ನಿಷೇಧದ ಮಧ್ಯೆಯೂ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ: ಲಘು ಲಾಠಿ ಪ್ರಹಾರ
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಸಾಮೂಹಿಕ ಪ್ರಾರ್ಥನೆ ವದಂತಿ| ಮಸೀದಿ ಬಳಿಯ ಸಿಹಿ ತಿನಿಸುಗಳ ಅಂಗಡಿ ತೆರವು ಮಾಡಲು ಲಘು ಲಾಠಿ ಪ್ರಹಾರ| ಗುಂಪು ಗುಂಪಾಗಿ ಹಣ್ಣುಗಳ ಮಾರಾಟ ಉಲ್ಲಂಘನೆ| ಮಸೀದಿಯಲ್ಲಿ 100ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆಂಬ ವದಂತಿ| ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ 5 ಜನ ಮಾತ್ರ ಇದ್ದರು|
ಗಂಗಾವತಿ(ಏ.27): ರಂಜಾನ್ ಹಬ್ಬದ ನಿಮಿತ್ತ ಇಸ್ಲಾಂಪುರದ ಜಾಮೀಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬ ವದಂತಿಯಿಂದಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಸೀದಿ ಮುಂದಿನ ಭಾಗದಲ್ಲಿ ಸಿಹಿ ತಿನಿಸುಗಳು ಮತ್ತು ಹಣ್ಣು ಹಂಪಲಗಳನ್ನು ಮಾರಾಟ ಮಾಡುತ್ತಿರುವವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ರಂಜಾನ್ ಹಬ್ಬದ ನಿಮಿತ್ತ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಸೇರಿ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂದು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಭಾನುವಾರ ಸಂಜೆ ಇಸ್ಲಾಂಪುರದಲ್ಲಿರುವ ಜಾಮೀಯ ಮಸೀದಿಯಲ್ಲಿ 100ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆಂಬ ವದಂತಿ ಕೇಳಿ ಬಂದಿತು. ಆದರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ 5 ಜನ ಮಾತ್ರ ಇದ್ದರು. ನಾಲ್ಕು ಜನಕ್ಕಿಂತ ಹೆಚ್ಚಿಗೆ ಇರಬಾರದೆಂದು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದರು.
ಹಸಿರು ವಲಯದ ಯುವಕನಿಂದ ರೆಡ್ ಝೋನ್ ಯುವತಿಯೊಂದಿಗೆ ಮದುವೆ: ಹೆಚ್ಚಿದ ಆತಂಕ
ಲಾಕ್‌ಡೌನ್ ಉಲ್ಲಂಘನೆ:
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಇದ್ದರೂ ಸಿಹಿ ತಿನಿಸು ಮತ್ತು ಹಣ್ಣು ಮಾರಾಟ ಮಾಡುತ್ತಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈಗಾಗಲೇ ಸರಕಾರದ ಆದೇಶದ ಮೇರೆಗೆ ನಗರದಲ್ಲಿ ಕೆಲವೊಂದು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ, ಗುಂಪು ಗುಂಪಾಗಿ ಹಣ್ಣುಗಳ ಮಾರಾಟ ಮಾಡುತ್ತಿರುವುದು ಉಲ್ಲಂಘನೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದರು.
ಗಂಗಾವತಿ ನಗರದ ಜಾಮೀಯ ಮಸೀದಿ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದರು. ಆದರೆ, ಕೇವಲ ಐದು ಜನರು ಇದ್ದುದರಿಂದ ಅದರಲ್ಲಿ ಒಬ್ಬರನ್ನು ಹೊರಗೆ ಕಳಿಸಿಕೊಡಲಾಯಿತು. ಮಸೀದಿ ಹೊರಗೆ ಹಣ್ಣುಗಳ ಮಾರಾಟಗಾರರನ್ನು ಚದುರಿಸಿ ಎಚ್ಚರಿಕೆ ನೀಡಲಾಯಿತು ಎಂದು ನಗರ ಪೊಲೀಸ್ ಠಾಣೆಯ ಪಿ.ಐ. ವೆಂಕಟಸ್ವಾಮಿ ಅವರು ಹೇಳಿದ್ದಾರೆ.