ಬೆಂಗಳೂರು (ಏ.20):  ರಾಜಧಾನಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್‌ ಜಾರಿಯಾಗಬಹುದೆಂಬ ಭೀತಿಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರು ನಗರದಿಂದ ತವರು ರಾಜ್ಯಗಳತ್ತ ಹೊರಟ್ಟಿದ್ದಾರೆ.

ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ನಿಯಂತ್ರಣಕ್ಕೆ ಮತ್ತೆ ಬೆಂಗಳೂರು ಲಾಕ್‌ಡೌನ್‌ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಲಾಕ್‌ಡೌನ್‌ ಮಾಡಿದರೆ ಕಳೆದ ವರ್ಷದಂತೆ ಕಷ್ಟಎದುರಿಸಬೇಕಾಗುತ್ತದೆ ಎಂಬ ಆತಂಕ, ಭಯದಿಂದ ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳ ಭಾರೀ ಸಂಖ್ಯೆಯ ಕಾರ್ಮಿಕರು ಗಂಟು ಮೂಟೆ ಕಟ್ಟಿಕೊಂಡು ತವರು ರಾಜ್ಯಗಳತ್ತ ಮುಖ ಮಾಡಿದ್ದಾರೆ.

ಸೋಮವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹೊರರಾಜ್ಯದ ಕಾರ್ಮಿಕರ ದೊಡ್ಡ ದಂಡೇ ಕಂಡು ಬಂದಿತು. ನಗರದ ವಿವಿಧೆಡೆ ಉಳಿದುಕೊಂಡಿರುವ ಕಾರ್ಮಿಕರು, ಸಾರಿಗೆ ಮುಷ್ಕರದ ನಡುವೆಯೂ ಬೆಳಗ್ಗೆಯಿಂದಲೇ ಆಟೋ, ಕ್ಯಾಬ್‌ ಹಾಗೂ ಖಾಸಗಿ ವಾಹನಗಳನ್ನು ಹಿಡಿದುಕೊಂಡು ರೈಲು ನಿಲ್ದಾಣದತ್ತ ದೌಡಾಯಿಸಿದ್ದರು.

ಇಡೀ ರಾತ್ರಿ ದಹಿಸಿದರೂ ಬರುತ್ತಲೇ ಇವೆ ಮೃತದೇಹಗಳು : ಚಿತಾಗಾರಗಳ ಮುಂದೆ ಸಾಲು ...

ಕೊರೋನಾ ಹಿನ್ನೆಲೆಯಲ್ಲಿ ಜನ ಪ್ರಯಾಣ ಮುಂದೂಡುತ್ತಿರುವುದರಿಂದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿರುತ್ತಿತ್ತು. ಸೋಮವಾರ ಮಾತ್ರ ಬೆಳಗ್ಗೆಯಿಂದ ರಾತ್ರಿ ವರೆಗೂ ಪ್ರಯಾಣಿಕರ ದಟ್ಟಣೆಯಿಂದ ಗಿಜಿಗುಡುತ್ತಿತ್ತು. ರೈಲು ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಹೀಗಾಗಿ ಮಾರ್ಷಲ್‌ಗಳು ಪ್ರಯಾಣಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸಿ, ಮಾಸ್ಕ್‌ ಧರಿಸದವರಿಂದ ದಂಡ ವಸೂಲಿ ಮಾಡಿದರು.

ಉತ್ತರ ಕರ್ನಾಟಕ ಕಾರ್ಮಿಕರು ಹೆಚ್ಚು:  ನಗರ ತೊರೆಯುತ್ತಿರುವ ಕಾರ್ಮಿಕರಲ್ಲಿ ಹೊರ ರಾಜ್ಯದವರು ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದ ರಾಯಚೂರು, ಬೀದರ್‌, ಕೊಪ್ಪಳ, ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳ ಕಾರ್ಮಿಕರು ಇದ್ದರು. ಪ್ಲಾಸ್ಟಿಕ್‌ ಚೀಲಗಳು, ಬ್ಯಾಗ್‌ಗಳಲ್ಲಿ ಸರಕು-ಸರಂಜಾಮು ತುಂಬಿಕೊಂಡು ಕುಟುಂಬ ಸಮೇತ ಊರುಗಳಿಗೆ ತೆರಳಲು ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಿಗೆ ಬಂದಿದ್ದರು. ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ನೇರ ಬಸ್‌ ಸಂಪರ್ಕ ಇಲ್ಲದ ಕಾರಣ ಕೆಲ ಕಾರ್ಮಿಕರು ಸರಕು ಸಾಗಣೆ ವಾಹನಗಳಿಗೆ ಲಗೇಜ್‌ ತುಂಬಿಕೊಂಡು ಊರುಗಳತ್ತ ಪ್ರಯಾಣಿಸಿದರು.

ರಾಜ್ಯ ಸರ್ಕಾರ ಸದ್ಯಕ್ಕೆ ಲಾಕ್‌ಡೌನ್‌ ಜಾರಿ ಇಲ್ಲ ಎಂದು ಹೇಳುತ್ತಿದೆ. ಆದರೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಗಂಭೀರ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟುಬಿಗಡಾಯಿಸಿದರೆ ಲಾಕ್‌ಡೌನ್‌ ಅನಿವಾರ್ಯವಾಗಲೂಬಹುದು ಎಂಬ ಭಾವನೆ ಕಾರ್ಮಿಕರ ಮನದಲ್ಲಿ ಮೂಡಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿ ಈಗಲೇ ನಗರದಿಂದ ಊರುಗಳತ್ತ ಗುಳೆ ಹೊರಟ್ಟಿದ್ದಾರೆ.