ಬೆಳಗಾವಿ [ ಆ.29]:  ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಆಪರೇಷನ್‌ ಕಮಲದ ಅನೈತಿಕ ಶಿಶು. ಈ ಅನೈತಿಕ ಸರ್ಕಾರ ಯಾವುದೇ ಕ್ಷಣದಲ್ಲಿ ಬಿದ್ದು, ಮಧ್ಯಂತರ ಚುನಾವಣೆ ಬರಬಹುದು ಎಂದು ಪುನರುಚ್ಚರಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮಧ್ಯಂತರ ಚುನಾವಣೆ ಬಯಸಲ್ಲ. ಆದರೆ, ಸ್ಪಷ್ಟಜನಾದೇಶವಿಲ್ಲದಿದ್ದರೂ ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆ. ಇದೊಂದು ಅನೈತಿಕ ಸರ್ಕಾರ ಎಂದು ಟೀಕಿಸಿದರು.

ಜೆಡಿಎಸ್‌ ನಮ್ಮ ವಿರೋಧಿಯಲ್ಲ:  ನಾವು ಅಧಿಕೃತವಾಗಿ ವಿರೋಧ ಪಕ್ಷದಲ್ಲಿದ್ದೇವೆ. ನಮ್ಮ ವಿರೋಧಿ ಕೋಮುವಾದಿ ಬಿಜೆಪಿಯೇ ಹೊರತು ಜೆಡಿಎಸ್‌ ಅಲ್ಲ. ನಾವು ಜೆಡಿಎಸ್‌ನವರ ಮೇಲೆ ಹಗೆ ಸಾಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿದ್ದಾರೆ. ಪಕ್ಷದ್ರೋಹ ಮಾಡಿದವರಿಗೆ ಪಾಠ ಆಗಲಿ ಎಂದು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು.

ಕೇಂದ್ರದ ಮಲತಾಯಿ ಧೋರಣೆ:

ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿ ಕೋಟ್ಯಂತರ ರುಪಾಯಿ ಹಾನಿಯಾಗಿದ್ದರೂ ಸಂತ್ರಸ್ತರ ನೆರವಿಗೆ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಪ್ರವಾಹ ನಿರ್ವಹಣೆಗೆ ಕೇಂದ್ರ ಸರ್ಕಾರ ಎಷ್ಟುಅನುದಾನ ನೀಡಿದೆ ಎಂಬುದನ್ನು ಬಹಿರಂಗಪಡಿಸಬೇಕು. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಅವರು ಕೇಂದ್ರದ ಮೇಲೆ ಒತ್ತಡವೇರಿ ಅನುದಾನ ತರಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದು ಕೊಂಡಾಡಿ ಗೌಡರ ಕುಟುಂಬದ ಮೇಲೆ ವಾಗ್ದಾಳಿ ಮಾಡಿದ ಸ್ವಾಮೀಜಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದೇಶಕ್ಕೆ ಹೋಗಲು ಸಮಯ ಸಿಗುತ್ತದೆ. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ವೈಮಾನಿಕ ಸಮೀಕ್ಷೆ ಕೈಗೊಳ್ಳಲು ಸಮಯ ಸಿಗುತ್ತಿಲ್ಲ ಎಂದು ಟೀಕಿಸಿದರು.

ಕೇಂದ್ರ ಗೃಹ ಸಚಿವ ಅಮಿತ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಾಟಾಚಾರಕ್ಕೆ ಎಂಬಂತೆ ಕರ್ನಾಟಕದ ಪ್ರವಾಹ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಅವರಿಗೆ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಬಿಎಸ್‌ವೈ ಅಲ್ಲ ಅಲ್ಲ... ಈಶ್ವರಪ್ಪ ಮೂರ್ಖ

ಸಿದ್ದರಾಮಯ್ಯ ಆಪರೇಷನ್‌ ಕಮಲದ ಜನಕ ಎಂಬ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಒಬ್ಬ ಮೂರ್ಖ ಮೂದಲಿಸಿದರು. ತಕ್ಷಣ ತಾವು ಮಾಡಿದ ತಪ್ಪಿನ ಅರಿವಾಗುತ್ತಿದ್ದಂತೆ ಯಡಿಯೂರಪ್ಪ ಅಲ್ಲ, ಈಶ್ವರಪ್ಪ ಮೂರ್ಖ. ಅವರ ನಾಲಿಗೆಗೂ, ಬ್ರೈನ್‌ಗೂ ಲಿಂಕ್‌ ಇಲ್ಲ ಎಂದರು.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಇನ್ನೂ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ವೀಕ್ಷಕರ ವರದಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ಆರ್‌ಎಸ್‌ಎಸ್‌ನ ಬಹಳ ಮಂದಿ ಸಿಎಂ ಯಡಿಯೂರಪ್ಪಗೆ ಸಲಹೆ ನೀಡುತ್ತಾರೆ ಎಂದು ವ್ಯಂಗ್ಯ ಮಾಡಿದರು.