ಶಿವಮೊಗ್ಗ(ಮೇ.16): ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೆಗ್ಗಾನ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 27 ರಂದು ಹೃದ್ರೋಗ ವಿಭಾಗದ ಹೊರ ರೋಗಿ ವಿಭಾಗ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು. ಶುಕ್ರವಾರ ಮೆಡಿಕಲ್‌ ಕಾಲೇಜಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಒಪಿಡಿಯಲ್ಲಿ ಪ್ರತಿ ದಿನ 80 ರಿಂದ 100 ಮಂದಿ ಹೃದಯ ಸಂಬಂಧಿ ಖಾಯಿಲೆ ಇರುವ ರೋಗಿಗಳಿಗೆ ಸೂಕ್ತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಹೃದ್ರೋಗ ತಜ್ಞ ಡಾ. ಎಸ್‌. ಪರಮೇಶ್ವರ ಮತ್ತು ಡಾ. ಮಹೇಶಮೂರ್ತಿ ಇಲ್ಲಿ ಕಾರ್ಯನಿರ್ವಹಿಸುವರು ಎಂದು ಹೇಳಿದರು.

ಕಾರ್ಡಿಯಾಕ್‌ ಕ್ಯಾಥ್‌ಲ್ಯಾಬ್‌ ಆರಂಭಿಸಲು ಈಗಾಗಲೇ ಟೆಂಡರ್‌ ಕರೆದು, ಅಂತಿಮಗೊಳಿಸಲಾಗಿದೆ. ತಕ್ಷಣ ಸದರಿ ಕಂಪನಿಗೆ ಕಾರ್ಯಾದೇಶ ನೀಡಿ ಕ್ಯಾಥ್‌ಲ್ಯಾಬ್‌ ಪೂರ್ಣಗೊಳಿಸಲು ಸೂಚಿಸಲು ನಿರ್ಧರಿಸಲಾಗಿದೆ. ಆ ಬಳಿಕ ಹೃದಯಕ್ಕೆ ಸಂಬಂಧಿಸಿದ ಹೆಚ್ಚಿನ ಚಿಕಿತ್ಸೆಗಳಾದ ಆಂಜಿಯೋಗ್ರಾಮ್‌, ಆಂಜಿಯೋಪ್ಲಾಸ್ಟಿ, ಹೃದಯನಾಳಕ್ಕೆ ಸ್ಟಂಟ್‌ ಅಳವಡಿಕೆ, ಹೃದಯ ಕವಾಟಗಳ ಚಿಕಿತ್ಸೆ ಮತ್ತು ಹುಟ್ಟಿದಾಗಿನಿಂದ ಬಂದಂತಹ ಹೃದಯ ಖಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು.

ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನಿ ಭದ್ರ ಅಡಿಪಾಯ; ಸಂಸದ ಬಿ.ವೈ.ರಾಘವೇಂದ್ರ

ಇದೇ ರೀತಿ ನರರೋಗ ವಿಭಾಗದಲ್ಲಿ ನರರೋಗ ತಜ್ಞ ಡಾ. ಕುಮಾರ್‌ ಅವರು ಸ್ಟ್ರೋಕ್‌, ಎಪಿಲೆಪ್ಸಿ, ನ್ಯೂರೋಪಥಿಗೆ ಸೂಕ್ತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡುವರು. ನರರೋಗಿಗಳಿಗೆ ಬೇಕಾದ ಇಎನ್‌ಎಂಜಿ, ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌ ಮತ್ತು ರಕ್ತ ಪರೀಕ್ಷೆಗಳು ಇಲ್ಲಿಯೇ ದೊರೆಯಲಿವೆ ಎಂದು ಸಚಿವರು ಹೇಳಿದರು.

ಅತಿಕ್ರಮ ತೆರವು:

ಮೆಗ್ಗಾನ್‌ ಆಸ್ತಿಪಾಸ್ತಿ ಅತಿಕ್ರಮಣ ಮಾಡಿ ನಿರ್ಮಿಸಿರುವ ಎಲ್ಲಾ ನಿರ್ಮಾಣಗಳನ್ನು ತೆರವುಗೊಳಿಸಬೇಕು. ಈ ಮೊದಲೇ ನಿರ್ಣಯಿಸಿರುವಂತೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸಚಿವರು ಸಭೆಯಲ್ಲಿ ಸೂಚನೆ ನೀಡಿದರು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಅಶೋಕ ನಾಯ್ಕ, ಪ್ರಸನ್ನ ಕುಮಾರ್‌, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಮೆಗ್ಗಾನ್‌ ಆಸ್ಪತ್ರೆ ನಿರ್ದೇಶಕ ಡಾ.ಗುರುಪಾದಪ್ಪ, ಮೆಗ್ಗಾನ್‌ ಆಡಳಿತ ಸಮಿತಿ ಸದಸ್ಯರಾದ ದಿನಾಕರ ಶೆಟ್ಟಿ, ಡಾ.ಗೌತಮ್‌, ಡಾ.ವಾಣಿ ಕೋರಿ ಇತರರು ಉಪಸ್ಥಿತರಿದ್ದರು.