ಶಿವಮೊಗ್ಗ(ಜು.21): ಸಾಗರ ಮತ್ತು ಹೊಸನಗರ ತಾಲೂಕಿನ ಗಡಿ ಪ್ರದೇಶಗಳಲ್ಲಿರುವ ಗಡಿಕಟ್ಟೆ, ಪುರಪ್ಪೆಮನೆ, ಬಟ್ಟೆಮಲ್ಲಪ್ಪ, ಹೆಗ್ಗೋಡು ಇತ್ಯಾದಿ ವ್ಯಾಪ್ತಿಯ ಹಲವು ಪರಿಸರಾಸಕ್ತರು ಈ ವರ್ಷದ ಮಳೆಗಾಲದಲ್ಲಿಯೇ ಮಳೆಕೊಯ್ಲು ಮಾಡಲು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಪರಿಸರ ರಕ್ಷಣೆಯ ಜಾಗೃತಿ:

‘ಘಟ್ಟದತ್ತ ದಿಟ್ಟಹೆಜ್ಜೆ’ ’ಪಶ್ಚಿಮ ಘಟ್ಟಉಳಿಸಿ ’ಇತ್ಯಾದಿ ವಿಷಯ ಆಧರಿಸಿ ಕಳೆದ 5-6 ವರ್ಷಗಳಿಂದ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿರುವ ಪರಿಸರ ಪ್ರೇಮಿಗಳು ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆ, ಜನ ಜಾಗೃತಿ ಬೀದಿ ನಾಟಕ ಇತ್ಯಾದಿ ಸಂಘಟಿಸುತ್ತಿದ್ದರು. ಸಮಾನ ಮನಸ್ಕ ಪರಿಸರ ಪ್ರೇಮಿಗಳು ಈಗ ಇಂಗು ಗುಂಡಿ ನಿರ್ಮಾಣ ನಡೆಸಿ ಸಾರ್ವಜಜನಿಕರ ಮೆಚ್ಚುಗೆ ಪಡೆಯುತ್ತಿದ್ದಾರೆ.

ಈ ವರ್ಷದ ಮಳೆಗಾಲದಲ್ಲಿಯೇ ಇಂಗು ಗುಂಡಿ ನಿರ್ಮಿಸುವ ಬಗ್ಗೆ ಪರಿಸರಾಸಕ್ತರಾದ ರಂಗಕರ್ಮಿ ಚಿದಂಬರ್‌ರಾವ್‌ ಜಂಬೆ, ಜಿ.ಕೆ.ಕೃಷ್ಣಮೂರ್ತಿ, ಕುಲಕರ್ಣಿ, ಹೆಗ್ಗೋಡು ಗ್ರಾ.ಪಂ.ಮಾಜಿ ಅಧ್ಯಕ್ಷ ಗುರುದತ್ತ, ಸಾಂಶಿ ಪ್ರಭಾಕರ, ಉಮಾಮಹೇಶ್ವರ ಹೆಗಡೆ, ಡಾ. ಪತಂಜಲಿ, ದೇವೇಂದ್ರ ಬೆಳಯೂರು, ರಾಧಾಕೃಷ್ಣ ಬಂದಗದ್ದೆ, ಯೇಸು ಪ್ರಕಾಶ, ಪ್ರಕಾಶ ಕಾಕಲ್‌ ಇನ್ನಿತರರು ಜೂನ್‌ ಮೊದಲ ವಾರ ಎರಡು ಸಲ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದರು.

ಖಾಲಿ ಇರುವದ ಸ್ಥಳದಲ್ಲಿ ಇಂಗು ಗುಂಡಿ:

ಸಾಗರ-ಹೊಸನಗರ ಮುಖ್ಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿಗೆ ಹೊಂದಿಕೊಂಡಂತೆ ಖಾಲಿ ಸ್ಥಳ ಇರುವಲ್ಲಿ 4 ರಿಂದ 5 ಅಡಿ ಅಗಲ ಮತ್ತು 2 ರಿಂದ 3 ಅಡಿ ಆಳ ಬರುವಂತೆ ಗುಂಡಿ ನಿರ್ಮಿಸಿದ್ದಾರೆ. ಗುಂಡಿಯಿಂದ ಗುಂಡಿಗೆ 20 ಅಡಿ ಅಂತರ ಬರುವಂತೆ ಗುಂಡಿ ನಿರ್ಮಿಸಲಾಗಿದೆ. ಸೊಪ್ಪನ ಬೆಟ್ಟಮತ್ತು ಕಾಡು ಪ್ರದೇಶದ ಇಳಿಜಾರು ಸ್ಥಳ ಗುರುತಿಸಿ ಜೆಸಿಬಿ ಬಳಸಿ ಇಂಗು ಗುಂಡಿ ನಿರ್ಮಿಸಲಾಗುತ್ತಿದೆ.

ಅನುಮತಿ ಮೇಲೆ ಖಾಸಗಿ ವ್ಯಕ್ತಿಗಳ ಸ್ಥಳದಲ್ಲಿಯೂ ಇಂಗು ಗುಂಡಿ:

ಅಲ್ಲದೆ ಸಮ್ಮತಿ ನೀಡಿದ ಖಾಸಗಿ ವ್ಯಕ್ತಿಗಳ ಬ್ಯಾಣ, ಬೆಟ್ಟ, ಬಗರ್‌ ಹುಕುಂ ಪ್ರದೇಶದಲ್ಲಿ ಸಹ ಇಂಗು ಗುಂಡಿ ನಿರ್ಮಿಸಿದ್ದಾರೆ. ಕಳೆದ ಶನಿವಾರ ದಿಂದ ಗುರುವಾರದ ವರೆಗೆ ಒಟ್ಟು 65 ಕ್ಕೂ ಅಧಿಕ ಸ್ಥಳದಲ್ಲಿ ಇಂಗು ಗುಂಡಿ ನಿರ್ಮಾಣವಾಗಿದೆ. ಮುಖ್ಯ ಚರಂಡಿಯ ಪಕ್ಕದಲ್ಲೆ ನೀರು ತುಂಬಿಸುವ ಇಂಗು ಗುಂಡಿ ಸಾಕಾರಗೊಳ್ಳುತ್ತಿದೆ. ಗಡಿಕಟ್ಟೆ, ನಂದಿತಳೆ , ಹೊನ್ನೆಸರ , ಕಲ್ಲುಕೊಪ್ಪ , ಚೆನ್ನಿಗನತೋಟ,ಆತವಡಿ ಇತ್ಯಾದಿ ರಸ್ತೆ ಪಕ್ಕದಲ್ಲಿ ಸಹ ಇಂಗು ಗುಂಡಿ ನಿರ್ಮಾಣಗೊಳಿಸಿದ್ದಾರೆ.

ಪುರಪ್ಪೆಮನೆಯ ಡಾ.ಪತಂಜಲಿ, ಪುರಪ್ಪೆಮನೆ ಗ್ರಾ.ಪಂ.ಸದಸ್ಯ ಮೃತ್ಯಂಜಯ, ಕಲ್ಲುಕೊಪ್ಪದ ರಾಜು, ಶ್ರೀಪಾದ ಭಾಗ್ವತ್‌, ಕಲಾವಿದ ಯೇಸು ಪ್ರಕಾಶ, ಕಾಕಲ್‌ ಪ್ರಕಾಶ್‌ ಇನ್ನಿತರರು ಈ ಗುಂಡಿ ನಿರ್ಮಾಣದ ಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಮರುಭೂಮಿಯಲ್ಲೂ ಗಿಡ ಬೆಳೆಯಬಹುದೆಂದು ತೋರಿಸಿ ಕೊಟ್ಟ ಸಾಹಸಿ ಈತ

ಸ್ಥಳೀಯ ಹಾಗೂ ಸುತ್ತಮುತ್ತಲ ಉದಾರ ದಾನಿಗಳ ನೆರವು ಸಹ ಇವರ ಪ್ರಯತ್ನಕ್ಕೆ ಸಾಥ್‌ ನೀಡಿದ ಕಾರಣ ಇಂಗು ಗುಂಡಿ ನಿರ್ಮಾಣ ಯಶಸ್ವಿಯಾಗಿ ನಡೆಯುತ್ತಿದೆ.