ಮಂಗ​ಳೂ​ರು/ಉಳ್ಳಾ​ಲ(ಡಿ.31): ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯ್ತಿಯಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್‌ ಬೆಂಬಲಿಗರೇ ಜಯಿಸುತ್ತಿದ್ದರು. ಆದರೆ ಈಗ ಮೊದಲ ಬಾರಿಗೆ ಬಿಜೆಪಿ ಬೆಂಬಲಿಗ ಮಹಿಳಾ ಅಭ್ಯರ್ಥಿಯೊಬ್ಬರು ಗೆದ್ದಿದ್ದಾರೆ. ಗೆದ್ದಾಕೆ ಅಲ್ಲಿಯೇ ಈ ಹಿಂದೆ ಡೇರೆಯಲ್ಲಿ ಬಾಲ್ಯ ಜೀವನ ನಡೆಸಿ, ಬಳಿಕ ಮೆಡಿಕಲ್‌ ಬಿಎಸ್‌ಸಿ ಪೂರೈಸಿದ ಪದವೀಧರೆ ಮಮತಾ.

ಮಮತಾ ಮೂಲತಃ ಉಡುಪಿಯವರು. ತಂದೆ ಕೃಷ್ಣಪ್ಪ, ತಾಯಿ ಪ್ರೇಮ. ವಲಸೆ ಕಾರ್ಮಿಕರಾಗಿ ಬೀದಿ ಬೀದಿ ಸುತ್ತುತ್ತಿದ್ದ ಈ ಕುಟುಂಬ ಡೇರೆ ಹಾಕಿ ಜೀವನ ಸಾಗಿಸುತ್ತಿತ್ತು. 1995ರಲ್ಲಿ ತಂದೆ ಕೃಷ್ಣಪ್ಪ ಏಕಾಏಕಿ ನಾಪತ್ತೆಯಾದ ಬಳಿಕ ತಾಯಿ ಪ್ರೇಮ ಹಾಗೂ ಮಕ್ಕಳಾದ ಶಿವ, ಭೋಜ, ಮಮತಾ ಇವರು ಪಾವೂರು, ಇನೋಳಿ ಮುಂತಾದ ಕಡೆಗಳಲ್ಲಿ ಆಗಮಿಸಿ ರಸ್ತೆ ಬದಿ, ಶೌಚ ಕೊಠಡಿ, ದನದ ಹಟ್ಟಿಯಲ್ಲಿ ವಾಸವಾಗಿದ್ದರು. ಶಿವ ಕ್ಯಾನ್ಸರ್‌ಗೆ ತುತ್ತಾಗಿ ಅನಾರೋಗ್ಯಪೀಡಿತನಾದರೆ, ಭೋಜ ಮತ್ತು ಮಮತಾ ಇವರನ್ನು ಸ್ಥಳೀ ಶಿಕ್ಷಕ ಮಧು ಮೇಷ್ಟು್ರ ತನ್ನದೇ ಮುತುವರ್ಜಿಯಲ್ಲಿ ಮಲಾರ್‌ಪದವು ಶಾಲೆಗೆ ಸೇರಿಸಿದ್ದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತಿ-ಪತ್ನಿಗೆ ಜಯ

ಪತಿ ನಾಪತ್ತೆಯ ದುಃಖದ ನಡುವೆ ಪ್ರೇಮ ಮಕ್ಕಳ ಜೊತೆ ಡೇರೆಯಲ್ಲೇ ವಾಸವಿದ್ದು, ಸ್ಥಳೀಯವಾಗಿ ಕೋರೆ ಹಾಗೂ ಮನೆ ಕೆಲಸಕ್ಕೆ ಹೋಗುತ್ತಿದ್ದರು. 2006ರಿಂದ ಮಮತಾಳನ್ನು ಮಚ್ಚಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಹೈಸ್ಕೂಲ್‌, ದೇರಳಕಟ್ಟೆಮೊರಾರ್ಜಿ ದೇಸಾಯಿ ಕಾಲೇಜಿನಲ್ಲಿ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು.

ನಂತರ ಮಂಗಳೂರಿನ ಕೊಲಾಸೋ ವಿದ್ಯಾಸಂಸ್ಥೆಯಲ್ಲಿ ಲ್ಯಾಬ್‌ ಟೆಕ್ನಿಶಿಯನ್‌ ಡಿಪ್ಲೊಮಾ ಪೂರೈಸಿದರು. ಬಳಿಕ ಉನ್ನತ ವ್ಯಾಸಂಗದ ಆಸೆಯಲ್ಲಿ ದಾನಿಗಳ ನೆರವಿನಿಂದ ಬೆಂಗಳೂರಿಗೆ ತೆರಳಿ ಅಲ್ಲಿನ ಆನೆಪಾಳ್ಯ ಕೊಳಗೇರಿಯಲ್ಲಿ ವಾಸಿಸುತ್ತಲೇ 2020ರಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಬಿಎಸ್‌ಸಿ ಪೂರೈಸಿದ್ದರು.

ನನ್ನ ಜೀವನ ನನಗೆ ಪಾಠ ಕಲಿಸಿದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಸಂಪತ್ತು ಸರಿಯಾಗಿ ಹಂಚಿಕೆಯಾಗದಿರುವುದರಿಂದಲೇ ಹಳ್ಳಿಯ ಜನತೆ ಬಡತನದಿಂದ ಕಳೆಯುವಂತಾಗಿದೆ. ಗ್ರಾಮೀಣ ಜನತೆಯ ಏಳ್ಗೆಗೆ ಹಳ್ಳಿಗೆ ಮರಳಿದೆ. ಈಗ ರಾಜಕೀಯ ಪ್ರೋತ್ಸಾಹ ಸಿಕ್ಕಿದೆ ಎಂದಿದ್ದಾರೆ ಪಾವೂರು ಗ್ರಾ.ಪಂ. ಸದಸ್ಯೆ, ಮಮತಾ.