*   ಬೆಂಗಳೂರಿನ ಸುತ್ತಮುತ್ತಲಿನ ಬರೋಬ್ಬರಿ 154 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ*  2 ಸಾವಿರ ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಚಾಲನೆ*  ರಸ್ತೆಗಳ ಅಗಲೀಕರಣ, ಮೇಲ್ಸೇತುವೆ ವಿಸ್ತರಣೆಗೆ ಕ್ರಮ 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಏ.13):  ರಾಜಧಾನಿಯ ರಸ್ತೆಗಳ ಶೇ.20ರಷ್ಟು ಒತ್ತಡ ಕಡಿತಗೊಳಿಸುವ ಉದ್ದೇಶದಿಂದ ಬೆಂಗಳೂರಿನ(Bengaluru) ಸುತ್ತಮುತ್ತಲಿನ ಬರೋಬ್ಬರಿ 154 ಕಿ.ಮೀ. ಉದ್ದದ ವಿವಿಧ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ(Government of Karnataka) ಕಾರ್ಯೋನ್ಮುಖವಾಗಿದೆ.

ಮೈಸೂರು, ತುಮಕೂರು, ಹಾಸನ, ಆನೇಕಲ್‌, ಕನಕಪುರ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಅನಿವಾರ್ಯವಾಗಿ ನಗರ ಪ್ರವೇಶಿಸಬೇಕಿತ್ತು. ಇದರಿಂದ ನಗರದೊಳಗೆ ಟ್ರಾಫಿಕ್‌(Traffic) ಸಮಸ್ಯೆ ಉಂಟಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(KRDCL) ಮೂಲಕ 154 ಕಿ.ಮೀ ಉದ್ದದ ಬೆಂಗಳೂರು ‘ಸಪೋರ್ಟಿಂಗ್‌ ರಸ್ತೆ’ಗಳನ್ನು ಸುಮಾರು 2 ಸಾವಿರ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದೆ.

Bengaluru Traffic Congestion: 2021ರಲ್ಲಿ ಸಿಲಿಕಾನ್‌ ಸಿಟಿ ಸಂಚಾರ ದಟ್ಟಣೆ ಶೇ.32ರಷ್ಟು ಇಳಿಮುಖ: ವರದಿ

ಈ ಯೋಜನೆಯಡಿ ಯಾವುದೇ ಹೊಸ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ಈಗಿರುವ ರಾಜ್ಯ ಹೆದ್ದಾರಿ(State Highway) ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಎರಡು ಪಥದಿಂದ ನಾಲ್ಕು ಪಥಗಳಿಗೆ ವಿಸ್ತರಿಸುತ್ತಿದೆ. ಜತೆಗೆ ಈ ರಸ್ತೆಗಳು ಸಾಗುವ ಮಾರ್ಗದಲ್ಲಿ ಇರುವ ರೈಲ್ವೆ ಗೇಟ್‌ ಹಾಗೂ ಹಳ್ಳಿಗಳ ಬಳಿ ಎತ್ತರಿಸಿದ ರಸ್ತೆಗಳು, ಮೇಲ್ಸೇತುವೆ ಮತ್ತು ಅಂಡರ್‌ ಪಾಸ್‌ಗಳನ್ನು ನಿರ್ಮಿಸಿ ಸಿಗ್ನಲ್‌ ಫ್ರೀ ಕಾರಿಡಾರ್‌ಗಳಾಗಿ(Signal Free Corridor) ಅಭಿವೃದ್ಧಿ ಪಡಿಸಲಾಗಿತ್ತು. ಇದರಿಂದ ಕನಿಷ್ಠ ಪಕ್ಷ ಬೆಂಗಳೂರಿನ ಶೇ.20 ರಷ್ಟುಸಂಚಾರಿ ದಟ್ಟಣೆ ತಗ್ಗಲಿದೆ.

ಶೇ.50ರಷ್ಟು ಕಾಮಗಾರಿ ಪೂರ್ಣ:

ಈ ಸಂಬಂಧಿಸಿದಂತೆ ಮೂರು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕಾನೂನು ತೊಡಕುಗಳು ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸುವುದು ವಿಳಂಬವಾಗಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಶೇ.50 ರಷ್ಟು ಅಭಿವೃದ್ಧಿ ಕೆಲಸ ಪೂರ್ಣಗೊಂಡಿದೆ. ವಿದ್ಯುತ್‌ ಸಂಪರ್ಕ, ನೀರು ಕಾಲುವೆ, ಮರಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕೆಆರ್‌ಡಿಸಿಎಲ್‌ ಮುಖ್ಯ ಎಂಜಿನಿಯರ್‌ ಆರ್‌.ಪ್ರಸಾದ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಏರ್ಪೋರ್ಟ್‌ ಕೇಂದ್ರಿಕೃತ ಅಭಿವೃದ್ಧಿ:

ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು(Kempegowda International Airport) ದೇಶದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ದಿನಕ್ಕೆ ನೂರಾರು ವಿಮಾನಗಳಲ್ಲಿ ಇಲ್ಲಿಂದ ಕಾರ್ಯಾಚರಣೆ ನಡೆಸಲಿವೆ. ಲಕ್ಷಾಂತರ ಮಂದಿ ವಿಮಾನ ನಿಲ್ದಾಣ ಬಳಕೆ ಮಾಡುತ್ತಿದ್ದಾರೆ. ಸರಕು ಸಾಗಾಣಿಕೆ ಪ್ರಮಾಣವು ಹೆಚ್ಚಾಗಿದೆ. ಬೆಂಗಳೂರಿನಿಂದ ದುಬೈ ಸೇರಿದಂತೆ ಮೊದಲಾದ ರಾಷ್ಟ್ರಗಳಿಗೆ ಪ್ರತಿದಿನ ತರಕಾರಿ ಸೇರಿದಂತೆ ಇನ್ನಿತರೆ ವಸ್ತುಗಳು ಇಲ್ಲಿಂದ ರಫ್ತು ಮಾಡಲಾಗುತ್ತಿದೆ. ವಿಮಾನ ನಿಲ್ದಾಣದಿಂದ ರಾಜ್ಯದ ವಿವಿಧ ಭಾಗಗಳಿಗೆ ಸರಕು ಸಾಗಾಣಿಕೆಯ ಅನುಕೂಲಕ್ಕೆ ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

1.92 ಕಿ.ಮೀ. ಎಲಿವೇಟೆಡ್‌ ಕಾರಿಡಾರ್‌

ವರ್ತೂರು ಬಳಿ ಉಂಟಾಗುವ ಸಂಚಾರಿ ದಟ್ಟಣೆ ತಪ್ಪಿಸುವ ಉದ್ದೇಶದಿಂದ 1.92 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ ಅನ್ನು 182.76 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2024ರ ಜೂನ್‌ ವೇಳೆಗೆ ಪೂರ್ಣಗೊಳ್ಳಿಸಲು ಯೋಜನೆ ರೂಪಿಸಲಾಗಿದೆ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 587.20 ಕೋಟಿ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಗೊಲ್ಲಹಳ್ಳಿ, ರಾಜಾನುಕುಂಟೆ, ನಾರಾಯಣಪುರ, ಕಾಡುಗೋಡಿ ಬಳಿ ರೈಲ್ವೆ ಮೇಲ್ಸೇತುವೆ, ಬಸವನಹಳ್ಳಿ ಬಳಿ ರೈಲ್ವೆ ಅಂಡರ್‌ ಪಾಸ್‌, ದೊಮ್ಮಸಂದ್ರ, ವತೂರು ಕೋಡಿ ಸೇರಿದಂತೆ ಒಟ್ಟು ಮೂರು ಕಡೆ ಗ್ರೇಡ್‌ ಸಪರೇಟರ್‌ ನಿರ್ಮಾಣ ಮಾಡಲಾಗುತ್ತಿದೆ.

Flyover Construction Work: ಹುಬ್ಳೀಲಿ ಟ್ರಾಫಿಕ್‌ ಹೆಚ್ಚಿಸಿದ ಫ್ಲೈಓವರ್‌

ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ, ಸಂಚಾರಿ ದಟ್ಟಣೆ ಹೆಚ್ಚಾಗುತ್ತಿದೆ. ನಗರಕ್ಕೆ ಹೊಂದಿಕೊಂಡಿರುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಪಡಿಸುವ ಮೂಲಕ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಈ ಯೋಜನೆ ಸಹಕಾರಿಯಾಗಲಿದೆ ಅಂತ ಕೆಆರ್‌ಡಿಸಿಎಲ್‌ ಮುಖ್ಯ ಎಂಜಿನಿಯರ್‌ ಆರ್‌.ಪ್ರಸಾದ್‌ ತಿಳಿಸಿದ್ದಾರೆ. 

ರಸ್ತೆಗಳ ವಿವರ

ಪ್ಯಾಕೇಜ್‌ ರಸ್ತೆ ಉದ್ದ(ಕಿ.ಮೀ) ಮೊತ್ತ(ಕೋಟಿ ರು) ಎಲ್ಲಿಂದ ಎಲ್ಲಿಗೆ?
ಪ್ಯಾಕೇಜ್‌-1 20.11 154.01 ಬೂದಿಗೆರೆ ಕ್ರಾಸ್‌ನಿಂದ (ಎನ್‌ಎಚ್‌-4) ಏರ್ಪೋರ್ಚ್‌
ಪ್ಯಾಕೇಜ್‌-2(ಎ) 15.25 174.37 ನೆಲಮಂಗಲದಿಂದ ಮಧುರೆ
ಪ್ಯಾಕೇಜ್‌-2(ಬಿ) 23.99 190.19 ಮಧುರೆಯಿಂದ (ಎನ್‌ಎಚ್‌74) ದೇವನಹಳ್ಳಿ ರಸ್ತೆ(ಎನ್‌ಎಚ್‌7)
ಪ್ಯಾಕೇಜ್‌-3(ಎ) 33.20 151.29 ಬಿಡದಿಯಿಂದ ಜಿಗಣಿ
ಪ್ಯಾಕೇಜ್‌-3(ಬಿ) 22.98 154.48 ಬನ್ನೇರುಘಟ್ಟದಿಂದ ಆನೇಕಲ್‌ ಬಳಿಯ ಬೆಸ್ತಮಾನಹಳ್ಳಿ
ಪ್ಯಾಕೇಜ್‌-4(ಎ) 39.28 204.1 ಬೆಸ್ತಮಾನಹಳ್ಳಿ(ಎಸ್‌ಎಚ್‌-35) ಹೊಸಕೋಟೆ