ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಬಳಿ ತುಂಗಭದ್ರಾ ನದಿಯಲ್ಲಿ ಮೀನುಗಾರರ ಬಲೆಗೆ 32 ಕೆಜಿ ತೂಕದ, ಎರಡು ಮೀಟರ್ ಉದ್ದದ ಬೃಹತ್ ಹದ್ದು ಮೀನು ಸಿಕ್ಕಿದೆ. ಈ ಅಪರೂಪದ ಮೀನನ್ನು ನೋಡಲು ಜನರು ಮುಗಿಬಿದ್ದಿದ್ದು, ಇದು ಸ್ಥಳೀಯರಲ್ಲಿ ನದಿಯ ಜೀವವೈವಿಧ್ಯದ ಬಗ್ಗೆ ಕುತೂಹಲ ಮೂಡಿಸಿದೆ.
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಸಮೀಪದ ತುಂಗಭದ್ರಾ ನದಿಯಲ್ಲಿ ಮೀನುಗಾರರ ಬಲೆಗೆ ಅಪರೂಪದ ಹಾಗೂ ಬೃಹದಾಕಾರದ ಹದ್ದು ಜಾತಿಯ ಮೀನು ಸಿಕ್ಕಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಭದ್ರಾವತಿ ಮೂಲದ ಮೀನುಗಾರರು ತುಂಗಭದ್ರಾ ನದಿಯಲ್ಲಿ ನಿಯಮಿತವಾಗಿ ಮೀನುಗಾರಿಕೆ ನಡೆಸುವ ವೇಳೆ, ಅವರ ಗಾಳ ಮತ್ತು ಬಲೆಗೆ ಸುಮಾರು 32 ಕೆಜಿ ತೂಕದ, ಎರಡು ಮೀಟರ್ ಉದ್ದದ ಹದ್ದು ಮೀನು ಸಿಕ್ಕಿದೆ. ಸಾಮಾನ್ಯವಾಗಿ ಈ ಗಾತ್ರದ ಹದ್ದು ಮೀನು ಅಪರೂಪವಾಗಿರುವುದರಿಂದ, ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.
ಮೀನು ಮಾರಾಟ, ಜನರ ಕೌತುಕ
ಮೀನುಗಾರರು ಈ ಬೃಹತ್ ಮೀನನ್ನು ಸಾಸ್ವೆಹಳ್ಳಿಯ ಯಕ್ವಾಲ್ ಎಂಬ ಸ್ಥಳೀಯ ಮೀನು ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ. ಪ್ರತಿ ಕೆಜಿಗೆ 400 ರೂ. ದರದಂತೆ, ಒಟ್ಟು 12,800 ರೂ.ಗೆ ಈ ಮೀನು ಮಾರಾಟವಾಗಿದೆ ಎಂದು ತಿಳಿದುಬಂದಿದೆ.
ವ್ಯಾಪಾರಿ ಅಂಗಡಿ ಮುಂದೆ ಜನರ ದಂಡು
ಬೃಹದಾಕಾರದ ಹದ್ದು ಮೀನನ್ನು ನೋಡಲು ಮೀನು ವ್ಯಾಪಾರಿ ಅಂಗಡಿ ಎದುರು ಜನರ ದಂಡೇ ಜಮಾಯಿಸಿತು. ಇಷ್ಟೊಂದು ದೊಡ್ಡ ಮೀನು ತುಂಗಭದ್ರಾ ನದಿಯಲ್ಲಿ ಸಿಕ್ಕಿರುವ ಸುದ್ದಿ ಕ್ಷಿಪ್ರವಾಗಿ ಹರಡಿದ ಪರಿಣಾಮ, ಸ್ಥಳೀಯರು ಹಾಗೂ ದೂರದ ಊರಿನ ಜನರೂ ಕೂಡ ಮೀನನ್ನು ನೋಡಲು ಆಗಮಿಸಿದರು. ಕೆಲವರು ಮೀನಿನ ಜೊತೆಗೆ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳುವುದಲ್ಲೂ ನಿರತರಾಗಿದ್ದರು.
ಸ್ಥಳೀಯರಲ್ಲಿ ಕುತೂಹಲ
ತುಂಗಭದ್ರಾ ನದಿಯಲ್ಲಿ ಈ ರೀತಿಯ ಬೃಹದಾಕಾರದ ಮೀನು ಸಿಕ್ಕಿರುವುದು ಅಪರೂಪವಾಗಿದ್ದು, ಇದರಿಂದಾಗಿ ಮೀನುಗಾರಿಕೆ ಹಾಗೂ ನದಿ ಜೀವಜಾಲದ ಕುರಿತು ಚರ್ಚೆ ಆರಂಭವಾಗಿದೆ. ಇಂತಹ ಅಪರೂಪದ ಮೀನುಗಳು ಇನ್ನು ಕೂಡ ಇರಬಹುದು ಎಂಬ ಕುತೂಹಲ ಸ್ಥಳೀಯರಲ್ಲಿ ಮೂಡಿದೆ.


