ತೆವಳುತ್ತ ಸಾಗುತ್ತಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ, ಕೆ-ರೈಡ್‌ಗೆ ಗುತ್ತಿಗೆ ಆಧಾರದ ಎಂಡಿ ನೇಮಕಾತಿಗೆ ಆಕ್ಷೇಪ
ಬಿಎಸ್‌ಆರ್‌ಪಿ ಅನುಷ್ಠಾನಗೊಳಿಸುತ್ತಿರುವ ಜಂಟಿ ಸಹಭಾಗಿತ್ವದ ಕೆ-ರೈಡ್ ನಿಯೋಜನೆ. ಗುತ್ತಿಗೆ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕರ (ಎಂ.ಡಿ) ನೇಮಕಕ್ಕೆ ಕರೆದಿರುವ ನೋಟಿಫಿಕೇಷನ್‌ಗೆ ರೈಲ್ವೆ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಬೆಂಗಳೂರು (ಅ.8): ತೆವಳುತ್ತ ಸಾಗುತ್ತಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುತ್ತಿರುವ ಜಂಟಿ ಸಹಭಾಗಿತ್ವದ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (ಕೆ-ರೈಡ್) ನಿಯೋಜನೆ/ ಗುತ್ತಿಗೆ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕರ (ಎಂ.ಡಿ) ನೇಮಕಕ್ಕೆ ಕರೆದಿರುವ ನೋಟಿಫಿಕೇಷನ್‌ಗೆ ರೈಲ್ವೆ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಬಿಎಸ್‌ಆರ್‌ಪಿ ಹಾಗೂ ರೈಲ್ವೆ ಹಳಿಗಳ ದ್ವಿಪಥೀಕರಣ ಯೋಜನೆಗಳನ್ನು ಜಂಟಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಕೆ-ರೈಡ್ ಸ್ಥಾಪಿಸಲಾಗಿದೆ. ಆದರೆ, ಸುಮಾರು ಒಂದುವರೆ ವರ್ಷದಿಂದ ಕೆ-ರೈಡ್‌ಗೆ ಪೂರ್ಣ ಪ್ರಮಾಣದ ಎಂ.ಡಿ ಇಲ್ಲ. ಕಳೆದ ಒಂದು ವರ್ಷದಿಂದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೇ ಎಂ.ಡಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ಯಂತ ತ್ವರಿತಗತಿಯಲ್ಲಿ ಮತ್ತು ಆದ್ಯತೆಯ ಮೇಲೆ ಆಗಬೇಕಿರುವ ಬೃಹತ್ ರೈಲ್ವೆ ಯೋಜನೆಗೆ ಪೂರ್ಣ ಪ್ರಮಾಣದ ಎಂ.ಡಿ ಮತ್ತು ಸಿಬ್ಬಂದಿ ಇಲ್ಲದಿರುವುದು ಯೋಜನೆ ವಿಳಂಬಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಯೋಜನೆಗೆ ವೇಗ ನೀಡಲು ಕಳೆದ ತಿಂಗಳು ಕೆ-ರೈಡ್ ಎಂ.ಡಿ ಸೇರಿದಂತೆ ಒಟ್ಟು 12 ಹುದ್ದೆಗಳಿಗೆ ನೋಟಿಫಿಕೇಷನ್ ಹೊರಡಿಸಿತ್ತು. ಆದರೆ, ನೋಟಿಫಿಕೇಷನ್‌ಗೆ ಆಕ್ಷೇಪ ವ್ಯಕ್ತಪಡಿಸಿ ಅ.5ರಂದು ಕೆ-ರೈಡ್‌ಗೆ ರೈಲ್ವೆ ಮಂಡಳಿಯಿಂದ ಪತ್ರ ಬರೆಯಲಾಗಿದ್ದು, ''''ಜಂಟಿ ಸಹಭಾಗಿತ್ವದ ಯೋಜನೆಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿಗೆ ರೈಲ್ವೆ ಮಂಡಳಿ ನಿಗದಿಪಡಿಸಿರುವ ಅರ್ಹತಾ ನಿಯಮಗಳ ಅನುಸಾರ ಕೆ-ರೈಡ್ ನೋಟಿಫಿಕೇಷನ್ ಇಲ್ಲದ ಕಾರಣ ವಾಪಸ್ ಪಡೆಯಬೇಕು'''' ಎಂದು ಸಲಹೆ ನೀಡಲಾಗಿದೆ.
ಕೆ-ರೈಡ್‌ಗೆ ಪೂರ್ಣ ಪ್ರಮಾಣದ ಎಂ.ಡಿ ಹಾಗೂ ಇನ್ನಿತರ ಅಧಿಕಾರಿಗಳ ನೇಮಕಾತಿಯಿಂದ ಉಪ ನಗರ ರೈಲು ಯೋಜನೆ ವೇಗ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.