ರಾಜ್ಯ ಸರ್ಕಾರ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ ‘ಮಲ್ಲಿಗೆ’ ಕಾರಿಡಾರ್‌ ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೆ, ‘ಸಂಪಿಗೆ’ ಮಾರ್ಗದ ಟೆಂಡರ್‌ ಪ್ರಕ್ರಿಯೆ ಕೂಡ ಚುರುಕಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಗರ ಸಾರಿಗೆ ತಜ್ಞರು 

ಮಯೂರ್‌ ಹೆಗಡೆ

ಬೆಂಗಳೂರು(ಅ.25): ಆಮೆಗತಿಯಲ್ಲಿ ಸಾಗಿರುವ ಉಪನಗರ ರೈಲ್ವೆ ಯೋಜನೆಯ ಕಾಮಗಾರಿ ಬಗ್ಗೆ ಸಾರಿಗೆ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಟೆಂಡರ್‌ ಕರೆಯುವ ಹಂತದಲ್ಲೇ ಇರುವ ಮೆಜೆಸ್ಟಿಕ್‌-ವಿಮಾನ ನಿಲ್ದಾಣ ಸಂಪರ್ಕಿಸುವ ‘ಸಂಪಿಗೆ’ ಕಾರಿಡಾರ್‌ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಒತ್ತಾಯಿಸಿದ್ದಾರೆ.

ಆರಂಭದಲ್ಲಿ ಉಪನಗರ ರೈಲ್ವೆ ಯೋಜನೆಗೆ ಅನುಮೋದನೆ ನೀಡುವ ಹಂತದಲ್ಲಿ ಕೇಂದ್ರ ಸರ್ಕಾರ ಉಳಿದ ಮೂರು ಕಾರಿಡಾರ್‌ಗಳಿಗಿಂತ ಈ ಮಾರ್ಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿತ್ತು. ಉಳಿದವನ್ನು ಪೂರ್ಣಗೊಳಿಸಲು ಆರು ವರ್ಷದ ಕಾಲಾವಧಿ ನಿಗದಿಸಿದ್ದರೆ, ನಗರ ಮಧ್ಯದಲ್ಲಿ ಹಾದುಹೋಗುವ ‘ಸಂಪಿಗೆ’ ಕಾರಿಡಾರನ್ನು ಮೂರು ವರ್ಷದಲ್ಲಿ ಮುಗಿಸಲು ತಿಳಿಸಿತ್ತು. ಅದಲ್ಲದೆ, 2021ರಲ್ಲಿ ರಾಜ್ಯದ ನಗರ ಭೂ ಸಾರಿಗೆ ನಿರ್ದೇಶನಾಲಯವೂ ಇದೇ ಕಾರಿಡಾರ್‌ಗೆ ಮೊದಲ ಪ್ರಾಶಸ್ತ್ಯ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ತನ್ನ ಅಧ್ಯಯನ ವರದಿ ಸಲ್ಲಿಸಿತ್ತು.

ತೆವಳುತ್ತ ಸಾಗುತ್ತಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ, ಕೆ-ರೈಡ್‌ಗೆ ಗುತ್ತಿಗೆ ಆಧಾರದ ಎಂಡಿ ನೇಮಕಾತಿಗೆ ಆಕ್ಷೇಪ

ಹೀಗಿದ್ದರೂ ರಾಜ್ಯ ಸರ್ಕಾರ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ ‘ಮಲ್ಲಿಗೆ’ ಕಾರಿಡಾರ್‌ ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೆ, ‘ಸಂಪಿಗೆ’ ಮಾರ್ಗದ ಟೆಂಡರ್‌ ಪ್ರಕ್ರಿಯೆ ಕೂಡ ಚುರುಕಾಗದಿರುವುದಕ್ಕೆ ನಗರ ಸಾರಿಗೆ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪಿಗೆ ಕಾರಿಡಾರ್‌ ಯಾಕೆ?

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಸೇರಿದಂತೆ ಇತರರು ನಿತ್ಯ 1.50 ಲಕ್ಷ ಜನರು ಹೋಗಿ ಬರುತ್ತಿದ್ದಾರೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಇದು 4-5 ಲಕ್ಷ ಮೀರಲಿದೆ ಎಂದು ವಿಮಾನ ನಿಲ್ದಾಣ ಉನ್ನತಾಧಿಕಾರಿಗಳು ಹೇಳಿದ್ದಾರೆ. ಇದು ರಸ್ತೆ ಮಾರ್ಗದ ಮೇಲೆ ವಿಪರೀತ ಸಂಚಾರ ದಟ್ಟಣೆಗೆ ಕಾರಣವಾಗಲಿದೆ.

ಈ ನಡುವೆ 2027ರ ವೇಳೆಗೆ ವಿಮಾನ ನಿಲ್ದಾಣ ಸಂಪರ್ಕಿಸುವ 58 ಕಿ.ಮೀ. ಮೆಟ್ರೋದ ನೀಲಿ ಮಾರ್ಗ ಮುಗಿದರೂ ಇದು ಶೇಕಡ 25ರಷ್ಟು ಮಾತ್ರ ನಗರ ಭಾಗಕ್ಕೆ ಉಪಯೋಗವಾಗುತ್ತದೆ. ಉಳಿದ ಭಾಗಕ್ಕೆ ಅನುಕೂಲವಾಗಲು ಉಪನಗರ ರೈಲ್ವೆ ಯೋಜನೆ ತಕ್ಷಣ ಜಾರಿ ಅಗತ್ಯವಿದೆ ಎಂದು ‘ಸಿಟಿಜನ್‌ ಫಾರ್‌ ಸಿಟಜನ್ಸ್‌’ ಸಂಸ್ಥೆ ಹೇಳುತ್ತಿದೆ.

ರಸ್ತೆ ಮಾರ್ಗದಲ್ಲಿ ಸೆಂಟ್ರಲ್ ಸಿಲ್ಕ್‌ ಬೋರ್ಡ್‌ನಿಂದ ವಿಮಾನ ನಿಲ್ದಾಣ ತಲುಪಲು ರಸ್ತೆ ಮಾರ್ಗ ಕನಿಷ್ಠ 45 ನಿಮಿಷದಿಂದ - ಗರಿಷ್ಠ 2 ಗಂಟೆ ಬೇಕಾಗುತ್ತದೆ. ಅದೇ ಮೆಟ್ರೋ ನೀಲಿ ಮಾರ್ಗದಲ್ಲಿ ಒಂದು ಮುಕ್ಕಾಲು ಗಂಟೆ ಕಾಲಾವಧಿ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಬೆಂಗಳೂರು ಮಧ್ಯ ಭಾಗದಿಂದ ಹೊರಡುವ ಸಂಪಿಗೆ ಮಾರ್ಗ ಜನರನ್ನು ಒಂದು ಗಂಟೆಯಲ್ಲಿ ಏರ್‌ಪೋರ್ಟ್‌ ತಲುಪಿಸಬಲ್ಲದು ಎಂದು ಸಾರಿಗೆ ತಜ್ಞರು ಹೇಳುತ್ತಿದ್ದಾರೆ.

ಇಷ್ಟೇ ಅಲ್ಲದೆ ನಗರದ ಮಧ್ಯ, ಪೂರ್ವ ಹಾಗೂ ಉತ್ತರ ಭಾಗವನ್ನು ನಗರದ ಸಬ್‌ ಅರ್ಬನ್‌ ರೈಲ್ವೆ ಪೂರ್ಣವಾಗಿ ವ್ಯಾಪಿಸುತ್ತಿದೆ. ದೇವನಹಳ್ಳಿವರೆಗೆ ವಿಸ್ತರಣೆ ಇರುವುದರಿಂದ ಆ ಭಾಗದ ಜನತೆಗೂ ಅನುಕೂಲವಾಗಲಿದೆ. ಜೊತೆಗೆ ವಿಮಾನ ನಿಲ್ದಾಣ ಸುತ್ತಮುತ್ತ ಎಲ್ಲ ರೀತಿ ಬೆಳೆಯಲಿರುವ ಕಾರಣ ಈ ಭಾಗದಲ್ಲಿ ಹೆಚ್ಚಿನ ಸಾರಿಗೆ ಸಂಪರ್ಕ ಏರ್ಪಡಬೇಕು. ಮೆಟ್ರೋಗೆ ಹೋಲಿಸಿದರೆ ಉಪನಗರದ ಈ ಕಾರಿಡಾರ್‌ ಬಹುಬೇಗ ಪೂರ್ಣಗೊಳಿಸುವ ಅವಕಾಶ ಇರುವುದರಿಂದ ಆದಷ್ಟು ಬೇಗ ಈ ಯೋಜನೆ ಅನುಷ್ಠಾನವಾಗಬೇಕು ಎಂದು ರಾಜ್‌ಕುಮಾರ್‌ ದುಗರ್‌ ಒತ್ತಾಯಿಸುತ್ತಾರೆ.

ತೊಡಕೇನು?

ಯೋಜನೆ ವಿಳಂಬಕ್ಕೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರು ಇಲ್ಲದಿರುವುದು, ಸರ್ಕಾರದ ನಿರಂತರ ಪ್ರಗತಿ ಪರಿಶೀಲನೆ ಆಗದಿರುವುದು ಒಂದು ಕಾರಣ. ಭೂಸ್ವಾಧಿನ ಹೊರತುಪಡಿಸಿ ಸಾಧ್ಯತೆ ಇರುವ ಲೊಟ್ಟೆಗೊಲ್ಲನಹಳ್ಳಿ, ಯಲಹಂಕ, ದೇವನಹಳ್ಳಿವರೆಗಿನ ಗ್ರೇಡ್‌ ಲೇವಲ್‌ ಕಾಮಗಾರಿಯನ್ನು ಪ್ರತ್ಯೇಕ ಪ್ಯಾಕೇಜ್‌ ಮೂಲಕ ಟೆಂಡರ್‌ ಕರೆದು ಕಾಮಗಾರಿ ನಡೆಸಬೇಕು. ಎತ್ತರಿಸಿದ ಮಾರ್ಗ ಲೊಟ್ಟೆಗೊಲ್ಲನಹಳ್ಳಿ-ಯಶವಂತಪುರ-ಮೆಜೆಸ್ಟಿಕ್‌ವರೆಗಿನ ಕಾಮಗಾರಿಗೆ ತೊಡಕಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ನಿವಾರಿಸಿಕೊಳ್ಳಬೇಕು ಎಂದು ಸಾರಿಗೆ ತಜ್ಞ ಸಂಜೀವ್‌ ವಿ.ದ್ಯಾಮಣ್ಣವರ್‌ ಹೇಳುತ್ತಾರೆ.

ಅತೀ ಮುಖ್ಯ ಸಂಪಿಗೆ ಕಾರಿಡಾರ್‌

ಸಬ್‌ ಅರ್ಬನ್‌ ರೈಲ್ವೆಯ ಮೊದಲ ಕಾರಿಡಾರ್‌ ಇದು. 41.4 ಕಿ.ಮೀ. ಮಾರ್ಗದ ಇದರ ಅಂದಾಜು ನಿರ್ಮಾಣ ವೆಚ್ಚ ₹5060 ಕೋಟಿಗಳಾಗಿದೆ. ಕೆಎಸ್‌ಆರ್‌ ಬೆಂಗಳೂರು, ಶ್ರೀರಾಮಪುರ, ಮಲ್ಲೇಶ್ವರ, ಯಶವಂತಪುರ, ಮತ್ಯಾಲನಗರ, ಲೊಟ್ಟೆಗೊಲ್ಲನಹಳ್ಳಿ, ಕೊಡಿಗೆಹಳ್ಳಿ, ಜ್ಯೂಡಿಶಿಯಲ್‌ ಲೇಔಟ್‌, ಯಲಹಂಕ, ನಿಟ್ಟೇ ಮೀನಾಕ್ಷಿ, ಬೆಟ್ಟಹಲಸೂರ, ದೊಡ್ಡಜಾಲ, ಏರ್‌ಪೋರ್ಟ್‌ ಟ್ರಂಪೆಟ್‌, ಏರ್‌ಪೋರ್ಟ್‌ ಟರ್ಮಿನಲ್‌, ಏರ್‌ಪೋರ್ಟ್‌ ಕೆಐಎಡಿಬಿ, ದೇವನಹಳ್ಳಿ ಸೇರಿ 8 ಎತ್ತರಿಸಿದ, 7 ಗ್ರೇಡ್‌ ಹಂತದ ನಿಲ್ದಾಣಗಳು ಇದರಲ್ಲಿ ನಿರ್ಮಾಣವಾಗಲಿವೆ.

ಬೆಂಗಳೂರು ಸಬರ್ಬನ್‌ ಎಂಡಿ ಸ್ಥಾನಕ್ಕೆ ಕೇಂದ್ರ-ರಾಜ್ಯ ಫೈಟ್‌

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವವರೆಗೆ ಕಾಯದೇ ಯಶವಂತಪುರ-ಲೊಟ್ಟೆಗೊಲ್ಲನಹಳ್ಳಿ ವರೆಗಿನ ಗ್ರೇಡ್‌ ಲೇವಲ್‌ ಕಾಮಗಾರಿಯನ್ನು ಮೊದಲ ಆದ್ಯತೆಯಲ್ಲಿ ಆರಂಭಿಸಬೇಕು ಎಂದು ಸಾರಿಗೆ ತಜ್ಞ ಸಂಜೀವ್‌ ವಿ.ದ್ಯಾಮಣ್ಣವರ್‌ ತಿಳಿಸಿದ್ದಾರೆ.

ಮೂರು ವರ್ಷಗಳಲ್ಲೇ ಮುಗಿಸಬೇಕಾದ ಯೋಜನೆ ಇದು. ರಾಜ್ಯ ಸರ್ಕಾರ ಪ್ರಥಮ ಆದ್ಯತೆಯಲ್ಲಿ ಯೋಜನೆ ಕೈಗೆತ್ತಿಕೊಂಡು ಯುದ್ಧೋಪಾದಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಸಿಟಿಜನ್‌ ಫಾರ್‌ ಸಿಟಜನ್ಸ್‌ ರಾಜ್‌ಕುಮಾರ್‌ ದುಗರ್‌ ಹೇಳಿದ್ದಾರೆ.