ಬೆಂಗಳೂರು(ಡಿ.28): ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಗುತ್ತಿಗೆ ಮಾದರಿಯಲ್ಲಿ 90 ಮಿನಿ ಎಲೆಕ್ಟ್ರಿಕ್‌ ಬಸ್‌ ಪಡೆಯುವ ಟೆಂಡರ್‌ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದ್ದು, ಶೀಘ್ರ ನಗರದಲ್ಲಿ ಮಿನಿ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಲಭ್ಯವಾಗುವ 50 ಕೋಟಿ ರು. ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ 90 ಮಿನಿ ಎಲೆಕ್ಟ್ರಿಕ್‌ ಬಸ್‌ ಪಡೆಯಲು ಬಿಎಂಟಿಸಿ ಟೆಂಡರ್‌ ಆಹ್ವಾನಿಸಿತ್ತು. ಈ ಟೆಂಡರ್‌ನಲ್ಲಿ ತೆಲಂಗಾಣ ಮೂಲಕದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಮತ್ತು ದೆಹಲಿ ಮೂಲದ ಎನ್‌ಟಿಪಿಸಿ ಕಂಪನಿಗಳು ಬಿಡ್‌ ಸಲ್ಲಿಸಿದ್ದವು. ಈ ಎರಡೂ ಕಂಪನಿ ಪೈಕಿ ಎನ್‌ಟಿಪಿಸಿ ಕಂಪನಿ ಕಡಿಮೆ ಮೊತ್ತಕ್ಕೆ ಬಿಡ್‌ ಸಲ್ಲಿಸಿದ್ದು, ಪ್ರತಿ ಕಿ.ಮೀ.ಗೆ 44 ರು. ಪಡೆದು ಬಸ್‌ ಕಾರ್ಯಾಚರಣೆಗೆ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಟೆಂಡರ್‌ ಬಹುತೇಕ ಅಂತಿಮವಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ನಿಗಮವು ಸದರಿ ಎನ್‌ಟಿಪಿಸಿ ಕಂಪನಿಗೆ ಎಲೆಕ್ಟ್ರಿಕ್‌ ಬಸ್‌ ಪೂರೈಸಲು ಜನವರಿ ಮೊದಲ ವಾರದಲ್ಲಿ ಕಾರ್ಯಾದೇಶ ನೀಡುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡತೆ ಸಾಗಿದರೆ ಮೂರು ತಿಂಗಳೊಳಗೆ ಎಲೆಕ್ಟ್ರಿಕ್‌ ಬಸ್‌ಗಳು ನಗರದ ರಸ್ತೆಗೆ ಇಳಿಯಲಿವೆ.

ಕಂಪನಿಗೆ ನಿರ್ವಹಣೆ ಹೊಣೆ:

ಒಪ್ಪಂದದ ಷರತ್ತಿನ ಅನ್ವಯ ಬಿಡ್‌ ಪಡೆದ ಕಂಪನಿಯೇ ಬಸ್‌ ಪೂರೈಸಿ, ಚಾಲಕರನ್ನೂ ಒದಗಿಸಲಿದೆ. ಈ ಬಸ್‌ಗಳ ಸಂಪೂರ್ಣ ನಿರ್ವಹಣೆ ಮಾಡಲಿದೆ. ಬಿಎಂಟಿಸಿ ನಿಗಮವು ಬಸ್‌ಗಳ ಬ್ಯಾಟರಿ ಚಾಜ್‌ರ್‍ ಮಾಡಲು ಆಯ್ದ ಡಿಪೋಗಳಲ್ಲಿ ಚಾರ್ಜಿಂಗ್‌ ಘಟಕ ಸ್ಥಾಪನೆಗೆ ಸ್ಥಳ ನೀಡಲಿದೆ. ಅಂತೆಯೇ ವಿದ್ಯುತ್‌ ದರವನ್ನು ನಿಗಮವೇ ಭರಿಸಲಿದೆ. ಈಗಾಗಲೇ ರಾಜ್ಯ ಸರ್ಕಾರ ಮೆಟ್ರೋ ರೈಲಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡುತ್ತಿದೆ. ಇದೇ ಮಾದರಿಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳಿಗೂ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡುವಂತೆ ಮನವಿ ಮಾಡಲು ನಿಗಮ ಚಿಂತಿಸಿದೆ. ವಿದ್ಯುತ್‌ಗೆ ರಿಯಾಯಿತಿ ಸಿಕ್ಕರೆ ನಿಗಮಕ್ಕೆ ಆರ್ಥಿಕ ಹೊರ ತಗ್ಗಲಿದೆ.

ಬಿಎಂಟಿಸಿ ಚಾರ್ಜಿಂಗ್‌ ಸೆಂಟರ್‌ನಲ್ಲಿ ಖಾಸಗಿ ಬಸ್‌ಗಳಿಗೂ ಅವಕಾಶ?

ಮೆಟ್ರೋ ಫೀಡರ್‌ ಸೇವೆ:

ಈ 90 ಮಿನಿ ಎಲೆಕ್ಟ್ರಿಕ್‌ ಬಸ್‌ಗಳು ನಾನ್‌ ಎಸಿ ಬಸ್‌ಗಳಾಗಿದ್ದು, ಮೆಟ್ರೋ ಫೀಡರ್‌ ಸೇವೆಗೆ ನಿಯೋಜಿಸಲು ಬಿಎಂಟಿಸಿ ಯೋಜಿಸಿದೆ. ಮೆಟ್ರೋ ನಿಲ್ದಾಣಗಳಿಂದ ಪ್ರಮುಖ ಬಸ್‌ ನಿಲ್ದಾಣಗಳ ನಡುವೆ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಈ ಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು 9 ಮೀಟರ್‌ ಉದ್ದ, 35 ಆಸನ ಸಾಮರ್ಥ್ಯ ಹೊಂದಿರಲಿವೆ. ಸಿಸಿಟಿವಿ ಕ್ಯಾಮರಾ, ಪ್ಯಾಸೆಂಜರ್‌ ಡಿಸ್‌ಪ್ಲೇ ಬೋರ್ಡ್‌, ಆ್ಯಂಫ್ಲಿಫೈಯರ್‌, ಪ್ಯಾನಿಕ್‌ ಬಟನ್‌ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಮೆಟ್ರೋ ಪ್ರಯಾಣಿಕರಿಗೆ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಗೆ ಈ ಫೀಡರ್‌ ಬಸ್‌ ಸೇವೆ ನೆರವಾಗಲಿವೆ.

300 ಎಲೆಕ್ಟ್ರಿಕ್‌ ಬಸ್‌ಗೆ ಟೆಂಡರ್‌

ಬಿಎಂಟಿಸಿಯು ಕೇಂದ್ರದ ಫೇಮ್‌ 2ನೇ ಹಂತದ ಯೋಜನೆ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ 12 ಮೀಟರ್‌ ಉದ್ದದ 300 ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ ಪಡೆಯಲು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿದೆ. ಅದರಂತೆ ಆಸಕ್ತ ಕಂಪನಿಗಳಾದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಮತ್ತು ಜೆಬಿಎಂ ಈಗಾಗಲೇ ತಮ್ಮ ಒಂದೊಂದು ಬಸ್‌ಗಳನ್ನು ಪ್ರಾಯೋಗಿಕ ಸಂಚಾರಕ್ಕೆ ನಿಗಮಕ್ಕೆ ನೀಡಿವೆ. ಒಲೆಕ್ಟ್ರಾ ಕಂಪನಿಯ ಬಸ್‌ ಪ್ರಾಯೋಗಿಕ ಸಂಚಾರ ಮುಗಿದಿದ್ದು, ಜೆಬಿಎಂ ಕಂಪನಿಯ ಬಸ್‌ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಹೀಗಾಗಿ ನಗರದಲ್ಲಿ ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಲಭ್ಯವಾಗಲಿದೆ.