗಿಸುವ ಸೌಕರ್ಯ ನಮ್ಮಲ್ಲಿದೆ ಎಂದ ಸಚಿವ ಆನಂದಸಿಂಗ್‌, ಇದೇ 21ರಂದು ಬೆಳಗ್ಗೆ 11ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಟ್ರಾಮಾಕೇರ್‌ ಸೆಂಟರ್‌ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ: ಜಿಂದಾಲ್‌ನಲ್ಲಿ ಕೊರೋನಾ ಜ್ವಾಲಾಮುಖಿ, ಬೆಚ್ಚಿಬಿದ್ದ ಜನತೆ..!

ಅತಿಹೆಚ್ಚು ಕೊರೋನಾ ಪಸರಿಸುತ್ತಿರುವ ಬಳ್ಳಾರಿ, ಹೊಸಪೇಟೆ, ಸಿರಗುಪ್ಪ ಮತ್ತು ಸಂಡೂರು ನಗರ ವ್ಯಾಪ್ತಿಯಲ್ಲಿ 14 ದಿನಗಳ ಕಾಲ ಲಾಕ್‌ಡೌನ್‌ ವಿಧಿಸುವುದಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ಸೈಯದ್‌ ನಾಸೀರ್‌ ಹುಸೇನ್‌, ಶಾಸಕರಾದ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಲಿಂಗಪ್ಪ ಅವರು ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಅನೇಕ ಸಲಹೆ, ಸೂಚನೆಗಳನ್ನು ನೀಡಿದರು.

ಆರೋಗ್ಯ ಸುರಕ್ಷಾ ಅಭಿಯಾನ ಇತರೆಡೆ ವಿಸ್ತರಣೆ...

ಸಂಡೂರಿನಲ್ಲಿ ಆರಂಭಿಸಲಾಗಿರುವ ಆರೋಗ್ಯ ಸುರಕ್ಷಾ ಅಭಿಯಾನದ ಮೂಲಕ ಮನೆ-ಮನೆಗೆ ತೆರಳಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ನಡೆಸಲಿರುವ ಆರೋಗ್ಯ ತಪಾಸಣೆಯನ್ನು ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದರು. ಈಗಾಗಲೇ ಸಂಡೂರು ತಾಲೂಕಿನಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಈ ನಗರಗಳಲ್ಲಿಯೂ ಸಿಬ್ಬಂದಿಗೆ ತರಬೇತಿ ನೀಡಿ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು.

ಬಳ್ಳಾರಿ ನಗರದಲ್ಲಿ 50 ಮತ್ತು 60 ಬೆಡ್‌ಗಳ ಎರಡು ಖಾಸಗಿ ಆಸ್ಪತ್ರೆ ಹಾಗೂ ಹೊಸಪೇಟೆಯಲ್ಲಿ 30 ಬೆಡ್‌ಗಳ ಖಾಸಗಿ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗೆ ಗುರುತಿಸಲಾಗಿದ್ದು, ತಮ್ಮ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯುತ್ತೇವೆ ಎನ್ನುವ ಕೊರೋನಾ ಸೋಂಕಿತರನ್ನು ಅಲ್ಲಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಜಿಂದಾಲ್‌ನಲ್ಲಿ ತಪಾಸಣೆ ಹೆಚ್ಚಳಕ್ಕೆ ಖಡಕ್‌ ಸೂಚನೆ...

ಜಿಂದಾಲ್‌ನಲ್ಲಿ ಈವರೆಗೆ 5500 ಸಿಬ್ಬಂದಿಗಳಿಗೆ ಮಾತ್ರ ತಪಾಸಣೆ ಮಾಡಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಚಿವ ಸಿಂಗ್‌ ಕೂಡಲೇ ಜಿಂದಾಲ್‌ನಲ್ಲಿ ತಪಾಸಣಾ ಪ್ರಮಾಣ ಹೆಚ್ಚಿಸಬೇಕು. 10 ಸಾವಿರ ಆ್ಯಂಟಿಜೆನ್‌ ಕಿಟ್‌ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಖರೀದಿಸಿ ತಪಾಸಣೆ ನಡೆಸಿ ಎಂದು ಖಡಕ್‌ ಸೂಚನೆ ನೀಡಿದರು.

ಜಿಂದಾಲ್‌ನಲ್ಲಿ ಜೂನ್‌ ತಿಂಗಳಲ್ಲಿ ಅಧಿಕ ಪ್ರಮಾಣದ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಪರಿಣಾಮ ಪ್ರಕರಣಗಳು ಕಡಿಮೆಯಾಗಿವೆ ಎಂದರು. ಜಿಂದಾಲ್‌ನ ಅಧಿಕಾರಿ ಮಂಜುನಾಥ ಪ್ರಭು ಸಭೆಗೆ ಮಾಹಿತಿ ನೀಡಿ, ‘ಜಿಂದಾಲ್‌ನಲ್ಲಿ ಅಧಿಕ ಕಾಯಿಲೆ ಇರುವವರನ್ನು ಗುರುತಿಸಿ ಅವರಿಗೆ ಅವರವರ ಮನೆಯಲ್ಲಿಯೇ ಇರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸದ್ಯ 11 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಟಾಟಾ ಸ್ಟೀಲ್‌ ಮಾದರಿಯಲ್ಲಿ ಸಿಬ್ಬಂದಿಯನ್ನು 4 ವಿಭಾಗಗಳನ್ನಾಗಿ ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಂದಾಲ್‌ನಲ್ಲಿರುವ ಎಲ್ಲರಿಗೂ ತಮ್ಮ ಸೂಚನೆಯಂತೆ ತಪಾಸಣೆ ಮಾಡಲಾಗುವುದು’ ಎಂದು ತಿಳಿಸಿದರು.

125 ಆರೋಗ್ಯ ಸೇವಕರಿಗೆ ಮತ್ತು 27 ಜನ ಪೊಲೀಸರಿಗೆ ಕೊರೋನಾ

ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ ಸೇರಿದಂತೆ 125 ಜನರು ಹಾಗೂ 27 ಜನ ಪೊಲೀಸ್‌ ಪೇದೆ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಸಭೆಗೆ ಮಾಹಿತಿ ನೀಡಿದರು.

ಸೋಂಕಿತರ ಪೈಕಿ 38 ಜನರು ಡಿಸ್ಚಾರ್ಜ್‌ ಆಗಿದ್ದು, 114 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 848 ಕಂಟೈನ್ಮೆಂಟ್‌ ಝೋನ್‌ಗಳು ಮಾಡಲಾಗಿದ್ದು, 498 ಸಕ್ರಿಯವಾಗಿವೆ ಮತ್ತು 350 ಡಿನೋಟಿಫೈ ಮಾಡಲಾಗಿದೆ ಎಂದು ಅವರು ವಿವರಿಸಿದರು.