Asianet Suvarna News Asianet Suvarna News

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳನ್ನು ಬಲಿಪಡೆಯುತ್ತಿದೆ ಚರ್ಮಗಂಟು ರೋಗ

ರೈತರ ಪಾಲಿಗೆ ವರದಾನವಾಗಿರುವ ಜಾನುವಾರುಗಳಲ್ಲಿ ಇದೀಗ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಮೈ ಮೇಲೆ ಗುಳ್ಳೆಗಳಂತೆ ಕಾಣಿಸಿಕೊಳ್ಳುವ ರೋಗ ಜಾನುವಾರುಗಳಲ್ಲಿ ಹರಡುತ್ತದಲ್ಲದೇ, ಅವುಗಳು ನರಳಿ ನರಳಿ ಸಾಯುವಂತೆ ಮಾಡುತ್ತದೆ. 

lumpy skin disease kills many cattle in uttara kannada district gvd
Author
First Published Dec 15, 2022, 9:12 AM IST

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಡಿ.15): ರೈತರ ಪಾಲಿಗೆ ವರದಾನವಾಗಿರುವ ಜಾನುವಾರುಗಳಲ್ಲಿ ಇದೀಗ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಮೈ ಮೇಲೆ ಗುಳ್ಳೆಗಳಂತೆ ಕಾಣಿಸಿಕೊಳ್ಳುವ ರೋಗ ಜಾನುವಾರುಗಳಲ್ಲಿ ಹರಡುತ್ತದಲ್ಲದೇ, ಅವುಗಳು ನರಳಿ ನರಳಿ ಸಾಯುವಂತೆ ಮಾಡುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಈ ರೋಗ ಹರಡುತ್ತಿದ್ದು, ಹಲವು ಜಾನುವಾರುಗಳನ್ನು ಬಲಿಪಡೆದುಕೊಂಡಿದೆ. ಆದರೆ, ವೈದ್ಯರು, ಸಿಬ್ಬಂದಿ ಹಾಗೂ ಸೌಕರ್ಯಗಳ ಕೊರತೆಯಿಂದಾಗಿ ಕೃಷಿಕರು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗದೆ ಕಣ್ಣೆದುರೇ ಇವುಗಳು ನರಳುತ್ತಿರುವುದು ನೋಡಿ ಕಣ್ಣೀರಿಡುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. 

ಹೌದು! ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗುತ್ತಿವೆ. ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ವೈರಲ್ ಇನ್ಫೆಕ್ಷನ್ ಇದಾಗಿದ್ದು, ವಿವಿಧ ರೀತಿಯಲ್ಲಿ ಜಾನುವಾರುಗಳನ್ನು ಕಾಡುತ್ತವೆ. ಮೂಲತಃ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್, ಕ್ರಮೇಣ ಪ್ರಪಂಚದ ವಿವಿಧೆಡೆ ಹಬ್ಬಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳು ಈ ವೈರಸ್‌ಗೆ ತುತ್ತಾಗುತ್ತಿದ್ದು, ಈಗಾಗಲೇ 76ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಇತ್ತೀಚೆಗೆ ಕರಾವಳಿ ಭಾಗದಲ್ಲಿ ಭಟ್ಕಳದಲ್ಲಿ ಒಂದು‌ ಪ್ರಕರಣ ಕಾಣಿಸಿದ ಬಳಿಕ ಹೊನ್ನಾವರ ತಾಲೂಕಿನಲ್ಲಂತೂ ಸಾಕಷ್ಟು ಹಬ್ಬಿತ್ತು.

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಚರ್ಮಗಂಟು ರೋಗ ಉಲ್ಬಣ

ಇತ್ತೀಚೆಗೆ ಸಾಲ್ಕೋಡು ಪಂಚಾಯತ್‌ನಲ್ಲೂ 2-3 ಆಕಳುಗಳು ಸಾವಿಗೀಡಾಗಿವೆ. ಈ ಪ್ರಕರಣಗಳಿಂದಾಗಿ ಇದೀಗ ಜಾನುವಾರುಗಳನ್ನು ಸಾಕುವವರು ಹಾಗೂ ಇದರಿಂದಲೇ ತಮ್ಮ ಸಾಗಿಸುತ್ತಿರುವವರು ಆತಂಕಕ್ಕೀಡಾಗಿದ್ದಾರೆ. ಈ ಬಗ್ಗೆ ಹೊನ್ನಾವರ ಕಲವಕ್ಕಿ ನಿವಾಸಿಗಳು ಮಾತನಾಡಿ, ನಾವು ಸುಮಾರು150 ಜಾನುವಾರುಗಳನ್ನು ಸಾಕುತ್ತಿದ್ದು, 3-4 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಒಂದರಿಂದ ಇನ್ನೊಂದಕ್ಕೆ ಹರಡುವ ಕಾರಣ ಇವುಗಳನ್ನು ಬೇರೆಯೇ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಜನರು ಇವುಗಳ ಹಾಲು ಸೇವಿಸುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅದರೆ, ಸರಕಾರ ಈ ಬಗ್ಗೆ ಎಚ್ಚರಿಕೆ ವಹಿಸಿ ಎಲ್ಲರಿಗೂ ಲಸಿಕೆ ನೀಡಬೇಕು. 

ಜಿಲ್ಲೆಯಲ್ಲಿ ಪಶು ಚಿಕಿತ್ಸಾಲಯದಲ್ಲಿ ಸಿಬ್ಬಂದಿಗಳಿಲ್ಲ, ಆ್ಯಂಬುಲೆನ್ಸ್ ಕೂಡಾ ಓಡಾಡ್ತಿಲ್ಲ. ನಾವೇ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಹಾಗೂ ಆಯುರ್ವೇದಿಕೆ ಔಷಧಿ ಪಡೆದು ಚಿಕಿತ್ಸೆ ನೀಡುತ್ತಿದ್ದೇವೆ ಅಂತಾರೆ ಸ್ಥಳೀಯರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿರುವುದರಿಂದ ರೈತರು, ಕೃಷಿಕರು ಹೆಚ್ಚು ಆತಂಕಿತರಾಗಿದ್ದಾರೆ. ಪಶು ವೈದ್ಯರಿಗೆ ಕರೆ ಮಾಡಿ ಅವರು ಸೂಚಿಸಿದ ಔಷಧಿಗಳನ್ನು ನೀಡುವುದರ ಜತೆಗೆ ವನಸ್ಪತಿ ಎಣ್ಣೆ, ಜಾನುವಾರುಗಳ ಮೈಗೆ ಕೀಟಗಳು ಬಾರದಂತೆ ಕಹಿಬೇವು ನುಗ್ಗೆಸೊಪ್ಪಿನ ಹೊಗೆ ಮುಂತಾದವುಗಳನ್ನು ಕೂಡಾ ಬಳಸಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, 76 ಜಾನುವಾರುಗಳು ತೀರಿಹೋಗಿವೆ. ಈಗಾಗಲೇ 50 ಜಾನುವಾರುಗಳಿಗೆ ಹಣ ಬಿಡುಗಡೆ ಮಾಡುವ ಕೆಲಸಗಳಾಗಿವೆ. ಇನ್ನು 26 ಜಾನುವಾರುಗಳಿಗೆ ಹಣ ಬಿಡುಗಡೆ ಮಾಡಬೇಕಿದ್ದು, ಪ್ರಸ್ತಾಪ ಕಳಿಸುತ್ತೇವೆ. ಜಾನುವಾರುಗಳಿಗೆ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಲಾಗಿದ್ರೂ, ವೈದ್ಯರ ಕೊರತೆಯಿಂದಾಗಿ ಆಗಿಲ್ಲ. ಜಿಲ್ಲೆಗೆ 13 ಆ್ಯಂಬುಲೆನ್ಸ್‌ಗಳನ್ನು ಕೊಡಲಾಗಿದ್ದು,  ಇದನ್ನು ಕೂಡಾ ಈ ತಿಂಗಳೊಳಗೆ ಕಾರ್ಯರೂಪಕ್ಕೆ ತರಲು ಆದೇಶ ನೀಡಲಾಗಿದೆ. 

ಕೊರಟಗೆರೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ: ರೈತರಲ್ಲಿ ಆತಂಕ

ಆ್ಯಂಬುಲೆನ್ಸ್‌ಗೆ ಸಿಬ್ಬಂದಿ ಕೊರತೆಯಿದ್ದು, ಈ ತಿಂಗಳೊಳಗೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಜಾನುವಾರುಗಳಿಗೆ ಹಬ್ಬಿರುವ ಚರ್ಮಗಂಟು ರೋಗ ಸಾಕಷ್ಟು ಬಲಿ ತೆಗೆದುಕೊಂಡಿದ್ದು, ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಪ್ರತೀ ಜಾನುವಾರುಗಳಿಗೆ ಕ್ಲಪ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಜಾನುವಾರುಗಳ ಹಾಗೂ ಕೃಷಿಕರ, ರೈತರ ಜೀವನಕ್ಕೂ ಇದು ಕಂಟಕವಾಗುವುದರಲ್ಲಿ ಎರಡು ಮಾತಿಲ್ಲ.

Follow Us:
Download App:
  • android
  • ios