ಬಸವ ಸಾಗರ ಜಲಾಶಯದಿಂದ ತೆಲಂಗಾಣಕ್ಕೆ 2 ಟಿಎಂಸಿ ಕುಡಿಯುವ ನೀರು ಬಿಡುಗಡೆ ಮಾಡಿದ್ದನ್ನು ಸಚಿವ ಎಂ.ಬಿ. ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ಮಾನವೀಯತೆ ಆಧಾರದ ಮೇಲೆ ನೀರು ನೀಡಲಾಗಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯಪುರ (ಅ.22): ಯಾದಗಿರಿ ಜಿಲ್ಲೆಯ ಬಸವ ಸಾಗರ (ನಾರಾಯಣಪುರ) ಜಲಾಶಯದಿಂದ ನೆರೆಯ ತೆಲಂಗಾಣ ರಾಜ್ಯಕ್ಕೆ 2 ಟಿಎಂಸಿ ನೀರು ಬಿಡುಗಡೆ ಮಾಡಿರುವುದನ್ನು ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಅವರು ವಿಪಕ್ಷಗಳು ಹಾಗೂ ರೈತ ಸಂಘಟನೆಗಳಿಗೆ ಕಿವಿಮಾತು ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತೆಲಂಗಾಣಕ್ಕೆ ನೀರು ಹರಿಸುತ್ತಿರುವುದಕ್ಕೆ ವ್ಯಕ್ತವಾಗಿರುವ ವಿರೋಧಕ್ಕೆ ಸ್ಪಷ್ಟನೆ ನೀಡಿದರು.

ಮಾನವೀಯತೆಯ ಆಧಾರದ ಮೇಲೆ ನೀರು ಬಿಡಲಾಗಿದೆ:

ತೆಲಂಗಾಣಕ್ಕೆ ನೀರು ಬಿಟ್ಟಿರುವುದರ ಕುರಿತು ಮಾತನಾಡಿದ ಎಂ.ಬಿ. ಪಾಟೀಲ್, 'ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾದಾಗ ನಾವು ಕೂಡ ಹಲವು ಬಾರಿ ನೆರೆಯ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ನೀರು ಪಡೆದುಕೊಂಡಿದ್ದೇವೆ. ಅದೇ ಮಾದರಿಯಲ್ಲಿ ಇಂದು ತೆಲಂಗಾಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೇವಲ ಮಾನವೀಯತೆಯ ದೃಷ್ಟಿಯಿಂದ ಕುಡಿಯಲು ಮಾತ್ರ 2 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆಯೇ ಹೊರತು ಯಾವುದೇ ಬೆಳೆ ಬೆಳೆಯಲು ನೀರು ಕೊಟ್ಟಿಲ್ಲ' ಎಂದು ಸ್ಪಷ್ಟಪಡಿಸಿದರು.

ಬೇಸಿಗೆಯಲ್ಲಿ ನಮಗೆ ಸಮಸ್ಯೆಯಾಗಲ್ಲವೇ?: ಸಚಿವರ ಉತ್ತರ

ಈಗಲೇ ನೀರು ಬಿಟ್ಟರೆ ಮುಂಬರುವ ಬೇಸಿಗೆಯಲ್ಲಿ ರಾಜ್ಯದ ಜನರಿಗೆ ನೀರಿನ ಕೊರತೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಕೇವಲ 2 ಟಿಎಂಸಿ ನೀರನ್ನು ಮಾತ್ರ ಬಿಡಲಾಗುತ್ತಿದೆ. ಇದರಿಂದ ನಮ್ಮ ರಾಜ್ಯದ ಜನರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕುಡಿಯುವ ನೀರು ಮನುಷ್ಯನ ಜೀವನ್ಮರಣದ ಪ್ರಶ್ನೆ. ಅಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಬೆರೆಸುವುದು ಶೋಭೆಯಲ್ಲ' ಎಂದರು.

ರೈತ ಸಂಘಟನೆಗಳ ವಿರೋಧಕ್ಕೆ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ:

ತೆಲಂಗಾಣಕ್ಕೆ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಸಚಿವರು, 'ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಮಹಾರಾಷ್ಟ್ರದಿಂದ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ನೀರು ಬಿಡಿಸಿಕೊಳ್ಳಲು ಇದೇ ರೈತ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸುತ್ತವೆ. ಅಂದು ಮಹಾರಾಷ್ಟ್ರ ಮಾನವೀಯತೆ ತೋರಿ ನಮಗೆ ನೀರು ಕೊಟ್ಟಂತೆ, ಇಂದು ಸಂಕಷ್ಟದಲ್ಲಿರುವ ನೆರೆಯ ತೆಲಂಗಾಣಕ್ಕೆ ನೀರು ಕೊಡುವುದು ನಮ್ಮ ಕರ್ತವ್ಯ. ಆದ್ದರಿಂದ ರೈತರು ಈ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು" ಎಂದು ಮನವಿ ಮಾಡಿದರು.