ಎರಡು ಬಾರಿ ನನಗೆ ಅವಕಾಶ ಕೊಟ್ಟಿದ್ದರೂ ನಾನು ನೀರಾವರಿ ಖಾತೆಯಲ್ಲೇ ಇರಬೇಕು ಎಂದುಕೊಂಡಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ಕೊಟ್ಟಿದೆ‌ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ (ಮೇ.03): ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದ್ದು, ಕಾರಣಾಂತರಗಳಿಂದ ಆಗ ನಾನು ನೀರಾವರಿ ಮಂತ್ರಿ ಆಗಿದ್ದೆ‌. ಎರಡು ಬಾರಿ ನನಗೆ ಅವಕಾಶ ಕೊಟ್ಟಿದ್ದರೂ ನಾನು ನೀರಾವರಿ ಖಾತೆಯಲ್ಲೇ ಇರಬೇಕು ಎಂದುಕೊಂಡಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ಕೊಟ್ಟಿದೆ‌ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.

Add Asianetnews Kannada as a Preferred SourcegooglePreferred

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು ಅಂದರೆ ಅದನ್ನು ಎಲ್ಲಿ ಹೇಳಬೇಕು ಅಲ್ಲಿ ಹೋಗಿ ಹೇಳುವೆ. ಮಾಧ್ಯಮದ ಮುಂದೆ ಹೇಳುವುದಕ್ಕಿಂತ, ನಮ್ಮ ಹೈಕಮಾಂಡ್ ಮುಂದೆ ಹೇಳಬೇಕು, ಅಲ್ಲಿ ಹೇಳುವೆ. ಕಾಂಗ್ರೆಸ್ ಪಕ್ಷದ ಹಿರಿಯರು ಚರ್ಚೆ ಮಾಡುವಾಗ ನಮ್ಮ ಭಾವನೆ ವ್ಯಕ್ತಪಡಿಸುವೆ ಎಂದರು. ರಾಜ್ಯದಲಿ ಸಿಎಂ ಬದಲಾವಣೆ ಚರ್ಚೆ ಕುರಿತು ಸಿದ್ದರಾಮಯ್ಯನವರು ಮೌನ ವಹಿಸಿರುವ ವಿಚಾರದ ಬಗ್ಗೆ ಮಾತನಾಡಿ, ಅವರು ಒಂದೇ ಮಾತು ಹೇಳಿದ್ದಾರೆ, ಹೈ ಕಮಾಂಡ್ ನಿರ್ಣಯಕ್ಕೆ ಬದ್ದ ಎಂದು. ಡಿ.ಕೆ.ಶಿವಕುಮಾರ ಹೇಳಿದ್ದಾರೆ, ನಾನು ಕೂಡ ಹೇಳಿರುವೆ.

ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ‌. ಮೀಟಿಂಗ್ ಇನ್ನೂ ಫಿಕ್ಸ್ ಮಾಡಿಲ್ಲ ಎಂದಿದ್ದಾರೆ. ಮೀಟಿಂಗ್‌ನಲ್ಲಿ ಈ ವಿಚಾರವಾಗಿ ಚರ್ಚೆ ಆಗುತ್ತದೆ. ಸಿಎಂ, ಡಿಸಿಎಂ, ನಾವು ಕೂಡ ಹೇಳುವುದು ಅದನ್ನೇ. ಹೈಕಮಾಂಡ್ ನಿರ್ಣಯಕ್ಕೆ ಎಲ್ಲರೂ ಬದ್ದ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ನನ್ನ ನೇತೃತ್ವದಲ್ಲಿ ಶಾಸಕರು ಗೆದ್ದಿದ್ದಾರೆ ಎಂದು ಡಿ.ಕೆ.ಶಿವಕುಮಾರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರು ಸುಪ್ರೀಂ. ಸರ್ಕಾರಕ್ಕೆ ಸಿಎಂ ಸುಪ್ರೀಂ ಆಗಿರುತ್ತಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರಾಗಿ ನನ್ನ ನೇತೃತ್ವ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ ಅವರು, ಅನೇಕ ಮುಖಂಡರು, ಬೂತ್‌ಮಟ್ಟದ ಕಾರ್ಯಕರ್ತರು ಎಲ್ಲ ಕೂಡಿ ದುಡಿದಾಗ ಜನ ಆಶೀರ್ವಾದ ಮಾಡಿದ್ದಾರೆ. ಅವರು ಬೇರೆ ಅರ್ಥದಿಂದ ಹೇಳಿದ್ದಾರೆ. ಆದರೆ, ಆ ಅರ್ಥಕ್ಕೆ ಅನರ್ಥ ಮಾಡುವುದೇ ನಿಮ್ಮ ಕೆಲಸ ಎಂದು ಕಿಡಿಕಾರಿದರು. ಬಿ.ಕೆ.ಹರಿಪ್ರಸಾದ, ಜಮೀರ ಅಹ್ಮದ ಹಾಗೂ ಜಿ.ಪರಮೇಶ್ವರ ಅವರು ಸಭೆ ನಡೆಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅವರು ಪಕ್ಷದ ಮುಖಂಡರೊಟ್ಟಿಗೆ ಸಭೆ ನಡೆಸಿದರೆ ತಪ್ಪೇನು? ಅವರೇನು ಯಡಿಯೂರಪ್ಪನವರೊಟ್ಟಿಗೆ ಮೀಟಿಂಗ್ ಮಾಡಿದ್ದಾರಾ? ಅವರು ಪಕ್ಷದ ಮುಖಂಡರನ್ನು ಭೇಟಿಯಾದರೆ ತಪ್ಪೇನು ಎಂದು ಪ್ರಶ್ನಿಸಿದರು.

ಯಾವುದು ಉಳಿದಿದೆ ಹೇಳಿ?

ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ ದುಬಾರಿ ವಿಚಾರವಾಗಿ ಮಾತನಾಡಿ, ಚುನಾವಣೆ ಮುಗಿದ ಬಳಿಕ ಅಚ್ಚೇ ದಿನ ಬರುತ್ತೆ ಎಂಬುದು ನಮಗೆ ಗೊತ್ತಿತ್ತು. ಡಾಲರ್‌ ರೇಟ್, ಗ್ಯಾಸ್ ಸಿಲಿಂಡರ್‌ ರೇಟ್, ಪೆಟ್ರೋಲ್ ರೇಟ್ ಯಾವುದು ಉಳಿದಿದೆ ಹೇಳಿ? ಹಿಂದೆ ಯುಪಿಎ ಸರ್ಕಾರ ಇದ್ದಾಗ, ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ ರೇಟ್ ₹65 ಇತ್ತು. ಆಗ ಇವರು ಟೀಕೆ ಮಾಡುತ್ತಿದ್ದರು. ಈಗ ನೋಡಿದರೆ ₹105 ಆಗಿದೆ. ಈಗ ಡಿಸೇಲ್ ₹98 ಆಗಿದೆ, ಅಡುಗೆ ಎಣ್ಣೆ ಈಗ ₹150 ಆಗಿದೆ. ಈ ಕಡೆ ಟ್ರಂಪ್‌ನೂ ಇಲ್ಲ, ಇರಾನ್‌ನೂ ಇಲ್ಲ, ಇಸ್ರೇಲ್‌ಗೆ ಹೋದರು ಯುದ್ಧ ಪ್ರಾರಂಭವಾಯಿತು ಎಂದರು.

ಇಂದಿರಾಗಾಂಧಿ, ವಾಜಪೇಯಿ, ಜವಾಹರಲಾಲ್ ನೆಹರು ಎಲ್ಲರೂ ಇದ್ದಾಗಿನ ವಿದೇಶಾಂಗ ನೀತಿ ಈಗ ನರೇಂದ್ರ ಮೋದಿ ಅವರ ನೀತಿಯಾಗಿದೆ. ನಾವು ಯಾವಾಗಲೂ ಪ್ಯಾಲಿಸ್ತಾನ ಜೊತೆಗಿದ್ದೆವು. ವಿದೇಶಾಂಗ ನೀತಿಯನ್ನು ಮೋದಿ ನೀತಿಯನ್ನಾಗಿ ಮಾಡಿದರು. ಚೀನಾ ಪಾಕಿಸ್ತಾನ ಅತಿಕ್ರಮಣ ಮಾಡಿದರೆ ನಮಗೆ ಹೇಗೆ ಸಂಕಟ ಆಗುತ್ತೆ? ಪ್ಯಾಲಿಸ್ತಾನಿಗೆ ಇಸ್ರೇಲ್‌ನವರು ಬಂದು ಅವರನ್ನೇ ದಬ್ಬಿದರು. ಇರಾನ್ ಯಾವಾಗಲೂ ನಮ್ಮೊಟ್ಟಿಗೆ ಉತ್ತಮ ಸಂಬಂಧ ಹೊಂದಿತ್ತು. ಮೋದಿ ಇಸ್ರೇಲ್‌ಗೆ ಹೋಗಿ ಫಾದರ್‌ ಲ್ಯಾಂಡ್, ಮದರ್‌ ಲ್ಯಾಂಡ್ ಮಾಡಿ ಬಂದರು. ಅದನ್ನು ಇರಾನ್‌ನವರು ಹಿಡಿಯಲಿಲ್ಲ ಎಂದು ದೂರಿದರು.