ವಿಜಯಪುರ (ನ.24):  ಲಿಂಗಾಯತರ ಭವಿಷ್ಯ ಹಾಳು ಮಾಡಿದವರು ಯಾರು ಎಂಬುವುದರ ಬಗ್ಗೆ ಭವಿಷ್ಯದಲ್ಲಿ ಬಹಿರಂಗ ಮಾಡುವೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕ ಹಾಗೂ ಶಾಸಕ ಎಂ.ಬಿ. ಪಾಟೀಲ ಗುಡುಗಿದರು.

ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಿಂಗಾಯತ ಸರ್ವತೋಮುಖ ಪ್ರಗತಿಯ ಏಕೈಕ ಉದ್ದೇಶದಿಂದ ಅಲ್ಪಸಂಖ್ಯಾತ ಮಾನ್ಯತೆ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೆ. ಆದರೆ ಆಗ ನನಗೆ ಧರ್ಮವಿರೋಧಿ, ಧರ್ಮ ಒಡೆಯುವವ ಎಂಬಿತ್ಯಾದಿ ಅಪಪ್ರಚಾರ ಮಾಡಿದರು. ಈಗ ಕೇವಲ ನಿಗಮ ರಚನೆ ಮಾಡಿ ಏನು ಸಾಧಿಸಲು ಹೊರಟಿದ್ದಾರೆ. ಆನೆ ಬಿಟ್ಟು ಇಲಿ ಹಿಡಿಯಲು ಹೊರಟಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

1.5 ಕೋಟಿಯಷ್ಟುಜನಸಂಖ್ಯೆ ಇರುವ ಲಿಂಗಾಯತ ಸಮುದಾಯದ ಸರ್ವತೋಮುಖ ಪ್ರಗತಿಗಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ದೊರಕಿಸಿ, ಸಮುದಾಯದ ಬಡ ಜನರಿಗೆ ಸೌಲಭ್ಯ ಒದಗಿಸುವುದು, ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗಾಗಿ ಹೋರಾಟ ನಡೆಸುತ್ತಿದ್ದೆ ಎಂದರು.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಾಂಗ್ರೆಸ್‌ನಿಂದ ತೇಲಿ ಬಂತು ಅಚ್ಚರಿ ಹೆಸರು

ನಿಗಮ ಸ್ಥಾಪನೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ, ಸುಮಾರು . 5 ಸಾವಿರ ಕೋಟಿಗಳಷ್ಟುಅನುದಾನ ಮೀಸಲಿಟ್ಟರೆ ಮಾತ್ರ ಏನಾದರೂ ಸಮಾಜಕ್ಕೆ ಅನುಕೂಲವಾಗಲಿದೆ ಎಂದರು.

ಮರಾಠ ಪ್ರಾಧಿಕಾರ ರಚನೆಯಿಂದ ಆ ಸಮಾಜ ಅಭಿವೃದ್ಧಿ ಆಗಲಿದೆ ಎನ್ನುವುದು ಸುಳ್ಳು. ಅದೇ ರೀತಿ ಅಭಿವೃದ್ಧಿ ನಿಗಮದಿಂದ ಉಪಯೋಗ ಇಲ್ಲ, ಲಿಂಗಾಯತ ಸಮಾಜಕ್ಕೆ ಏನೂ ಲಾಭವಿಲ್ಲ ಎಂದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ . 5 ಸಾವಿರ ಕೋಟಿ ಕೊಟ್ಟರೆ ಅರ್ಥಪೂರ್ಣ. ನಿಗಮ ಮಾಡಿ ಅತ್ಯಲ್ಪ ಹಣ ನೀಡಿದರೆ ಏನೂ ಪ್ರಯೋಜನವಿಲ್ಲ. ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ವಿರೋಧಿಸಿದವರು ಸೊಲ್ಲಾಪುರದಲ್ಲಿ ಮೀಸಲಾತಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.