ಬೆಂಗಳೂರು [ಡಿ.06]:  ಬಿಬಿಎಂಪಿಯ ಏಳು ವಲಯದ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರ ಆಯ್ಕೆಗೆ ಡಿ.21ರಂದು ಚುನಾವಣೆ ನಡೆಸುವುದಕ್ಕೆ ಸಹಕಾರಿ ಚುನಾವಣಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಪ್ರತಿ ವಲಯದ ಪಟ್ಟಣ ವ್ಯಾಪಾರಿ ಸಮಿತಿಗೆ ತಲಾ 10 ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಬಿಬಿಎಂಪಿಯಿಂದ ಗುರುತಿನ ಚೀಟಿ ಪಡೆದಿರುವ ಬೀದಿಬದಿ ವ್ಯಾಪಾರಿಗಳು ಮತದಾನದ ಹಕ್ಕನ್ನು ಹೊಂದಿದ್ದಾರೆ. ಚುನಾವಣೆ ನಡೆಯುತ್ತಿರುವ ಏಳು ವಲಯದಲ್ಲಿ ಒಟ್ಟು 14,112 ಮತದಾರರಿದ್ದಾರೆ.

ಆಯಾ ವಲಯದ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಡಿ.9 ರಿಂದ 13ರ ವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ನಾಮಪತ್ರ ವಾಪಾಸ್‌ ಪಡೆಯುವುದಕ್ಕೆ ಡಿ.15 ಕೊನೆಯ ದಿನವಾಗಿದ್ದು, ಡಿ.21ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಈಗಾಗಲೇ ವಲಯವಾರು ನಿಗದಿ ಪಡಿಸಿರುವ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅದೇ (ಡಿ.21) ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಹಕಾರಿ ಚುನಾವಣಾ ಪ್ರಾಧಿಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿ ಪಟ್ಟಣ ವ್ಯಾಪಾರಿ ಸಮಿತಿಯಲ್ಲೊ ಒಟ್ಟು 10 ಮಂದಿ ಸದಸ್ಯರು ಇರತಕ್ಕದ್ದು, ಅದರಲ್ಲಿ 1/3 ರಷ್ಟುಮಹಿಳಾ ಸದಸ್ಯರು, ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ವರ್ಗ, ಅಂಗವಿಕಲರು, ಅಲ್ಪಸಂಖ್ಯಾತರಲ್ಲಿ ಕನಿಷ್ಠ ಒಬ್ಬ ಸದಸ್ಯರ ಇರಬೇಕು ಎಂದು ಚುನಾವಣಾ ಪ್ರಾಧಿಕಾರ ತಿಳಿಸಿದೆ.

ಗುರುತಿನ ಚೀಟಿ ಇದ್ರೆ ಮತದಾನದ ಹಕ್ಕು:

ಬಿಬಿಎಂಪಿಯಿಂದ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣದಡಿ ಬಿಬಿಎಂಪಿ ಎಂಟು ವಲಯದಲ್ಲಿ ಒಟ್ಟು 24,861 ಮಂದಿ ಬೀದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 14,112 ಮಂದಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಗುರುತಿನ ಚೀಟಿ ಹೊಂದಿರುವ ಬೀದಿ ವ್ಯಾಪಾರಿಗಳಿಗೆ ಮಾತ್ರ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರ ಆಯ್ಕೆಗೆ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಬಿಬಿಎಂಪಿಯ ಎಂಟು ವಲಯಗಳ ಪೈಕಿ ಬೊಮ್ಮನಹಳ್ಳಿ ವಲಯದಲ್ಲಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಆಗದ ಹಿನ್ನೆಲೆಯಲ್ಲಿ ಉಳಿದ ಏಳು ವಲಯದ ವ್ಯಾಪಾರಿ ಸಮಿತಿಗೆ ಈಗ ಚುನಾವಣೆ ನಡೆಸಲಾಗುತ್ತಿದೆ.