ಬೆಂಗಳೂರು ನಗರದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ಈ ನಾಯಿಗಳಿಗೆ ಪ್ರತಿ ವರ್ಷ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್‌ ಸೇರಿದಂತೆ ವಿವಿಧ ರೋಗಗಳಿಗೆ ಲಸಿಕೆ, ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಯಾವ ನಾಯಿಗೆ ಈಗಾಗಲೇ ಸಂತಾನ ಹರಣ ಶಸ್ತ್ರಚಿಕಿತ್ಸೆ, ಆ್ಯಂಟಿ ರೇಬಿಸ್‌ ಲಸಿಕೆ ನೀಡಲಾಗಿದೆ. ಯಾವ ನಾಯಿಗೆ ನೀಡಿಲ್ಲ ಎಂಬುದು ತಿಳಿಯುವುದು ಕಷ್ಟ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜು.29):  ರಾಜಧಾನಿ ಬೆಂಗಳೂರಿನ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೀಕರಣದ ಪುನಾರಾರ್ವತನೆ ತಪ್ಪಿಸುವುದಕ್ಕೆ ಅವುಗಳಿಗೆ ಮೈಕ್ರೋ ಚಿಪ್‌ ಅಳವಡಿಸುವ ಮೂಲಕ ಪ್ರತಿಯೊಂದು ಬೀದಿ ನಾಯಿಯ ದತ್ತಾಂಶ ದಾಖಲೆಯನ್ನು ಡಿಜಿಟಲಿಕರಣಗೊಳಿಸುವ ಸಿದ್ಧತೆಯನ್ನು ಬಿಬಿಎಂಪಿ ನಡೆಸಿದೆ.

ನಗರದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ಈ ನಾಯಿಗಳಿಗೆ ಪ್ರತಿ ವರ್ಷ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್‌ ಸೇರಿದಂತೆ ವಿವಿಧ ರೋಗಗಳಿಗೆ ಲಸಿಕೆ, ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಯಾವ ನಾಯಿಗೆ ಈಗಾಗಲೇ ಸಂತಾನ ಹರಣ ಶಸ್ತ್ರಚಿಕಿತ್ಸೆ, ಆ್ಯಂಟಿ ರೇಬಿಸ್‌ ಲಸಿಕೆ ನೀಡಲಾಗಿದೆ. ಯಾವ ನಾಯಿಗೆ ನೀಡಿಲ್ಲ ಎಂಬುದು ತಿಳಿಯುವುದು ಕಷ್ಟ.

Bengaluru: ಬೀದಿ ನಾಯಿಗಳ ಸಮೀಕ್ಷೆಗೂ ಎಐ- ಡ್ರೋನ್ ಬಳಕೆ: ಬಿಬಿಎಂಪಿ ತಾಂತ್ರಿಕ ಚಿಂತನೆ

ಹೀಗಾಗಿ, ಪ್ರತಿ ವರ್ಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆ್ಯಂಟಿ ರೇಬಿಸ್‌ ಲಸಿಕೆ ನೀಡುವ ಪ್ರಕ್ರಿಯೆ ಪುನರಾವರ್ತನೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ತಪ್ಪಿಸುವುದರೊಂದಿಗೆ ಬಿಬಿಎಂಪಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ತಡೆಗಟ್ಟಲು ಪಾಲಿಕೆ ಪಶುಪಾಲನಾ ವಿಭಾಗವು ನಗರದಲ್ಲಿರುವ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಅಳವಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಾಯೋಗಿಕವಾಗಿ 100 ನಾಯಿಗೆ ಚಿಪ್‌:

ನಗರದ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಅಳವಡಿಕೆಗೂ ಮುನ್ನ ಪ್ರಾಯೋಗಿಕವಾಗಿ ನಗರದ ಒಂದು ನಿರ್ದಿಷ್ಟಬಡಾವಣೆ ಅಥವಾ ಪ್ರದೇಶದ 100 ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಹಾಕಲು ಚಿಂತನೆ ನಡೆಸಲಾಗಿದೆ. ಮೈಕ್ರೋ ಚಿಪ್‌ನ ಕಾರ್ಯ ವೈಖರಿ ಯಶಸ್ವಿಯಾದರೆ, ನಗರದ ಎಲ್ಲಾ ಬೀದಿ ನಾಯಿಗಳಿಗೆ ಅಳವಡಿಸಲು ಪಾಲಿಕೆ ಪಶುಪಾಲನಾ ವಿಭಾಗ ಚಿಂತನೆ ನಡೆಸಿದೆ.

ವಿವಿಧ ಕಂಪನಿಗಳೊಂದಿಗೆ ಚರ್ಚೆ:

ಮೈಕ್ರೋ ಚಿಪ್‌ ಅಳವಡಿಕೆ ಕುರಿತು ಪಶುಪಾಲನೆ ವಿಭಾಗದ ಅಧಿಕಾರಿಗಳು ಈಗಾಗಲೇ ಮೂರ್ನಾಲ್ಕು ಕಂಪನಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಯಾವ ಕಂಪನಿ ಸೂಕ್ತ ಎಂಬುದನ್ನು ಪರಿಶೀಲಿಸಿ ಮೈಕ್ರೋ ಚಿಪ್‌ ಅಳವಡಿಕೆ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ರವಿಕುಮಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ದೇಶದಲ್ಲಿಯೇ ಮೊದಲು

ವಿದೇಶದಲ್ಲಿ ನಾಯಿಗಳಿಗೆ ಮೈಕ್ರೋ ಚಿಪ್‌ ಹಾಕುವುದು ಸಾಮಾನ್ಯವಾಗಿದೆ. ಕೆನಡಾ, ಆಫ್ರಿಕಾ ಸೇರಿದಂತೆ ವಿವಿಧ ದೇಶದಲ್ಲಿ ಈಗಾಗಲೇ ನಾಯಿಗಳಿಗೆ ಚಿಪ್‌ ಅಳವಡಿಸಲಾಗುತ್ತಿದೆ. ಆದರೆ, ಭಾರತದ ಯಾವುದೇ ನಗರದಲ್ಲಿ ಈ ರೀತಿ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಹಾಕಿಲ್ಲ. ಈ ಮೂಲಕ ಬೆಂಗಳೂರು ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಅಳವಡಿಕೆಯ ಮೊದಲ ನಗರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಥಮ ಬಾರಿಗೆ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಡ್ರೋಣ್ ಬಳಕೆ!

ಮೈಕ್ರೋ ಚಿಪ್‌ ಬಳಕೆ ಹೇಗೆ?

ನಾಯಿಯ ಕುತ್ತಿಗೆ ಭಾಗದಲ್ಲಿ ಮೈಕ್ರೋ ಚಿಪ್‌ ಅಳವಡಿಕೆ ಮಾಡಲಾಗುತ್ತದೆ. ಚಿಪ್‌ನಲ್ಲಿ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್‌ ಲಸಿಕೆ ನೀಡಿದ ವಿವರ ಸೇರಿದಂತೆ ನಾಯಿ ಗಂಡು ಅಥವಾ ಹೆಣ್ಣು, ಎಷ್ಟುವರ್ಷದ ನಾಯಿ ಎಂಬ ಎಲ್ಲಾ ಮಾಹಿತಿಯನ್ನು ದಾಖಲು ಮಾಡಲಾಗುತ್ತದೆ. ಈ ಮೈಕ್ರೋ ಚಿಪ್‌ ಅನ್ನು ಮೊಬೈಲ್‌ನಲ್ಲಿ ಸ್ಕಾ್ಯನ್‌ ಮಾಡಿದರೆ, ಎಲ್ಲಾ ಮಾಹಿತಿ ಲಭ್ಯವಾಗಲಿದೆ. ಈ ಮಾಹಿತಿಯನ್ನು ಪರಿಷ್ಕರಣೆ, ಬದಲಾವಣೆ, ಹೆಚ್ಚಿನ ಮಾಹಿತಿ ದಾಖಲು ಮಾಡುವುದಕ್ಕೆ ಅವಕಾಶ ಇರಲಿದೆ.

ನಗರದ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಅಳವಡಿಕೆ ಮಾಡುವುದಕ್ಕೆ ಅಗತ್ಯವಿರುವ ಅನುದಾನವನ್ನು ಮೀಸಲಿಡಲಾಗಿದೆ. ಆದರೆ, ಪ್ರತಿ ಮೈಕ್ರೋ ಚಿಪ್‌ಗೆ ಎಷ್ಟುಹಣ ಆಗಲಿದೆ ಎಂಬುದು ಚಿಪ್‌ ಅಳವಡಿಕೆ ಕಂಪನಿ ಅಂತಿಮವಾದ ಬಳಿಕ ನಿರ್ಧರವಾಗಲಿದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಕೆ.ಪಿ.ರವಿಕುಮಾರ್‌ ತಿಳಿಸಿದ್ದಾರೆ.