ಬೆಂಗ್ಳೂರಲ್ಲಿ ಕಳೆದ 50 ವರ್ಷದಲ್ಲೇ ಅತೀ ತಣ್ಣನೆಯ ದಿನ ದಾಖಲು: ಗಾರ್ಡನ್‌ ಸಿಟಿ ಕೂಲ್‌ ಕೂಲ್‌..!

*  ಅರ್ಧ ಶತಮಾನದ ಮೇ ತಿಂಗಳ ತಣ್ಣನೆಯ ವಾತಾವರಣ ದಾಖಲು
*  ಗರಿಷ್ಠ ತಾಪಮಾನ 22.4 ಡಿಗ್ರಿ ಸೆಲ್ಸಿಯಸ್‌
*  ಮೇನಲ್ಲಿ ಸರಾಸರಿ ಉಷ್ಣಾಂಶ 21.3 ಡಿಗ್ರಿ
 

May 19th Coolest Day in the Last 50 Years in Bengaluru grg

ಬೆಂಗಳೂರು(ಮೇ.20):  ಮಂಗಳವಾರವಷ್ಟೇ ಶತಮಾನದ ಮಳೆ ಕಂಡಿದ್ದ ಬೆಂಗಳೂರು ಗುರುವಾರ ಅರ್ಧ ಶತಮಾನದಲ್ಲೇ ಅತ್ಯಂತ ತಣ್ಣನೆಯ ದಿನಕ್ಕೆ ಸಾಕ್ಷಿ ಆಯಿತು. ನಗರದ ದಿನದ ಗರಿಷ್ಠ ತಾಪಮಾನ 22.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು 50 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಗರಿಷ್ಠ ತಾಪಮಾನವಾಗಿದೆ.

1972ರ ಮೇ 14ಕ್ಕೆ 22.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿರುವುದು ಮೇ ತಿಂಗಳಲ್ಲಿನ ನಗರದ ಸಾರ್ವಕಾಲಿಕ ಕನಿಷ್ಠ ಗರಿಷ್ಠ ತಾಪಮಾನವಾಗಿದೆ. ಎರಡು ದಿನಗಳ ಹಿಂದೆ ಭಾರಿ ಮಳೆಯ ಸುಳಿಗೆ ಸಿಳುಕಿದ್ದ ಉದ್ಯಾನ ನಗರಿ ಅದರ ಪರಿಣಾಮವಾಗಿ ಕಳೆದ 50 ವರ್ಷಗಳ ಬಳಿಕದ ಎರಡನೇ ಕನಿಷ್ಠ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಿದೆ.

Bengaluru Rains: ಮಳೆ ಅವಾಂತರದಿಂದ ‘ಬ್ರ್ಯಾಂಡ್‌ ಬೆಂಗಳೂರಿಗೆ’ ಧಕ್ಕೆ: ಎಸ್‌.ಎಂ.ಕೃಷ್ಣ

ಏಳೆಂಟು ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಆಸಾನಿ ಚಂಡಮಾರುತದ ಪರಿಣಾಮವಾಗಿ ಮೇ 12ರಂದು 23 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣತೆ ದಾಖಲಾಗಿತ್ತು. ಈ ದಾಖಲೆ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಒಂದು ವಾರದಲ್ಲೇ ಕನಿಷ್ಠ ತಾಪಮಾನದ ಎರಡು ದಾಖಲೆಗಳು ನಿರ್ಮಾಣವಾದಂತೆ ಆಗಿದೆ.

ಮೇ ತಿಂಗಳಲ್ಲಿ ನಗರದ ಗರಿಷ್ಠ ತಾಪಮಾನ ಸರಾಸರಿ 33.3 ಡಿಗ್ರಿ ಸೆಲ್ಸಿಯಸ್‌ ಇದ್ದು, ವಾಡಿಕೆಗಿಂತ ಹತ್ತು ಹನ್ನೆರಡು ಡಿಗ್ರಿ ಉಷ್ಣತೆ ಕಡಿಮೆ ದಾಖಲಾಗಿದೆ. ಕಳೆದ ಹತ್ತು ದಿನಗಳಿಂದ ನಗರದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ನೊಳಗೆ ಬರುತ್ತಿದೆ.

ಗುರುವಾರ ನಗರದ ಕನಿಷ್ಠ ತಾಪಮಾನ 21.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ತನ್ಮೂಲಕ ಏರುಪೇರಿಲ್ಲದ ಹೆಚ್ಚು ಕಡಿಮೆ ಸಮಾನ ಉಷ್ಣಾಂಶ ದಿನವಿಡೀ ದಾಖಲಾಗಿತ್ತು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಪನಗಳು ಸೇರಿದಂತೆ ಹಲವು ಖಾಸಗಿ ಉಷ್ಣತಾ ಮಾಪನ ಸಂಸ್ಥೆಗಳ ಮಾಹಿತಿಯಂತೆ ನಗರದ ಬಹುತೇಕ ಕಡೆಗಳಲ್ಲಿ ದಿನದ ಗರಿಷ್ಠ ತಾಪಮಾನ 21ರಿಂದ 22 ಡಿಗ್ರಿ ಸೆಲ್ಸಿಯಸ್‌ನಷ್ಟೆದಾಖಲಾಗಿತ್ತು.

ಸಾಮಾನ್ಯವಾಗಿ ಕಡು ಬೇಸಗೆ ಇರುವ ಮೇ ತಿಂಗಳಲ್ಲಿ ಸುರಿದಿರುವ ಅಕಾಲಿಕ ಭಾರಿ ಮಳೆಯಿಂದಾಗಿ ಕೆಳ ಮಟ್ಟದಲ್ಲಿ ಸೃಷ್ಟಿಯಾಗಿರುವ ದಟ್ಟಮೋಡ, ತೇವಾಂಶ ಭರಿತ ಹವೆ ಮತ್ತು ಚಳಿಯ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಜನರು ಶ್ವೆಟರ್‌, ಜರ್ಕಿನ್‌ ಸೇರಿದಂತೆ ದಪ್ಪನೆಯ ಉಡುಗೆಗಳನ್ನು ಧರಿಸಿದ್ದರು.

ಬೆಂಗ್ಳೂರು ಮಳೆ ಮುನ್ಸೂಚನೆ ಇದ್ದರೂ ಕ್ಯಾರೇ ಎನ್ನದ ಸರ್ಕಾರ: ಎಚ್‌ಡಿಕೆ

ಹಗುರ ಮಳೆ

ಗುರುವಾರ ದಟ್ಟಮೋಡ ಕವಿದು ಇನ್ನೇನು ಭರ್ಜರಿ ಮಳೆ ಆಗಬಹುದೆಂಬ ವಾತಾವರಣ ದಿನವಿಡಿ ಇದ್ದರೂ ಹಗುರ ಮಳೆಯಷ್ಟೇ ಸುರಿದಿದೆ. ನಗರದ ಬಹುತೇಕ ಎಲ್ಲ ಭಾಗದಲ್ಲಿ ತುಂತುರು ಅಥವಾ ಹಗುರ ಮಳೆಯಾಗಿದೆ. ಸಂಪಂಗಿರಾಮ ನಗರ, ದಯಾನಂದ ನಗರ, ವಿದ್ಯಾಪೀಠ, ಪುಲಕೇಶಿ ನಗರ, ಆರ್‌ಆರ್‌ ನಗರ, ಬಿಳೇಕಹಳ್ಳಿ, ದೊಮ್ಮಲೂರು, ಸಾರಕ್ಕಿ, ಕೊಣನಕುಂಟೆ, ಅಂಜನಾಪುರ, ಚಾಮರಾಜಪೇಟೆ, ಹೂಡಿ, ಅರಕೆರೆ, ಕೋರಮಂಗಲ ಮುಂತಾದೆಡೆ ಸಾಧಾರಣ ಮಳೆಯಾಗಿದೆ.

ಇಂದು ಭಾರಿ ಮಳೆ ಸಾಧ್ಯತೆ

ಶುಕ್ರವಾರ ಗುಡುಗು, ಮಿಂಚು ಸಹಿತ ಭಾರಿ ಮಳೆಯ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹಳದಿ ಅಲರ್ಚ್‌ ನೀಡಿದೆ. ಶುಕ್ರವಾರವೂ ಮೋಡ ಕವಿದ ತಣ್ಣನೆಯ ವಾತಾವರಣ ಇರಲಿದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 

Latest Videos
Follow Us:
Download App:
  • android
  • ios