ಶಿವಮೊಗ್ಗ(ಮೇ.20): ತಾಯಿ ಮೃತಪಟ್ಟು ಐದು ದಿನ ಕಳೆದಿದ್ದರೂ ಆಕೆಯ ಮಗಳು ಶವದೊಂದಿಗೆ ಕಾಲ ಕಳೆದಿರುವ ಆಶ್ಚರ್ಯಕರ ಮತ್ತು ಅಘಾತಕಾರಿ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಬಸವನಗುಡಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮೃತಪಟ್ಟ ಮಹಿಳೆಯನ್ನು ಬಸವನಗುಡಿ ನಿವಾಸಿ, ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ ಎಂದು ಗುರುತಿಸಲಾಗಿದೆ.

ಮಲೆನಾಡಿನ ನಿದ್ದೆಗೆಡಿಸಿದ ವೈದ್ಯರ ಟ್ರಾವೆಲ್‌ ಹಿಸ್ಟರಿ..!

ರಾಜೇಶ್ವರಿ ಪತಿ 20 ವರ್ಷದ ಹಿಂದೆಯೇ ಮೃತಪಟ್ಟಿದ್ದು, ಮನೆಯಲ್ಲಿ ತಾಯಿ ರಾಜೇಶ್ವರಿ ಮತ್ತು ಪುತ್ರಿ ಶಾಂಭವಿ ಇಬ್ಬರೇ ವಾಸಿಸುತ್ತಿದ್ದರು. ಶಾಂಭವಿ ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್‌ ಸಮಸ್ಯೆಯಿಂದ ಬಳಲುತ್ತಿದ್ದ ರಾಜೇಶ್ವರಿ ಮನೆಯ ಹಾಲ್‌ನಲ್ಲಿಯೇ ಮೃತಪಟ್ಟಿದ್ದಾರೆ. ಈ ಮೃತ ಶರೀರವನ್ನು ದಾಟಿಕೊಂಡೇ ಶಾಂಭವಿ ಅಡುಗೆ ಮನೆಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ.

ಮನೆಯಿಂದ ಕೊಳೆತ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಜಯನಗರ ಠಾಣೆ ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.