ಕಾರ್ಕಳ(ಮೇ 22): ಮಂಗಳೂರಿನಿಂದ ಗೂಡ್ಸ್‌ ಕಂಟೇನರ್‌ ಗಾಡಿಯಲ್ಲಿ ಕಾರ್ಮಿಕರನ್ನು ತುಂಬಿಸಿಕೊಂಡು ರಾಜಸ್ಥಾನಕ್ಕೆ ಸಾಗುತ್ತಿದ್ದ ವೇಳೆ ಕಾರ್ಕಳ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದು, ಕೊನೆಗೆ ಎಲ್ಲರೂ ಪೊಲೀಸ್‌ ಅತಿಥಿಗಳಾದ ಘಟನೆ ಗುರುವಾರ ಪುಲ್ಕೇರಿ ಬೈಪಾಸ್‌ ಬಳಿ ನಡೆದಿದೆ.

ರಾಜಸ್ಥಾನದ ನೋಂದಣಿಯ ಲಾಜಿಸ್ಟಿಕ್‌ ಸಂಸ್ಥೆಗೆ ಸೇರಿದ ಗೂಡ್ಸ್‌ ಕಂಟೇನರ್‌ನಲ್ಲಿ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಸಿಲುಕಿಕೊಂಡ 16 ಮಂದಿ ಕೂಲಿ ಕಾರ್ಮಿಕರನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನದ ರಾಜ್ಯಗಳಿಗೆ ಕದ್ದು-ಮುಚ್ಚಿ ಸಾಗಿಸುತ್ತಿರುವುದಾಗಿ ಇದೇ ವೇಳೆ ಪೊಲೀಸರ ಮುಂದೆ ವಾಹನ ಚಾಲಕ ಒಪ್ಪಿಕೊಂಡಿದ್ದಾನೆ.

ತಂದೆ ಕೂರಿಸಿಕೊಂಡು 1200 ಕಿ.ಮೀ. ಸೈಕಲ್‌ ತುಳಿದ 15 ವರ್ಷದ ಬಾಲಕಿ..!

ರಾಜಸ್ಥಾನದಿಂದ ಧಾನ್ಯಗಳನ್ನು ಹೊತ್ತುಕೊಂಡು ಮಂಗಳೂರಿಗೆ ಅಗಮಿಸಿದ ಈ ಕಂಟೇನರ್‌ ಧಾನ್ಯಗಳನ್ನು ಖಾಲಿ ಮಾಡಿದ ಬಳಿಕ ಮರಳಿ ರಾಜಸ್ಥಾನಕ್ಕೆ ತೆರಳುತ್ತಿತ್ತು. ಈ ವೇಳೆ ಮಂಗಳೂರಿನ ಉಡುಪಿ ಕುಂದಾಪುರ ಹೀಗೆ ನಾನಾ ಕಡೆಗಳಲ್ಲಿ ಕೆಲಸ ಅರಸಿ ಬಂದು ಸಿಲುಕಿಕೊಂಡ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಕೂಲಿ ಕಾರ್ಮಿಕರನ್ನು ಸಂರ್ಪಕಿಸಿ ಊರಿಗೆ ತಲುಪಿಸುವುದಾಗಿ ಅವರಿಂದ ಹಣ ಪಡೆದು ಈ ದಂಧೆಗೆ ಮುಂದಾಗಿರುವುದು ತಿಳಿದು ಬಂದಿದೆ. ಮಂಗಳೂರಿನಿಂದ 12 ಮಂದಿ, ಉಡುಪಿ ಭಾಗದಿಂದ 4 ಮಂದಿ, ಒಟ್ಟು 16 ಕೂಲಿ ಕಾರ್ಮಿಕರನ್ನು ಸೇರಿಸಿ ಕಂಟೇನರ್‌ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.