ಬೆಂಗಳೂರು(ಫೆ.10): ಬಿಬಿಎಂಪಿಯ ಮಾಸಿಕ ಹಾಗೂ ವಿಷಯಾಧಾರಿತ ಸಭೆಗಳಿಗೆ ಉಪಹಾರ ಮತ್ತು ಊಟವನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ‘ಖಾಸಗಿ ಹೋಟೆಲ್‌’ನಿಂದ ಪೂರೈಕೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ಇಂದಿರಾ ಕ್ಯಾಂಟೀನ್‌ ಆಹಾರದ ಗುಣಮಟ್ಟದ ಬಗ್ಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಪಾಲಿಕೆಯ ಕೌನ್ಸಿಲ್‌ ಸಭೆಗೂ ಇಂದಿರಾ ಕ್ಯಾಂಟೀನ್‌ಗಳಿಗೆ ಸರಬರಾಜು ಮಾಡುವ ಆಹಾರವನ್ನೇ ಪೂರೈಕೆ ಮಾಡುವಂತೆ ಸೂಚಿಸಿದ್ದರು. ಇದರಿಂದ ಪಾಲಿಕೆಗೆ ಕೋಟ್ಯಾಂತರ ರು. ಉಳಿತಾಯವಾಗುತ್ತಿತ್ತು. ಆದರೆ, ಇದೀಗ ಮತ್ತೆ ಖಾಸಗಿ ಹೋಟೆಲ್‌ ನಿಂದ ಊಟದ ವ್ಯವಸ್ಥೆ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊಸದಾಗಿ ಖಾಸಗಿ ಹೋಟಲ್‌ನಿಂದ ಬೆಳಗ್ಗಿನ ಉಪಹಾರಕ್ಕೆ ಶಾವಿಗೆ ಉಪ್ಪಿಟ್ಟು, ಸಸ್ಯಹಾರ ಕಟ್ಲೇಟ್‌, ರವಾ ಇಡ್ಲಿ, ಸಾಗು ಮತ್ತು ತೆಂಗಿನಕಾಯಿ ಚಟ್ನಿ, ಮಸಾಲ ದೋಸೆ, ಆಲೂಪಲ್ಯ, ದಹಿ, ಅಮುಲ್‌ ಬಟರ್‌, ಉದ್ದಿನ ವಡೆ, ಚಟ್ನಿ, ಸಾಂಬಾರ ಅಥವಾ ಚಟ್ನಿ. ಮಧ್ಯಾಹ್ನದ ಊಟಕ್ಕೆ ಒಬ್ಬಟ್ಟು ಮತ್ತು ತುಪ್ಪ, ಎರಡು ರೀತಿಯ ಪಲ್ಯ, ಒಂದು ಸ್ವೀಟ್‌, ಪೂರಿ ಸಾಗು, ಚಪಾತಿ ಕರಿ, ಅನ್ನ ಮತ್ತು ಸಾಂಬಾರು, ರಸಂ, ಮೊಸರನ್ನ, ಮಜ್ಜಿಗೆ, ಹಪ್ಪಳ, ಉಪ್ಪಿನ ಕಾಯಿ, ಬಾಳೆಹಣ್ಣು. ಸಂಜೆ ಸ್ಯಾಕ್ಸ್‌ಗೆ ಕಾಫಿ, ಟೀ, ಬಾದಾಮಿ ಹಾಲು, ಬ್ರೆಡ್‌, ಪಕೋಡಾ ಅಥವಾ ಬೋಂಡಾ ಸೂಪ್‌ ಅಥವಾ ಮಸಾಲ ವಡಾ ಚಟ್ನಿ ಪೂರೈಕೆಗೆ ಮೆನು ಸಿದ್ಧಪಡಿಸಲಾಗಿದೆ.

80 ಸಾವಿರದಿಂದ 3 ಲಕ್ಷಕ್ಕೆ ಏರಿಕೆ?:

ಕೌನ್ಸಿಲ್‌ ಸಭೆಯೊಂದಕ್ಕೆ ಇಂದಿರಾ ಕ್ಯಾಂಟೀನ್‌ನಿಂದ ಆಹಾರ ಪೂರೈಕೆಯಾದರೆ ಅಂದಾಜು 80 ಸಾವಿರ ವೆಚ್ಚವಾಗುತ್ತಿತ್ತು. ಖಾಸಗಿ ಹೋಟೆಲ್‌ನಿಂದ ಆಹಾರ ಪೂರೈಕೆಯಾದಾಗ ಗರಿಷ್ಠ 3 ಲಕ್ಷ ವೆಚ್ಚವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿದ ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು, ಕೌನ್ಸಿಲ್‌ ಸಭೆಗೆ ಆಹಾರ ಪೂರೈಕೆ ವಿಷಯ ಅಂತಿಮವಾಗಿಲ್ಲ. ಸದ್ಯಕ್ಕೆ ಪಾಲಿಕೆ ಹಣವನ್ನು ಊಟಕ್ಕೆ ಬಳಸುತ್ತಿಲ್ಲ, ಪ್ರತಿ ಸಭೆಗೂ ಒಬ್ಬರು ನಾಯಕರು ತಮ್ಮ ಖರ್ಚಿಲ್ಲಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೌನ್ಸಿಲ್‌ ಊಟಕ್ಕೆ ಟೆಂಡರ್‌ ಕರೆಯುವುದಿಲ್ಲ ಎಂದು ತಿಳಿಸಿದ್ದಾರೆ.