ಬಳ್ಳಾರಿ(ಸೆ.26) ಶಾಲೆಗಳಲ್ಲಿ ಶೌಚಾಲಯಗಳನ್ನು ಶುಚಿಗೊಳಿಸಬೇಕು. ಅಗತ್ಯದಷ್ಟು ಆಹಾರ ಧಾನ್ಯಗಳನ್ನು ನೀಡದೆ ಸತಾಯಿಸುವ ಮುಖ್ಯಗುರುಗಳ ವಿರುದ್ಧ ತುಟಿ ಪಿಟಿಕ್ ಎನ್ನದೆ ಕೆಲಸ ಮಾಡಬೇಕು. ಜತೆಗೆ ಎಸ್‌ಡಿಎಂಸಿಗಳ ಕಾಟವನ್ನು ಸಹಿಸಿಕೊಳ್ಳಬೇಕು.

ಇದು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಅಡುಗೆದಾರರು ಹಾಗೂ ಸಹಾಯಕರ ಸ್ಥಿತಿ. ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ಬಿಸಿಯೂಟ ನೌಕರರು ಸರ್ಕಾರಿ ಶಾಲೆಗಳಲ್ಲಿ ಜೀತದಾಳುಗಳಂತೆ ದುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಕಾಯಂ ಅಲ್ಲದ ಕೆಲಸ. ಶಾಲೆಯ ಮುಖ್ಯಗುರುಗಳು, ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ಮಾತುಗಳನ್ನು ತಪ್ಪದೆ ಪಾಲಿಸಬೇಕು. ಇಲ್ಲದಿದ್ದರೆ ಜಾಗ ಖಾಲಿ ಮಾಡು ಎನ್ನುತ್ತಾರೆ. ಇಲ್ಲಸಲ್ಲದ ಆರೋಪ ಹೊರಿಸಿ ಕೆಲಸದಿಂದ ಬಿಡಿಸುತ್ತಾರೆ. ಎಲ್ಲವನ್ನು ನುಂಗಿಕೊಂಡು ಕೆಲಸ ಮಾಡ ಬೇಕಾಗಿದೆ ಎಂಬುದು ಅಡುಗೆ ತಯಾರಕರ ಅಳಲು. 

ಶೌಚಾಲಯ ಶುಚಿ ಮಾಡಬೇಕು: 

ಈ ಬಗ್ಗೆ ಮಾತನಾಡಿದ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಿ.ಎಂ. ಶಿಲ್ಪಾ ಅವರು, ಬಿಸಿಯೂಟ ಮುಖ್ಯ ಅಡುಗೆದಾರರು ಹಾಗೂ ಸಹಾಯಕರು ಮಕ್ಕಳಿಗೆ ಅಡುಗೆ ತಯಾರಿಸಿ ಬಡಿಸುವುದಷ್ಟೇ ಅವರ ಜವಾಬ್ದಾರಿ. ಆದರೆ, ಅವರಿಂದ ಶೌಚಾಲಯಗಳನ್ನು ಶುಚಿಗೊಳಿಸುವ ಕೆಲಸವನ್ನು ಸಹ ಮಾಡಿಸುತ್ತಾರೆ. ಈ ಬಗ್ಗೆ ಸಂಘಟನೆಗೆ ಅನೇಕ ದೂರುಗಳು ಬಂದಿವೆ. ಕೆಲವರು ದೂರು ನೀಡಿದರೆ ಸಮಸ್ಯೆಯಾದೀತು ಎಂದು ನಮ್ಮ ಗಮನಕ್ಕೂ ತರುವುದಿಲ್ಲ. ಎಲ್ಲ ಸಂಕಟ ನುಂಗಿಕೊಂಡೇ ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಬಿಸಿಯೂಟ ಸಿಬ್ಬಂದಿಯಿಂದ ಶೌಚಾಲಯ ಶುಚಿ ಮಾಡಿಸುವುದು ತಪ್ಪು. ಶೌಚಾಲಯ ಶುಚಿಗೊಳಿಸಿಕೊಳ್ಳಲು ಡಿ ಗ್ರೂಪ್ ನೌಕರರನ್ನು ನೇಮಿಸಿಕೊಳ್ಳಬೇಕು. ಆದರೆ, ಮುಖ್ಯಗುರುಗಳು ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ತಾವು ಉಪಯೋಗಿಸುವ ಶೌಚಾಲಯ ಶುಚಿ ಮಾಡುವಂತೆ ಸೂಚಿಸುತ್ತಾರೆ. ಇನ್ನು ಮುಖ್ಯಗುರುಗಳು ಅಡುಗೆ ತಯಾರಿಕೆಗೆ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ನೀಡುವುದಿಲ್ಲ. ಅವರನ್ನು ಜೋರಾಗಿ ಪ್ರಶ್ನಿಸುವಂತೆಯೂ ಇಲ್ಲ. ಹೆಚ್ಚಿಗೆ ಮಾತನಾಡಿದರೆ ಕೆಲಸ ಹೋಗುತ್ತದೆ ಎಂಬ ಭಯ. ಹೀಗಾಗಿ ಅವರು ಕೊಟ್ಟ ರೇಷನ್‌ನಲ್ಲಿಯೇ ಅಡುಗೆ ಮಾಡಬೇಕು. ನೂರಾರು ಮಕ್ಕಳು ಇರುವ ಶಾಲೆಯಲ್ಲಿ ಕಾಯಿಪಲ್ಯೆ, ಎಣ್ಣೆ ಕಡಿಮೆ ನೀಡಿದರೆ ಅದು ಹೇಗೆ ಊಟ ರುಚಿ ಯಾಗಿರಲು ಸಾಧ್ಯ, ಗುಣಮಟ್ಟ ಇರಲು ಸಾಧ್ಯ ಎಂಬುದು ಬಿಸಿಯೂಟ ನೌಕರರ ಪ್ರಶ್ನೆ. 

ಎಸ್‌ಡಿಎಂಸಿ ಕಾಟ ತಪ್ಪಿಲ್ಲ: 

ಒಂದೆಡೆ ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ ಕಿರಿಕಿರಿಯಾದರೆ ಮತ್ತೊಂದೆಡೆ ಸ್ಥಳೀಯ ಎಸ್‌ಡಿಎಂಸಿಗಳ ಕಾಟ ಮತ್ತೊಂದು ಬಗೆಯ ಕಿರಿಕಿರಿ. ಶಾಲೆಗೆ ಭೇಟಿ ನೀಡುವ ಎಸ್‌ಡಿಎಂಸಿ ಅಧ್ಯಕ್ಷರು, ‘ಅನ್ನ ಬೆಂದಿಲ್ಲ. ಸಾರು ರುಚಿಯಿಲ್ಲ’ ಹೀಗೆ ನಾನಾ ಕಾರಣಗಳನ್ನು ಹುಡುಕಿ ಕೆಲಸದಿಂದ ಹೊರ ಹಾಕುವ ಸಂಚು ಮಾಡುತ್ತಾರೆ. ತಮಗೆ ಬೇಕಾದವರರನ್ನು ಅಡುಗೆ ತಯಾರಕರನ್ನಾಗಿ ನೇಮಿಸಿಕೊಳ್ಳಲು ನಿರಂತರ ಕಿರಿಕಿರಿ ನೀಡುತ್ತಾರೆ. ಮುಖ್ಯಗುರುಗಳಿಗೆ ದೂರು ನೀಡುತ್ತಾರೆ. ಎಸ್‌ಡಿಎಂಸಿ ಕಾಟದಿಂದ ಮುಖ್ಯಗುರುಗಳು ತಪ್ಪಿಸಿಕೊಳ್ಳಲು ನಮ್ಮ ಮೇಲೆ ರೇಗಾಡುತ್ತಾರೆ. ಈ ಎಲ್ಲವನ್ನು ಸಹಿಸಿಕೊಂಡರೆ ಮಾತ್ರ ಕೆಲಸ ಉಳಿಯುತ್ತದೆ ಎಂದು ಬಿಸಿಯೂಟ ನೌಕರ ಸಿಬ್ಬಂದಿ ಗೋಳಿಡುತ್ತಾರೆ. 

ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ: 

ಬಿಸಿಯೂಟ ನೌಕರರು ಬೆಳಗ್ಗೆ 9.30 ರಿಂದ ಮಧ್ಯಾಹ್ನ ಬಿಸಿಯೂಟ ಪೂರೈಸುವವರೆಗೆ ಮಾತ್ರ ಇರಬೇಕು. ಆದರೆ, ಬಹುತೇಕ ಶಾಲೆಗಳಲ್ಲಿ ಸಂಜೆವರೆಗೆ ಇರುವಂತೆ ಸೂಚಿಸಲಾಗುತ್ತದೆ. ಶಾಲೆಯ ಸಣ್ಣಪುಟ್ಟ ಕೆಲಸ ಮಾಡಲು ಇರಲಿ ಎಂಬ ಕಾರಣಕ್ಕಾಗಿ ಸಂಜೆವರೆಗೆ ಇರಿಸಿಕೊಳ್ಳಲಾಗುತ್ತದೆ. ಹಾಗಂತ ತಿಂಗಳಿಗೆ ಅವರಿಗೆ ಹೊಟ್ಟೆ ತುಂಬವಷ್ಟು ಸಹ ಸಂಬಳ ಬರುವುದಿಲ್ಲ. ಮುಖ್ಯ ಅಡುಗೆದಾರರು 2700 ಹಾಗೂ ಸಹಾಯಕರಿಗೆ 2600 ಮಾತ್ರ ನೀಡಲಾಗುತ್ತಿದ್ದು, ಈ ಹಣದಲ್ಲಿ ಇಡೀ ತಿಂಗಳು ದುಡಿಯಬೇಕು. ಇಲ್ಲಿ ಕೆಲಸ ಮಾಡುವವರ ಪೈಕಿ ಹೆಚ್ಚಿನವರು ವಿಧವೆಯರು ಹಾಗೂ ಒಂದಷ್ಟು ಪ್ರಮಾಣದ ಅಂಗವೈಕಲ್ಯ ಇರುವವರು ಇದ್ದು, ಈ ಕೆಲಸವಿಲ್ಲದೆ ಬೇರೆ ವಿಧಿಯಿಲ್ಲ ಎನ್ನುವಂತಾಗಿದೆ. ಹೀಗಾಗಿ ಎಷ್ಟೇ ಸಮಸ್ಯೆ ಎದುರಾದರೂ ಪ್ರತಿಭಟಿ ಸುವುದಿಲ್ಲ. ಬದಲಿಗೆ ಸಹಿಸಿಕೊಂಡೇ ಕೆಲಸ ಮಾಡ ಬೇಕಾಗಿದೆ.

4360 ಮಹಿಳೆಯರಿಂದ ಕೆಲಸ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 4360 ಮಹಿಳೆಯರು ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ವಿಧವೆಯರು, ವೃದ್ಧರು, ಒಂದಷ್ಟು ಅಂಗವೈಕಲ್ಯ ಇರುವವರೇ ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಅನೇಕ ಮಹಿಳೆಯರು ಮನೆಯಲ್ಲಿ ಕಡುಬಡತನ ಎಂಬ ಕಾರಣಕ್ಕೆ ವಿದ್ಯಾವಂತರಾದರೂ ಈ ಕೆಲಸಕ್ಕೆ ಬಂದಿದ್ದಾರೆ. 

ಈ ಬಗ್ಗೆ ಮಾತನಾಡಿದ ಬಿಸಿಯೂಟ ನೌಕರರ ಸಂಘ (ಸಿಐಟಿಯು ಸಂಯೋಜಿತ) ಅಧ್ಯಕ್ಷೆ ಬಿ.ಎಂ. ಶಿಲ್ಪಾ ಅವರು, ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುವ ಅಡುಗೆ ತಯಾರಕರು ಹಾಗೂ ಸಹಾಯಕರಿಂದ ಶೌಚಾಲಯ ಶುಚಿಗೊಳಿಸುತ್ತಾರೆ. ಇದು ಅತ್ಯಂತ ಅಮಾನವೀಯ. ಅನೇಕರು ತಮ್ಮ ಸಂಕಷ್ಟಗಳನ್ನು ನಮ್ಮ ಮುಂದೆ ಹೇಳಿಕೊಳ್ಳುತ್ತಾರೆ. ನಾವುಸರಿಪಡಿಸುವ ಕೆಲಸ ಮಾಡುತ್ತೇವೆ. ಬಹುತೇಕರು ಹಾಗೆಯೇ ಸಹಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಬಳ್ಳಾರಿ ಡಿಡಿಪಿಐ ಶ್ರೀಧರನ್ ಅವರು, ಬಿಸಿಯೂಟ ನೌಕರರನ್ನು ಶೌಚಾಲಯ ಶುಚಿಗೊಳಿಸಲು ನಿಯೋಜಿಸಿರುವ ಕುರಿತು ನಮಗೆ ಯಾವುದೇ ಲಿಖಿತ ದೂರುಗಳು ಬಂದಿಲ್ಲ. ತಮ್ಮ ಸಂಘಟನೆಗಳಿಗೆ ದೂರು ನೀಡಿರಬಹುದು. ಹಾಗೇನಾದರೂ ಕಂಡು ಬಂದರೆ ಖಂಡಿತ ಕ್ರಮವಹಿಸುವೆ ಎಂದು ತಿಳಿಸಿದ್ದಾರೆ.