ತವರು ರಾಜ್ಯಗಳಿಗೆ ತೆರಳಲು ರೈಲ್ವೆ ನಿಲ್ದಾಣದಲ್ಲೇ ಕಾರ್ಮಿಕರ ಠಿಕಾಣಿ

ನಿಲ್ಲದ ಹೊರರಾಜ್ಯ ಕಾರ್ಮಿಕರ ವಲಸೆ| ಲಾಕ್‌ಡೌನ್‌ ಜಾರಿ ಮಾಡಬಹುದೆಂಬ ಭೀತಿಯಿಂದ ಕಳೆದೊಂದು ವಾರದಿಂದ ಕಾರ್ಮಿಕರ ವಲಸೆ ಆರಂಭ| ಜನತಾ ಕರ್ಫ್ಯೂ ಇರುವುದರಿಂದ ಕೆಲಸ-ಕಾರ್ಯಗಳು ಸ್ಥಗಿತ| ಊಟ, ತಿಂಡಿ, ಮನೆ ಬಾಡಿಗೆ, ಖರ್ಚು-ವೆಚ್ಚ ಭರಿಸಲು ಸಮಸ್ಯೆ| 

Migrant Workers Went to Thier Home States From Bengaluru due to Janata Curfew grg

ಬೆಂಗಳೂರು(ಏ.29): ಕೊರೋನಾ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಿದ್ದರಿಂದ ಬೆಚ್ಚಿರುವ ಹೊರ ಹೊರರಾಜ್ಯದ ಕಾರ್ಮಿಕರು ಬುಧವಾರವೂ ಭಾರೀ ಸಂಖ್ಯೆಯಲ್ಲಿ ನಗರದಿಂದ ತವರು ರಾಜ್ಯಗಳತ್ತ ವಲಸೆ ಹೋಗಿದ್ದಾರೆ.

ಲಾಕ್‌ಡೌನ್‌ ಜಾರಿ ಮಾಡಬಹುದೆಂಬ ಭೀತಿಯಿಂದ ಕಳೆದೊಂದು ವಾರದಿಂದ ಕಾರ್ಮಿಕರ ವಲಸೆ ಆರಂಭವಾಗಿದ್ದು, ಜನತಾ ಕರ್ಫ್ಯೂ ಜಾರಿ ಬಳಿಕವೂ ವಲಸೆ ಮುಂದುವರಿದಿದೆ. ಬುಧವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಸಹಸ್ರಾರು ಸಂಖ್ಯೆಯ ಹೊರರಾಜ್ಯದ ಕಾರ್ಮಿಕರು ರೈಲುಗಳಿಗಾಗಿ ಕಾಯುತ್ತಿದ್ದರು. ಕೆಲವರು ಹೆಂಡತಿ, ಮಕ್ಕಳು ಸೇರಿದಂತೆ ಕುಟುಂಬ ಸಮೇತ ತವರು ರಾಜ್ಯಗಳಿಗೆ ತೆರಳಲು ಬಂದಿದ್ದರು. ಯುವ ಕಾರ್ಮಿಕರು ಲಗೇಜು ಸಹಿತ ರೈಲು ನಿಲ್ದಾಣಗಳಲ್ಲಿ ಠಿಕಾಣಿ ಹೂಡಿದ್ದರು. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ, ಒಡಿಸ್ಸಾ, ಬಿಹಾರ ರಾಜ್ಯಗಳ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಹೊರರಾಜ್ಯದ ಕಾರ್ಮಿಕರು, ಕಟ್ಟಡ ನಿರ್ಮಾಣ, ರಸ್ತೆ ಬೀದಿ ವ್ಯಾಪಾರ, ಹೋಟೆಲ್‌, ರೆಸ್ಟೋರೆಂಟ್‌ ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದರು. ಈಗ ಜಾರಿ ಮಾಡಿರುವ 14 ದಿನಗಳ ಕಾಲ ಜನತಾ ಕರ್ಫ್ಯೂ ಅವಧಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮತ್ತಷ್ಟುದಿನಗಳ ಕಾಲ ಜನತಾ ಕರ್ಫ್ಯೂ ಮುಂದುವರೆಸುವ ಸಾಧ್ಯತೆಯಿದೆ. ಹೀಗಾಗಿ ಆತಂಕಗೊಂಡಿರುವ ಕಾರ್ಮಿಕರು ನಗರ ತೊರೆದು ತವರು ರಾಜ್ಯಗಳಿಗೆ ತೆರಳಲು ಮುಂದಾಗಿದ್ದಾರೆ.

ಬೆಂಗಳೂರಲ್ಲಿ ಲಾಕ್ಡೌನ್‌ ಭೀತಿ : ಮತ್ತೆ ಕಾರ್ಮಿಕರ ಗುಳೆ

ನಿಲ್ದಾಣಗಳಲ್ಲೇ ರಾತ್ರಿ ಕಳೆದ ಕಾರ್ಮಿಕರು

ನಗರದಿಂದ ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಏ.29ರಂದು ರೈಲುಗಳು ಹೊರಡಲಿವೆ. ಆದರೂ ಮಂಗಳವಾರ ಸಂಜೆಯಿಂದಲೇ ಕಾರ್ಮಿಕರು ರೈಲು ನಿಲ್ದಾಣಗಳತ್ತ ದೌಡಾಯಿಸಿದ್ದರು. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ ಹಾಗೂ ಮೆಟ್ರೋ ರೈಲು ಸೇವೆ ಸ್ಥಗಿತವಾಗಿರುವುದರಿಂದ ರೈಲು ನಿಲ್ದಾಣಕ್ಕೆ ಬಸ್‌ ಸಿಗುವುದಿಲ್ಲ ಎಂಬ ಕಾರಣಕ್ಕೆ ಎರಡು ದಿನ ಮುಂಚಿತವಾಗಿಯೇ ಕಾರ್ಮಿಕರು ರೈಲು ನಿಲ್ದಾಣಗಳತ್ತ ಧಾವಿಸಿದ್ದರು. ಮಂಗಳವಾರ ಹಾಗೂ ಬುಧವಾರ ರೈಲು ನಿಲ್ದಾಣಗಳ ಹೊರ ಆವರಣದಲ್ಲೇ ಲಗೇಜುಗಳನ್ನೇ ತಲೆದಿಂಬು ಮಾಡಿಕೊಂಡು ರಾತ್ರಿ ಕಳೆದರು.

ಜನತಾ ಕರ್ಫ್ಯೂ ಇರುವುದರಿಂದ ಕೆಲಸ-ಕಾರ್ಯಗಳು ಸ್ಥಗಿತವಾಗಿವೆ. ಕೆಲಸ ಇಲ್ಲದೇ ನಗರದಲ್ಲಿ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಊಟ, ತಿಂಡಿ, ಮನೆ ಬಾಡಿಗೆ, ಖರ್ಚು-ವೆಚ್ಚ ಭರಿಸಲು ಸಮಸ್ಯೆಯಾಗುತ್ತಿದೆ. ಹೀಗಾಗಿ ತವರು ರಾಜ್ಯಗಳತ್ತ ಹೊರಟ್ಟಿದ್ದೇವೆ. ನಗರದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ವಾಪಾಸಾಗಲ್ಲಿದ್ದೇವೆ. ಅಲ್ಲದೇ ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಸೋಂಕಿಗೆ ತುತ್ತಾದರೆ ಯಾರು ನಮ್ಮ ನೆರವಿಗೆ ಬರುವುದಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿ ಊರುಗಳಿಗೆ ಹೋಗುತ್ತಿದ್ದೇವೆ ಎಂದು ಕಾರ್ಮಿಕರು ಹೇಳಿದರು.
 

Latest Videos
Follow Us:
Download App:
  • android
  • ios